ಚಳ್ಳಕೆರೆ, (ಏ.11) : ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಪಡಿತರ ಅಕ್ಕಿ ತುಂಬಿದ್ದ ಲಾರಿ ಮತ್ತು ಚಾಲಕನನ್ನು ತಹಶೀಲ್ದಾರ್ ಎನ್. ರಘುಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಖಚಿತವಾದ ಮಾಹಿತಿ ಮೇರೆಗೆ ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ನಗರದ ನೆಹರು ವೃತ್ತದ ಸಮೀಪ ವಾಹನ ಪರಿಶೀಲಿಸಿದಾಗ 12 ಟನ್ ಅಕ್ಕಿ ಇರುವುದು ಕಂಡುಬಂದಿದೆ. ಆದರೆ ಟ್ರಿಪ್ ಶೀಟ್ ನಲ್ಲಿರುವ ವಾಹನದ ಸಂಖ್ಯೆಗೂ ಅಕ್ಕಿ ಇರುವ ವಾಹನ ಸಂಖ್ಯೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಚಾಲಕನನ್ನು ವಿಚಾರಣೆ ಮಾಡಲಾಯಿತು.
ಈ ವೇಳೆ ಅಕ್ಕಿಯ ವಿವರ ನನಗೆ ತಿಳಿದಿಲ್ಲವೆಂದು ಮತ್ತು ವಾಹನದ ಮಾಲೀಕರು ಗೊತ್ತಿಲ್ಲವೆಂದು ಹೇಳಿದ ಮೇಲೆ ಸದರಿ ವಾಹನ ಮತ್ತು ಚಾಲಕನನ್ನು ದಸ್ತಗಿರ್ ಮಾಡಿ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೊಪ್ಪಿಸಿ ಇವರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಹಶಿಲ್ದಾರ್ ಎನ್. ರಘುಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.