ಕೊರೊನಾ ಹೆಚ್ಚಳದ ಭಯ, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವೆಂದ ಸಚಿವ ಸುಧಾಕರ್

suddionenews
2 Min Read

 

ಬೆಂಗಳೂರು: ಕೋವಿಡ್ 4ನೇ ಅಲೆಯನ್ನು ತಡೆಯುವ ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ, ಜನಜಂಗುಳಿ ಹೆಚ್ಚಿರುವ ಕಡೆಗಳಲ್ಲಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ, ಕಂದಾಯ ಸಚಿವ ಆರ್. ಅಶೋಕ್, ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಸಚಿವರು, ಸಾರ್ವಜನಿಕರು ಹೆಚ್ಚು ಮುಂಜಾಗೃತೆವಹಿಸಬೇಕಿದೆ. ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದರು.

ಹೊಸ ಮಾರ್ಗಸೂಚಿಯಂತೆ ಜನಜಂಗುಳಿ ಇರುವಲ್ಲಿ ಹಾಗೂ ಒಳಾಂಗಣದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಗೆ ನಿರ್ದೇಶನ ನೀಡಲಾಗಿದೆ. ಸದ್ಯಕ್ಕೆ ಮಾಸ್ಕ್ ಧರಿಸದೇ ಇದ್ದರೆ ದಂಡ ಹಾಕಲಾಗುವುದಿಲ್ಲ. ಆದರೆ ಜನರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇಡಕಾ 1.9 ರಷ್ಟು ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಹೆಚ್ಚು ನಿಗಾ ಇಡಲಾಗಿದೆ. ಅವಶ್ಯಕತೆ ಇದ್ದರೆ ಸೋಂಕಿತರಿಗೆ ವಿಶೇಷ ಮೇಲ್ವಿಚಾರಣೆಯ ಜೊತೆಗೆ ಚಿಕಿತ್ಸೆ ಕೂಡ ನೀಡಲಾಗುವುದು ಎಂದರು.

ವಿಶ್ವ ಆರೊಗ್ಯ ಸಂಸ್ಥೆ ಲಸಿಕೆ ತೆಗೆದುಕೊಳ್ಳದೇ ಇರುವುದು ಸೋಂಕು ಉಲ್ಬಣಕ್ಕೆ ಕಾರಣವಾಗಿದೆ ಎಂದು ಹೇಳಿದೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯಬೇಕು. 3ನೇ ಡೋಸ್ ಲಸಿಕೆ ಪಡೆಯಲು ಅರ್ಹರಾದವರು ಅದನ್ನು ಪಡೆದುಕೊಳ್ಳಬೇಕು. ಹೆಚ್ಚಿನ ರಕ್ಷಣೆ ಪಡೆದುಕೊಳ್ಳಬೇಕು. ಮಾಧ್ಯಮಗಳು ಕೂಡ ಲಸಿಕಕರಣ, ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ದಕ್ಷಿಣ ಕೊರಿಯಾ, ಥೈಲೆಂಡ್ ಮತ್ತು ಜಪಾನ್ ದೇಶಗಳಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಆ ದೇಶಗಳಿಂದ ಬರುವವರ ಬಗ್ಗೆ ವಿಮಾನ ನಿಲ್ದಾಣಗಳಲ್ಲಿ ನಿಗಾ ಇರಿಸಲಾಗಿದೆ. ಅವರ ಸಂಪರ್ಕಿತರ ಬಗ್ಗೆ ಹಾಗೂ ಪ್ರಯಾಣ ಮಾಡಿದವರ ಬಗ್ಗೆ ಟ್ರ್ಯಾಕ್ ಮಾಡಲಾಗುತ್ತಿದೆ. ಟೆಲಿ ಮಾನಿಟರಿಂಗ್ ಕೂಡ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿದಿನ 10,000 ಕೊರೊನಾ ಟೆಸ್ಟಿಂಗ್ ನಡೆಯುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೋಗ ಲಕ್ಷಣ ಇರುವವರಿಗೆ ಟೆಸ್ಟಿಂಗ್ ಮಾಡಲಾಗುತ್ತಿದೆ. ಏಪ್ರಿಲ್ 27 ರಂದು ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಆರೊಗ್ಯ ಸಚಿವರ ಸಭೆ ಕರೆದಿದ್ದಾರೆ. ಆ ಸಭೆಯ ಬಳಿಕ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *