ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ (ಏ.08) : ಅತಿವೃಷ್ಟಿ ಹಾಗೂ ಬರದಿಂದ ನಷ್ಟವಾದ ಬೆಳೆಗೆ ಇನ್ಪುಟ್ ಸಬ್ಸಿಡಿಯನ್ನು ಆಂಧ್ರ ಸರ್ಕಾರದ ಮಾದರಿಯಲ್ಲಿ ರೈತರಿಗೆ ವಿತರಿಸಬೇಕು. ಈಗಾಗಲೇ ಬ್ಯಾಂಕ್‍ಗಳು ಕೃಷಿ ಸಾಲದ ವಸೂಲಾತಿಗಾಗಿ ರೈತರಿಗೆ ನೋಟಿಸ್ ನೀಡುತ್ತಿದ್ದು ಮತ್ತು ವಸೂಲಾತಿಗಾಗಿ ಕೋರ್ಟ್‍ಗೆ ದಾವೆ ಹಾಕುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಈ ಕ್ರಮವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕೃಷಿ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಬಿ.ಸಿ.ಪಾಟೀಲ್‍ರವರಿಗೆ ರೈತ ಸಂಘ ಮನವಿ ಮಾಡಿತು.
ಜಿಲ್ಲೆಯಲ್ಲಿ 2019-2020, 2020-2021ನೇ ಸಾಲಿನಲ್ಲಿ ಅತಿಹೆಚ್ಚಾಗಿ ಮಳೆಯಾಗಿ ರೈತರ ನಷ್ಟ ಅನುಭವಿಸಿದ್ದರು ಇದಕ್ಕೆ ಬೆಳೆ ವಿಮೆ ಕೊಟ್ಟಿರುವುದಿಲ್ಲ ಹಾಗೂ ಬೆಳೆ ಪರಿಹಾರವನ್ನು ಸರಿಯಾದ ಕ್ರಮದಲ್ಲಿ ರೈತರಿಗೆ ವಿತರಣೆ ಮಾಡಿಲ್ಲ. ಎನ್.ಆರ್.ಇ.ಜಿ ಯೋಜನೆಯಡಿಯಲ್ಲಿ ರೈತರಿಗೆ ತೋಟಗಾರಿಕೆ ಬೆಳೆಗಳಾದ ಬಾಳೆ, ಪಪ್ಪಾಯಿ, ನುಗ್ಗೆ ಇನ್ನು ಇತರೆ ಬೆಳೆಗಳಿಗೆ ಸಾಗಾಣಿ ವೆಚ್ಚ, ಕೊಟ್ಟಿಗೆÉ ಗೊಬ್ಬರ ಇವುಗಳಿಗೆ ಸಹಾಯಧನ ನೀಡುವುದನ್ನು ನಿಲ್ಲಿಸಿರುತ್ತಾರೆ. ಕೂಡಲೇ ಇದನ್ನು ವಾಪಾಸ್ಸು ಪಡೆದು ಮೊದಲನಂತೆ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಲಾಯಿತು.
ರೈತರ ಜಮೀನುಗಳಿಗೆ ನಕ್ಷೆ, ಪೋಡ್, ಹದ್ದುಬಸ್ತು ಇವುಗಳಿಗೆ ಶುಲ್ಕ ಹೆಚ್ಚಾಗಿದ್ದು, ಇದನ್ನು ಕೂಡಲೇ ವಾಪಾಸ್ಸು ಪಡೆದು ಮೊದಲನಂತೆ ಇರುವ ಶುಲ್ಕವನ್ನು ನಿಗಧಿ ಮಾಡಬೇಕು. ರೈತರ ಕೃಷಿ ಪರಿಕರಣಗಳಿಗೆ ಈಗಾಗಲೇ ಶೇ.18% ಜಿ.ಎಸ್.ಟಿ ಹಾಕುತ್ತಿದ್ದು, ಇದನ್ನು ಕೂಡಲೇ ರದ್ದುಗೊಳಿಸಬೇಕು. ರೈತರು ದಿನನಿತ್ಯ ಹೂ, ಹಣ್ಣು ಮತ್ತು ಕೃಷಿ ಚಟುವಟಿಕೆಗಳಿಗೆ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ವಾಹನಗಳನ್ನು ಬಳಸುತ್ತಿದ್ದು, ಡಿಸೇಲ್ ಮತ್ತು ಪೆಟ್ರೋಲ್ ದರ ದುಬಾರಿಯಾಗಿರುವುದರಿಂದ ಸರ್ಕಾರವು ರೈತರಿಗೆ ಸಹಾಯಧನದ ಮೂಲಕ ಡಿಸೇಲ್ ಮತ್ತು ಪೆಟ್ರೋಲ್ ವಿತರಿಸಬೇಕೆಂದು ಮನವಿ ಮಾಡಲಾಯಿತು.
ಜಿಲ್ಲೆಯಲ್ಲಿ ನೀರಾವರಿ ಮೂಲಗಳು ಇಲ್ಲದ ಕಾರಣ ರೈತರು ವಿದ್ಯುತ್‍ನ್ನು ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ. ಆದ್ದರಿಂದ ಈಗ ನೀಡುತ್ತಿರುವ ವಿದ್ಯುತ್ ಅವಧಿ ಕಡಿಮೆಯಾಗಿದ್ದು, 10 ಗಂಟೆಗಳ ಕಾಲಾವಧಿಗೆ ಹೆಚ್ಚಿಸಬೇಕು ಹಾಗೂ ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ಹಣಪಾವತಿಸಿದ ರೈತರಿಗೆ ಕೂಡಲೇ ಸಂಪರ್ಕ ಮತ್ತು ಪರಿವರ್ತಕಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು. ರೈತರಿಗೆ ಬಿತ್ತನೆ ಬೀಜ, ಕ್ರಿಮಿನಾಶಕ ಬೆಲೆಯು ದುಬಾರಿಯಾಗಿದ್ದು, ರೈತರಿಗೆ ಸಹಾಯಧನ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರೈತ ಸಂಘದ ವತಿಯಿಂದ ಮಾನ್ಯ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಬಸವರೆಡ್ಡಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲ್ಲೂಕು ಅಧ್ಯಕ್ಷ ಧನಂಜಯ- ಚಿತ್ರದುರ್ಗ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರು-ಹಂಪಣ್ಣ, ತಿಪ್ಪೇಸ್ವಾಮಿ, ಶಿವಕುಮಾರ್-ತಾಲ್ಲೂಕು ಅಧ್ಯಕ್ಷರು, ಹಿರಿಯೂರು, ಮಲ್ಲಾಪುರ ತಿಪ್ಪೇಸ್ವಾಮಿ, ರವಿಕೋಗುಂಡೆ, ಕುಮಾರ ಕಲ್ಲೇನಹಳ್ಳಿ, ಮುದ್ದಾಪುರ ನಾಗಣ್ಣ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.