ಈ ಊರು ಕೇರಿಗೆ ಬೆನ್ನಾಗಿ
ಕಳ್ಳುಬಳ್ಳಿಯಾಗಿ ಇರುತಾರೆ
ಅಕ್ಕತಂಗೇರು ಇಬ್ಬರು
ಇರುವರು ಇಬ್ಬರೇ ಇವರು
ಹೆಣ್ಣಾಗುತ್ತ ಲೋಕ ಕಂಡವರು
ಅಕ್ಕತಂಗೇರು ಪ್ರೀತಿಸೂರಿನವರು
ಮದುವೆಯಾಗಿ ಹತ್ತು ವರುಷ
ಕಳೆದರೂ ಬೆಳೀಲಿಲ್ಲ ಜೀವ ಹೊಟ್ಟೇಲಿ
ಕಂಗಾಲು ಅಕ್ಕಯ್ಯ
ನಿಟ್ಟುಸಿರು ಬಿಟ್ಟರು ಇಲ್ಲ, ಕಣ್ಣೀರಿಟ್ಟರೂ ಇಲ್ಲ
ಮಕ್ಕಳ ಫಲ, ಒಡಲು ಬರಿದೊ ಬರಿದೊ
ಕೊರಗುತಾಳೆ ಅಕ್ಕಯ್ಯ
ತಂಗೆವ್ವ ಹಡೆದವಳೆ ಒಂದಾದ ಮೇಲೊಂದು
ಒಂದು ಕೂಸಿನ ನೆತ್ತಿ ಆರುವ ಮುನ್ನ
ಮತ್ತೊಂದು ಹೂಮರಿ
ಕರುಣಿ ಶಿವ ಕೊಟ್ಟ ಸಂತಾನ ಬುಟ್ಟಿ
ಹೊತ್ತ ಹೆಣ್ಣು ತಂಗೆಮ್ಮ ಹಣೆ ಮೇಲೆ ಕುಂಕುಮ
ಢಾಳಾಗಿ ತೀಡಿಕೊಂಡವಳೆ ತಂಗಿ
ಮಕ್ಕಳಾಗದ ಗರತಿ ಅಕ್ಕಯ್ಯ
ಮುತ್ತೈದೆ ತಂಗಿಯ ಸೌಭಾಗ್ಯಕೆ
ಫಲವಂತಿಕೆಗೆ ಕಡು ಸಂತಸಗೊಂಡವಳೆ
ಹಾದಿ ತುಂಬ ಕರಿಯಿರುವೆ ಝೊಂಪೆಗೂಡು
ಸಕ್ಕರೆ ಚೆಲ್ಲಿ, ನಕ್ಕವಳು ಅಕ್ಕಯ್ಯ
ಸಿಹಿಹೊರೆಯ ಸಂಸಾರಿ ಜೀವ
ಸಿಡಿಲಾಯಿತು, ಮುನಿಸಾಯಿತು ಬಂಧಕ್ಕೆ
ತಂಗಿ ಅಕಾರಣವಾಗಿ ಸಂಶಯಿಸಿ ನಿಂತಳು
ಅಕ್ಕನ ಬಂಜೆ ಎಂದು ದೂಡಿದಳು
ಮಕ್ಕಳ ಬೈತಿಟ್ಟಳು, ಪುಟ್ಟಿ ಹಾಕಿ ಕಮಕ್ ಕಿಮಕ್
ಎನ್ನದಂತೆ ಕೂಡಿಟ್ಟಳು, ಕಂದಯ್ಯಗಳ
ಅಕ್ಕಯ್ಯನ ನೆರಳು ಬೀಳದಂತೆ
ಹಸುಮಕ್ಕಳಿಗೆ ಕೊಬರಿ ಬೆಲ್ಲ ಮಡಿಲಲ್ಲಿ
ತಂದ ದೊಡ್ಡವ್ವನಿಗೆ ಎದುರಾಗಿ ಮಕ್ಕಳು ಬರಲಿಲ್ಲ
ಬಂದಾಳೆ ಉರಿಮೋರೆಯ ತಂಗಿ
ಇನ್ನಿವಳು ತೋರಲಾರಳು, ಪ್ರೀತಿಯ ಕೆಡಿಸಿದಳು
ಹೀಗೆಂದು ನಿಲಲಾರದೆ ಹೊರಗೋಡಿ ಬಂದಳು
ತುದಿನಾಲಗೆಯಲಿ ನಿಂತ ಶಾಪವ ನುಂಗಿ
ಅಕ್ಕನ ಮನಸು ಮುರಿದ ತಂಗಿಗೆ ದುಮ್ಮಾನ
ಪಾಪದ ಭೀತಿ, ಸುಡುವ ಮಡಿಲು
ನಾಶವಾಗೊ ಭಯ
ಅಂದಿನಿಂದ ಅಕ್ಕತಂಗೇರು ದೂರ ದೂರ
ಒಂದಾಗಲಾರರು ಬಿಗುಮಾನ ತೊರೆದು
ಹಿಂದಿನ ಸಿಹಿ ಗಳಿಗೆಗಳ ಮರೆತೇ ಹೋದರು
ಒಡಕಲು ಮನಸ್ಸುಗಳ ಕೂಡಿಸೋ ಪದವುಂಟೇ ಉಂಟು
ವರ್ಷಕ್ಕಾದರೂ ನೀವು ಹೂ ಅನ್ನಿ, ಭೇಟಿ ಮಾಡಿಸುವ ಅಂದಾರು ನಡುವಿನವರು
ತಿಪ್ಪವ್ವ ಬರವ್ವ ಇಬ್ಬರೂ ಹೀಂಗ ಬರ್ರಿ
ನಿಮ್ ನಿಮ್ ಮಸ್ತಿ ದೂರ ಇಟ್ಟು
ತಂದ ಒಸಗೆ ಒಪ್ಪಿಸಿಕೊಳ್ಳಿ ಅಂದವರೆ
ಅಕ್ಕತಂಗಿ ಕೊಸರಾಡಿ ಕೊಸರಾಡಿ ಒಪ್ಪಿದರು
ತಮ್ಮ ಮುನಿಸು ಕೊಸರಾಟಗಳ ಮಧ್ಯೆ
ಸಣ್ಣಗೆ ಒಳಗೇ ಕಾಣುವ ಪುಲಕ
ಸೇರುವ ಆಟದ ನಡುವೆ ಮುನಿಸಿನ ಬೇಲಿ ಯಾತರದು?
ಹಮ್ಮು ಬಿಮ್ಮು ತೊರೆದು ಸೇರುವ ಬಿಂದುವಿನಲಿ
ಕಳೆದುಕೊಳ್ಳಬೇಕು ಅಹಮಿಕೆಯನ್ನು
ಎಷ್ಟೊ ನೀರು ಹರಿದರೂ ಅಕ್ಕತಂಗೇರ ನಡುವೆ
ಎದ್ದ ತಕರಾರು ಜೀವಂತ; ಬೇಟಿ ಮಾಡುವ ಪುಲಕವೊ, ಸಂಭ್ರಮವೂ
ಊರು ಕಟ್ಟಿದ ಕಥೆಯೊಳಗೆ ಎಷ್ಟು ಅಕ್ಕತಂಗೇರ ಮುನಿಸುಗಳು,
ಎಷ್ಟು ಭೇಟಿಗಳು? ಮುಖ ನೋಡಲಾರೆ ಎಂದು ಹೋದವರ ಬದುಕುಗಳು
ಇದ್ದವರು ಗೆದ್ದವರು ಸೋತವರು ಸತ್ತವರು
ಮಣ್ಣಿನಲಿ ಮಣ್ಣಾಗುವ ಮುನ್ನ
ಅರೆಗಳಿಗೆ ಜಗಳ,
ಮರುಗಳಿಗೆ ನಂಟಿನ ಆಶೆ!-
ಡಾ.ಆರ್. ತಾರಿಣಿ ಶುಭದಾಯಿನಿ
ಕವಯಿತ್ರಿ, ಚಿತ್ರದುರ್ಗ.
ಮೊ : 87626 20915