ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಏ.08): ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲು ಎನ್ನುವ ಆಶಾಡಭೂತಿಗಳು ನಮ್ಮ ಮುಂದಿರುವುದರಿಂದ ಅಂಬೇಡ್ಕರ್ ಅರಿವು, ಸಂವಿಧಾನದ ಅರಿವು ಮೂಡಿಸಿಕೊಂಡು ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ಕರೆ ನೀಡಿದರು.
ಸಂವಿಧಾನಿಕ ಸದೃಢ ಭಾರತದ ಸಂಕಲ್ಪಕ್ಕಾಗಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ನಡೆದ ರಾಜ್ಯ ಬಂಧುತ್ವ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
ಭಯೋತ್ಪಾದನೆ, ಕೋಮುವಾದ, ಮೂಲಭೂತವಾದ, ಜಾತಿವಾದ ಹೀಗೆ ಅನೇಕ ಗಂಭಿರ ಸಮಸ್ಯೆ ಸವಾಲುಗಳಿಂದ ಅರಾಜಕತೆಯುಂಟಾಗುತ್ತಿದೆ. ಅಲ್ಪಸಂಖ್ಯಾತರು ಎಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿರುತ್ತಾರೋ ಅಲ್ಲಿ ಸರ್ಕಾರವೆ ಇಲ್ಲ. ಸಂವಿಧಾನ ಉಲ್ಲಂಘನೆ ಮಾಡುವವರ ವಿರುದ್ದ ಧ್ವನಿಯೆತ್ತಲು ಸಮರ್ಥರಾಗಿರಬೇಕೆಂದು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರನ್ನು ಎಚ್ಚರಿಸಿದರು.
ನ್ಯಾಯಮೂರ್ತಿಗಳು ಎಲ್ಲಾ ವಿಚಾರದಲ್ಲಿಯೂ ಮಧ್ಯಪ್ರವೇಶಿಸುತ್ತಾರೆಂಬ ಅಪವಾಧವಿದೆ. ಕಾನೂನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ವಿಧಿಸುವುದನ್ನು ಪೊಲಿಟಿಕಲ್ ಪವರ್ ಎಂದು ಕರೆಯಲಾಗುವುದು.
ಒಂದು ಕಾಲದಲ್ಲಿ ರಾಜಮಹಾರಾಜರು, ಚಕ್ರವರ್ತಿಗಳು, ಸಾಮ್ರಾಟರ ಕೈಯಲ್ಲಿ ಅಧಿಕಾರವಿತ್ತು. ಆ ನಂತರ ಪ್ರಜಾಪ್ರಭುತ್ವಕ್ಕೆ ಸಿಕ್ಕಿತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸ್ವೇಚ್ಚಾಚಾರ ಪ್ರದರ್ಶಿಸಿದಾಗ ಜನರು ತೀರ್ಮಾನ ಮಾಡುತ್ತಾರೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವ ನಿಯಮ ರಚಿಸಬೇಕು. ಯಾರೆ ಸರ್ಕಾರ ರಚಿಸಲಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಾಗಲಿ ಆಡಳಿತ ಸಂವಿಧಾನಾತ್ಮಕವಾಗಿರಬೇಕು.
ಇದುವರೆವಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ಜನಸಾಮಾನ್ಯರಿಗೆ ಆಳುವ ಸರ್ಕಾರಗಳು ತಿಳಿಯಪಡಿಸಲೇ ಇಲ್ಲ. ಪ್ರತಿಯೊಬ್ಬರು ಈಗಿನಿಂದಲೇ ಸಂವಿಧಾನವನ್ನು ಓದಿ ಅದರಂತೆ ನಡೆದುಕೊಳ್ಳಿ ಎಂದು ತಿಳಿಸಿದರು.
ದೇಶ ಅರ್ಥಮಾಡಿಕೊಳ್ಳದಿದ್ದರೆ ಸಂವಿಧಾನ ಅರ್ಥವಾಗುವುದಿಲ್ಲ. ಇತಿಹಾಸ ಅರ್ಥಮಾಡಿಕೊಂಡು ಸಂವಿಧಾನ ಪ್ರವೇಶಿಸಿದರೆ ಭಾರತ ಅರ್ಥವಾಗುತ್ತದೆ. ಹಿಂದೂ-ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಬೌದ್ದ, ಜೈನ್, ಬುಡಕಟ್ಟು ಜನಾಂಗ ನಮ್ಮ ದೇಶದಲ್ಲಿದೆ. ಬಹುತ್ವವೇ ಭಾರತದ ಸಂವಿಧಾನದಲ್ಲಿ ಎಲ್ಲರನ್ನು ರಕ್ಷಣೆ ಮಾಡುತ್ತಿದೆ. ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಈಗಿನ ಕೋಮುವಾದಿ ಬಿಜೆಪಿ ಸರ್ಕಾರ ಎಲ್ಲವನ್ನು ವಿರೋಧಿಸುವುದಾದರೆ ಎಲ್ಲರೂ ಒಟ್ಟಾಗಿ ಬಾಳುವುದಾದರೂ ಹೇಗೆ ಎಂದು ಪ್ರಶ್ನಿಸಿದ ಹೆಚ್.ಎನ್.ನಾಗಮೋಹನ್‍ದಾಸ್ ಜಾತಿ ವ್ಯವಸ್ಥೆ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಅಸಮಾನತೆಯನ್ನು ತೊಲಗಿಸಿ ಸಮಾನತೆಯನ್ನು ಕಟ್ಟುವ ಸಂದೇಶ ಸಂವಿಧಾನದಲ್ಲಿದೆ.
ಭಾರತದಲ್ಲಿ ಆರು ಲಕ್ಷ ಐವತ್ತು ಸಾವಿರ ಹಳ್ಳಿಗಳಿವೆ. ಎಲ್ಲರಿಗೂ ಕನಿಷ್ಟ ಮೂಲ ಸೌಕರ್ಯ ಕಲ್ಪಿಸಬೇಕೆಂಬ ಜವಾಬ್ದಾರಿಯನ್ನು ಸರ್ಕಾರ ಮರೆತಂತಿದೆ. ಸಂವಿಧಾನ ಅರ್ಥಮಾಡಿಕೊಳ್ಳದಿದ್ದರೆ ಅನ್ಯಾಯ, ಸ್ವೇಚ್ಚಾಚಾರದ ವಿರುದ್ದ ಪ್ರತಿಭಟಿಸಲು ಆಗುವುದಿಲ್ಲ ಎಂದು ಹೇಳಿದರು.
ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಅಷ್ಟೆ ಏಕೆ ನಾನು ಕೂಡ ನ್ಯಾಯಮೂರ್ತಿಯಾಗಿ ನಿವೃತ್ತನಾಗಿದ್ದೇನೆಂದರೆ ಅದು ಸಂವಿಧಾನ ನೀಡಿರುವ ಹಕ್ಕು. ಎಲ್ಲಾ ಭಾರತೀಯರಿಗೆ ಸಂವಿಧಾನ ಮಹಾನ್ ಗ್ರಂಥ. ಸಂಸ್ಕೃತಿ, ಮಾನವೀಯತೆಯಿಂದ ದೇಶವನ್ನು ಕಾಪಾಡಿ ಸವಾಲುಗಳನ್ನು ಹೇಗೆ ಎದುರಿಸಬೇಕೆಂದು ಯುವಕರನ್ನು ಸಂಘಟಿಸುವುದೇ ಮಾನವ ಬಂಧುತ್ವ ವೇದಿಕೆಯ ಉದ್ದೇಶ. ಅದಕ್ಕಾಗಿ ಸಂವಿಧಾನ ಉಳಿವಿಗೆ ಹೋರಾಡಬೇಕಿದೆ ಎಂದರು.
ಶಾಸಕ ಸತೀಶ್ ಜಾರಕಿಹೊಳಿ, ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಸಂಸ್ಕೃತಿ ಚಿಂತಕ ಬರಹಗಾರ ಪುರುಷೋತ್ತಮ ಬಿಳಿಮಲೆ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರನಾಯ್ಕರ್, ನ್ಯಾಯವಾದಿ ಎನ್.ಆನಂದನಾಯ್ಕ ವೇದಿಕೆಯಲ್ಲಿದ್ದರು.