Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಶ್ವದಲ್ಲೇ ಮೊದಲ ಬಾರಿಗೆ ಬಸವ ಜಯಂತಿ ಆಚರಿಸಿದ ಹೆಗ್ಗಳಿಕೆ ದಾವಣಗೆರೆ ವಿರಕ್ತಮಠ : ಶ್ರೀ ಬಸವಪ್ರಭು ಸ್ವಾಮೀಜಿ ಅವರ ವಿಶೇಷ ಲೇಖನ

Facebook
Twitter
Telegram
WhatsApp

ನಾಡಿಗೆ ಪ್ರಜಾಪ್ರಭುತ್ವ ಕಲ್ಪನೆ ಕೊಟ್ಟು,ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾ ಮಾನವತಾವಾದಿ ಜಗಜ್ಯೋತಿ ಬಸವಣ್ಣನ ಚಿಂತನೆ ಇಂದು ವಿಶ್ವದಾದ್ಯಂತ ಪಸರಿಸಿದೆ.

 

ಒಂಬೈನೂರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ
ಇಂಗಳೇಶ್ವರದಲ್ಲಿ ಜನಿಸಿದ ಬಸವಣ್ಣ, ವೈಚಾರಿಕ ಕ್ರಾಂತಿಯನ್ನು ಮನೆಯಿಂದಲೇ ಆರಂಭಿಸಿದ ಕ್ರಾಂತಿಪುರುಷ.

ವಿಶ್ವದ ಶ್ರೇಷ್ಠ ದಾರ್ಶನಿಕ , ಮಹಾನ್
ಮಾನವತಾವಾದಿ , ಕ್ರಾಂತಿಯೋಗಿ , ಮಹಾತ್ಮನೆಂದು ಇಡೀ ವಿಶ್ವವೇ ಈಗ ಕೊಂಡಾಡುತ್ತಿದೆ.

ಪ್ರಜಾತಾಂತ್ರಿಕ ವ್ಯವಸ್ಥೆಯ ಇಂದಿನ ಸಂಸತ್ ಗೆ ಮಾದರಿ ಎಂಬಂತೆ 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿ
ಸಾಮಾಜಿಕ , ಧಾರ್ಮಿಕ ಸಮಾನತೆಗೆ ಶ್ರಮಿಸಿದ ಬಸವಣ್ಣನವರ ಜನ್ಮದಿನವನ್ನು
ಸರ್ಕಾರದ ವತಿಯಿಂದ ಆಚರಿಸುವ ಜೊತೆಗೆ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಲಂಡನ್ ನ  ಥೇಮ್ಸ್ ನದಿಯ ದಂಡೆಯ ಮೇಲೂ ಬಸವಣ್ಣನ ಪ್ರತಿಮೆ  ನಿರ್ಮಾಣವಾಗಿ  ಅಲ್ಲಿಯೂ ಬಸವ ಜಯಂತಿ ಆಚರಿಸುವ ಕಾರ್ಯ ಶುರುವಾಗಿದೆ. ಈ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ
ಜಯಂತಿಯನ್ನು ವಿಶ್ವದಲ್ಲೇ ಮೊದಲ ಬಾರಿಗೆ ಪ್ರಾರಂಭಿಸಿದ ಕೀರ್ತಿ ದಾವಣಗೆರೆಯ ವಿರಕ್ತಮಠಕ್ಕೆ ಸಲ್ಲುತ್ತದೆ.

ಶೂನ್ಯಪೀಠ ಪರಂಪರೆಯ ಚಿತ್ರದುರ್ಗ
ಮುರುಘಾ ಮಠದ  ಶಾಖಾ ಮಠವಾದ ವಿರಕ್ತಮಠಕ್ಕೂ ಶತಮಾನಗಳ ಇತಿಹಾಸವಿದೆ. ಈ ಮಠದಲ್ಲಿ ದೇಶ ಕಂಡ ಮೊದಲ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣನವರ ಜಯಂತಿಯನ್ನು 1913ರಲ್ಲಿ ಮೊದಲ ಬಾರಿ ಆಚರಿಸಲಾಯಿತು.

‘ಕರ್ನಾಟಕದ ಗಾಂಧಿ’ ಎಂದೇ ಪ್ರಸಿದ್ಧರಾಗಿದ್ದ ಹರ್ಡೇಕರ್ ಮಂಜಪ್ಪ ಅವರು ‘ಧನುರ್ಧಾರಿ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಸ್ವಾತಂತ್ರ್ಯ ಚಳುವಳಿಗೆ ತರುಣರನ್ನು ಸಂಘಟಿಸುವ ಕಾರ್ಯದಲ್ಲಿರುತ್ತಾರೆ . ಒಂದು ಸಲ ಜಿನ್ನಿಂಗ್ ಫ್ಯಾಕ್ಟರಿಯ ಕೆಲಸದ ಮೇಲೆ ಮಂಜಪ್ಪನವರು ಬಾಂಬೆಗೆ ಹೋಗುತ್ತಾರೆ. ವಾರಗಳ ಕಾಲ ಅಲ್ಲಿಯೇ ಇರಬೇಕಾಗುತ್ತದೆ. ಸಂಜೆಯ ಸಮಯದಲ್ಲಿ ಅಲ್ಲಿಯ ಆರ್ಯ ಸಮಾಜಕ್ಕೆ ಭೇಟಿ
ನೀಡುತ್ತಾರೆ. ಪ್ರಾರ್ಥನೆ , ಭಜನೆ ನಡೆಯುತ್ತಿರುವುದನ್ನು ನೋಡಿ, ಅವರಿಗೆ ನಮ್ಮ ಮಠಗಳಲ್ಲಿಯೂ ಪ್ರಾರ್ಥನೆ , ಭಜನೆ  ಆರಂಭಿಸಬೇಕೆಂಬ ವಿಚಾರ ಹೊಳೆಯುತ್ತದೆ.

ದಾವಣಗೆರೆಗೆ ಬಂದ ತಕ್ಷಣವೇ ಹಿರಿಯ
ಸಂಗೀತ ಶಿಕ್ಷಕ ನಿಡಗುಂದಿ ಮಡಿವಾಳಪ್ಪ
ಅವರನ್ನು ಮಂಜಪ್ಪ ನವರು ಭೇಟಿ ಮಾಡಿ , ನಮ್ಮ ಮಠಗಳಲ್ಲಿ ಭಜನೆ , ಪ್ರಾರ್ಥನೆ ನಡೆಯಬೇಕೆಂದು ಕೇಳುತ್ತಾರೆ. ಮಡಿವಾಳಪ್ಪನವರು ದಾವಣಗೆರೆಯ ಪಟ್ಟಣದಲ್ಲಿ ವಿರಕ್ತಮಠವಿದೆ. ಆ ಮಠಕ್ಕೆ ಮೃತ್ಯುಂಜಯ ಅಪ್ಪಗಳು ಮಠಾಧೀಶರಾಗಿದ್ದಾರೆ.ಅವರು ಭಜನಾಪ್ರಿಯರು ನೀವು ಹೋಗಿ ಬಿನ್ನಹಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ.

ಹರ್ಡೇಕರ್ ಮಂಜಪ್ಪ ಅವರು ನೇರವಾಗಿ ವಿರಕ್ತಮಠಕ್ಕೆ ಬಂದು ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳನ್ನು ದರ್ಶನ ಮಾಡಿ ಈ ವಿಚಾರವನ್ನು ಪ್ರಸ್ತಾಪಿಸುತ್ತಾರೆ.

 

ಮೃತ್ಯುಂಜಯ ಅಪ್ಪಗಳು ಅಂದಿನ ಮುರುಘಾಮಠದ ಜಗದ್ಗುರುಗಳಾದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರೊಂದಿಗೆ ಚರ್ಚಿಸಿ ಅವರ ಮಾರ್ಗದರ್ಶನದಲ್ಲಿ 1911ರ ಜೂನ್ 26 ರಂದು ಭಜನಾ ಸಂಘವನ್ನು ಸ್ಥಾಪಿಸಿ ಪ್ರತಿ ಸೋಮವಾರ ಮಠದಲ್ಲಿ ಭಜನೆ ಪ್ರಾರಂಭಿಸುತ್ತಾರೆ. ಬಸವಣ್ಣನವರ ವಚನಗಳು, ಶರಣರ ಅನುಭಾವ ಗೀತೆಗಳ ಭಜನೆ ಶುರುವಾಗುತ್ತದೆ. ನಂತರ ಶ್ರಾವಣ ಮಾಸ ಬರುತ್ತದೆ ಪ್ರತಿ ದಿನವೂ ಒಬ್ಬೊಬ್ಬ ಶರಣರ ಚರಿತ್ರೆಯನ್ನು  ತಿಳಿಸುವ ಕಾರ್ಯವನ್ನು 1911 ರಲ್ಲಿ ‘ಶ್ರಾವಣ ಮಾಸೋಪನ್ಯಾಸ ಮಾಲೆ’ ಎಂದು ಒಂದು ತಿಂಗಳ ಕಾಲ ಪ್ರವಚನ ಕಾರ್ಯಕ್ರಮವನ್ನು ಮಂಜಪ್ಪ ಅವರು ಶ್ರೀಮಠದಲ್ಲಿ ಪ್ರಾರಂಭಿಸುತ್ತಾರೆ. ಅವರಿಗೆ ಶ್ರೀಮಠದ ಭಕ್ತರಾದ ಕಂಚಿಕೆರೆ ಮಹಾಲಿಂಗಪ್ಪ ಅವರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ವಿಚಾರಗಳನ್ನು ತಿಳಿಸುತ್ತಾರೆ.

ಬಸವಣ್ಣನವರ ವಚನಗಳನ್ನು ಓದಿ ಪ್ರಭಾವಿತರಾದ ಮಂಜಪ್ಪನವರಿಗೆ ಬಸವಣ್ಣನವರ ಜಯಂತಿಯನ್ನು ಪ್ರಾರಂಭಿಸಬೇಕೆಂಬ ಚಿಂತನೆಬರುತ್ತದೆ. ಹಿಂದುಗಳು ರಾಮನವಮಿ ಮಾಡುವಂತೆ  “ಬಸವಜಯಂತಿ” ಪ್ರಾರಂಭಿಸಬೇಕೆಂದು ಮಂಜಪ್ಪ ಅವರು, ಮೃತ್ಯುಂಜಯ ಅಪ್ಪಗಳು , ಶ್ರೀ ಜಯದೇವ ಜಗದ್ಗುರುಗಳೊಂದಿಗೆ ಚರ್ಚಿಸಿ, ದಾವಣಗೆರೆ ವಿರಕ್ತಮಠದಲ್ಲಿ 1913 ರಲ್ಲಿ ಬಸವಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸಲು ಪ್ರಾರಂಭಿಸಿದರು.

ನಂತರ ಮೈಸೂರಿನ ಎನ್.ಆರ್. ಕರಿಬಸವ ಶಾಸ್ತ್ರಿಗಳಿಗೆ ಮಂಜಪ್ಪನವರು ಪತ್ರ ಬರೆದು, ಬಸವಣ್ಣನವರ ಜನ್ಮದಿನ ಎಂದು ತಿಳಿಸುವಂತೆ ಕೇಳುತ್ತಾರೆ.

ಅವರು ಬಸವಪುರಾಣ, ಬಸವರಾಜದೇವರ ರಗಳೆಗಳನ್ನು ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಒಂದು ಶ್ಲೋಕವನ್ನು ಬರೆದು ಕಳಿಸುತ್ತಾರೆ. ಆ ಶ್ಲೋಕದ ಅರ್ಥವನ್ನು ಹರಪನಹಳ್ಳಿಯ ಶಾಂತಪ್ಪಾಜಿ ಅವರು, ಅಕ್ಷಯ ತೃತೀಯ ದಿನ ವೈಶಾಖ ಶುದ್ಧ ನಾಲ್ಕನೇ ರೋಹಿಣಿ ನಕ್ಷತ್ರದಂದು ಬಸವಣ್ಣನ ಜನನವಾಗಿದೆ  ಎಂದು ಮಾಹಿತಿ ನೀಡುತ್ತಾರೆ.

1914 ರಿಂದ ನಕ್ಷತ್ರದ ಆಧಾರದ ಮೇಲೆಯೇ ಬಸವಜಯಂತಿ ಆಚರಣೆ ಪ್ರಾರಂಭವಾಯಿತು. ಆಗಿನ ‘ಮೈಸೂರು ಸ್ಟಾರ್’ ಪತ್ರಿಕೆಗೆ ಪ್ರಕಟಣೆಯನ್ನು ಕಳುಹಿಸುತ್ತಿದ್ದರು, ಅದನ್ನು ಓದಿ ಅರಿತುಕೊಂಡ ನಾಡಿನ ಜನರು ಅದೇ ದಿವಸ ಬಸವ ಜಯಂತಿ ಆಚರಿಸುವ ಪರಿಪಾಠ ಬೆಳೆಯಿತು.

ಅಂದು ದಾವಣಗೆರೆಯಲ್ಲಿ ನೆಟ್ಟ ಬಸವಜಯಂತಿ ಆಚರಣೆಯ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ಕನ್ನಡ ನಾಡಿನ ಮಹತ್ವಪೂರ್ಣ
ಸಾಂಸ್ಕೃತಿಕ ಉತ್ಸವವಾಗಿ ಇದನ್ನು ಆಚರಿಸಲಾಗುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾ, ಬಸವಕೇಂದ್ರ , ಬಸವ ಸಮಿತಿ , ಬಸವತತ್ವ ಪ್ರಚಾರ ಸಂಸ್ಥೆಗಳು , ಮಠ ಮಾನ್ಯಗಳು , ವಿವಿಧ ಸಾಮಾಜಿಕ ಸಂಘಟನೆಗಳು ಇದನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳುತ್ತಾ ಬಂದಿವೆ.

ಚಿತ್ರದುರ್ಗ ಮುರುಘಾ ಮಠದ ಜಗದ್ಗುರುಗಳಾದ ಶ್ರೀ ಜಯದೇವ , ಶ್ರೀ ಜಯವಿಭವ , ಶ್ರೀ ಮಲ್ಲಿಕಾರ್ಜುನ , ಶ್ರೀ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ದಾವಣಗೆರೆ ಭಕ್ತರ ಸೇವೆ , ಸಹಕಾರದಿಂದ ಯಶಸ್ವಿಯಾಗಿ ಜಯಂತ್ಯೋತ್ಸವ ಹಾಗೂ ಸಮಾಜಮುಖಿ ಕಾರ್ಯಗಳು ಮುನ್ನಡೆಯುತ್ತಿವೆ.

ಶರಣ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯವು ನಾಡಿಗೆ ಮಾದರಿಯಾಗಿದೆ.

 

***ಬಾಕ್ಸ್*ತಿಲಕರ ಗಣೇಶ ಹಬ್ಬ ಸ್ಫೂರ್ತಿ

ಸ್ವಾತಂತ್ರ್ಯ ಚಳವಳಿ ಮತ್ತು ಧಾರ್ಮಿಕ ಸಂಘಟನೆ ಹಿನ್ನೆಲೆಯಲ್ಲಿ ಯುವ ಪೀಳಿಗೆಗಾಗಿ 1917 ರಲ್ಲಿ ಲಿಂಗಾಯತ (ವೀರಶೈವ) ತರುಣ ಸಂಘವನ್ನು ಹರ್ಡೇಕರ್ ಮಂಜಪ್ಪ  ಸ್ಥಾಪಿಸಿದರು. ಬಾಲಗಂಗಾಧರ
ತಿಲಕರು ಮಹಾರಾಷ್ಟ್ರದಲ್ಲಿ ಗಣೇಶನ ಹಬ್ಬ ಸಂಘಟಿಸಿದಂತೆ ‘ಬಸವ ಪ್ರಭಾತ್ ಫೇರಿ’ ಯನ್ನು ಮಂಜಪ್ಪ ಅವರು ಪ್ರಾರಂಭಿಸಿ ಸರ್ವ ಜನಾಂಗದವರನ್ನು ಕರೆದುಕೊಂಡು ಬಸವತತ್ವ ಮತ್ತು ರಾಷ್ಟ್ರಧರ್ಮವನ್ನು ಪ್ರಸಾರ ಮಾಡಿದರು. ಅಂದು ವಿರಕ್ತಮಠದಲ್ಲಿ ಪ್ರಾರಂಭವಾದ ಬಸವಜಯಂತಿ , ಶ್ರಾವಣಮಾಸ ಪ್ರವಚನ, ಬಸವ ಪ್ರಭಾತ್ ಫೇರಿ ಕಾರ್ಯಕ್ರಮಗಳು ಇಂದಿಗೂ ನಿರಂತರವಾಗಿ ನಡೆಯುತ್ತಲೇ ಬಂದಿವೆ.

 

****ಬಾಕ್ಸ್**ಶರಣರ ಚಿಂತನೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು

ಪ್ರಸ್ತುತ ಸಮಾಜ ದಿಕ್ಕುತಪ್ಪಿದ ಹುಚ್ಚು ಕುದುರೆ ರೀತಿ ಓಡುತ್ತಿದೆ. ಈ ಹುಚ್ಚು ಕುದುರೆಯ ಓಟಕ್ಕೆ ಕಡಿವಾಣ ಹಾಕಲು ನಾವು ಬುದ್ಧ, ಏಸು, ಪೈಗಂಬರ್, ಬಸವ, ಗಾಂಧಿ, ಅಂಬೇಡ್ಕರ್ ಅಂತಹ ಅನೇಕ ಮಹನೀಯರ, ದಾರ್ಶನಿಕರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಜನರ ಮನದಲ್ಲಿ ಬಸವ ಚಿಂತನೆ ಬಿತ್ತಲು ವಿರಕ್ತಮಠ ಆರಂಭಿಸಿದ ಬಸವ ಜಯಂತ್ಯೋತ್ಸವ ಇಂದು ವಿಶ್ವದಲ್ಲೆಡೆ ಆಚರಿಸಲ್ಪಡುತ್ತಿದೆ. ಆದರೆ, ಬಹುತೇಕ ಆಚರಣೆಗೆ ಮಾತ್ರ ಸೀಮಿತವಾಗಿರುವುದು ಪ್ರಸ್ತುತ ಸಮಾಜ ದಿಕ್ಕು ತಪ್ಪಲು ಕಾರಣವಾಗಿದೆ. ದೊಡ್ಡ ಆಶಯಗಳೊಂದಿಗೆ ನಮ್ಮ ಮುತ್ಸದ್ದಿಗಳು ಆರಂಭಿಸಿದ ಬಸವ ಜಯಂತಿ ಅರ್ಥಪೂರ್ಣ ಪಡೆದುಕೊಳ್ಳಬೇಕಾದರೆ ಸೌಹಾರ್ದತೆ, ಜಾತ್ಯಾತೀತ ಸಮಾಜ ನಿರ್ಮಾಣ ಆಗಬೇಕಿದೆ. ಈ ನಿಟ್ಟಿನಲ್ಲಿ ಮುರುಘಾ ಶರಣರು ನಿರಂತರ ಶ್ರಮಿಸುತ್ತಿದ್ದು, ಅವರ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ.

 

ಲೇಖಕರು :
ಶ್ರೀ ಬಸವಪ್ರಭು ಸ್ವಾಮೀಜಿ

ವಿರಕ್ತಮಠ, ದಾವಣಗೆರೆ

ಮೊ.ನಂ: 9945572979

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಸ್.ಎಂ.ಕೃಷ್ಣ ಮನೆಗೆ ಯಶ್ ಭೇಟಿ : ಮಾಜಿ ಸಿಎಂ ಬಗ್ಗೆ ರಾಕಿಬಾಯ್ ಹೇಳಿದ್ದೇನು..?

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದರು. ಮಂಡ್ಯ ಜಿಲ್ಲೆಯ ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲಾಗಿತ್ತು. ಆ ಸಮಯದಲ್ಲಿ ಯಶ್ ಶೂಟಿಂಗ್ ನಲ್ಲಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಇಂದು

ದರ್ಶನ್ ಗೆ ಜಾಮೀನು ಸಿಕ್ಕ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದ ವಿಜಯಲಕ್ಷ್ಮಿ..!

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ದರ್ಶನ್ ಜೈಲು ವಾಸ ಅನುಭವಿಸಿದರು. ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿಯೇ ಇದ್ದರು. ಬಳಿಕ ಅನಾರೋಗ್ಯದ ಕಾರಣದಿಂದ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಗೆ ದಾಖಲಾದರು.

ಚಿತ್ರದುರ್ಗ ಜಿಲ್ಲಾ ಹಾಪ್‍ಕಾಮ್ಸ್ : ನಗರದ ಹಲವೆಡೆ ಹಣ್ಣು, ತರಕಾರಿ ಮಾರಾಟಕ್ಕೆ ಮಳಿಗೆ ಲಭ್ಯ

ಚಿತ್ರದುರ್ಗ. ಡಿ.23: ಜಿಲ್ಲಾ ತೋಟದ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಜಿಲ್ಲಾ ಹಾಪ್‍ಕಾಮ್ಸ್) ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ನೇರವಾಗಿ ರೈತರಿಂದ ಖರೀದಿಸಿದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೂಕ್ತ ದರದಲ್ಲಿ

error: Content is protected !!