ನವದೆಹಲಿ : ಹಿಜಾಬ್, ಹಲಾಲ್ ಬಳಿಕ ಆಜಾನ್ ಸದ್ದು ಶುರುವಾಗಿದೆ. ಮಸೀದಿಯಲ್ಲಿನ ಧ್ವನಿವರ್ಧಕವನ್ನು ನಿಷೇಧಿಸಬೇಕೆಂದು ಕೆಲವು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ. ಈ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕಿದೆ ಎಂದಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕಟ್ಟಡಗಳಲ್ಲಿ ಧ್ವನಿವರ್ಧಕದ ಬಗ್ಗೆ ಎಲ್ಲಾ ಸಂಘಟನೆಗಳು ಕೂಡ ಹೈಕೋರ್ಟ್ ನ ಆದೇಶ ಪಾಲಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಥಹ ವಿಷಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಎಲ್ಲರನ್ನೂ ಸಮಾನವಾಗಿ ಒಟ್ಟಿಗೆ ನಡೆಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿರುತ್ತದೆ.
ಸಮಾಜದಲ್ಲಿ ಕೋಮು ಬಿರುಕುಗಳನ್ನು ಸೃಷ್ಟಿಸುವಾಗ ಕೇವಲ ಧ್ರುವೀಕರಣದ ರಾಜಕೀಯದ ಉದ್ದೇಶಕ್ಕಾಗಿ ಇಂತಹ ಸಮಸ್ಯೆಗಳನ್ನು ತಂದು ಗದ್ದಲ ಎಬ್ಬಿಸಲಾಗುತ್ತಿದೆ. ಇದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರತಿಕೂಲಕರವಾಗಿರುತ್ತದೆ ಎಂದಿದ್ದಾರೆ.
ಪ್ರಚೋದಿಸಲು ಪ್ರಯತ್ನಿಸುವವರ ವಿರುದ್ಧ ಸರ್ಕಾರ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಹಿಜಾಬ್ ವಿಚಾರವಾಗಿ ಆಲ್ ಖೈದಾ ಸಂಘಟನೆಯ ವ್ಯಕ್ತಿ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರಾದರೂ ತಪ್ಪು ಕೆಲಸಗಳಲ್ಲಿ ತೊಡಗಿದ್ದರೆ ಅವರನ್ನು ಬೆಂಬಲಿಸಬಾರದು ಎಂದಿದ್ದಾರೆ.