ಬೆಂಗಳೂರು: ರಾಜ್ಯದಲ್ಲಿ ಕನ್ನಡ ಕಡ್ಡಾಯ ವಿಚಾರ ಆಗಾಗ ಏಳುತ್ತಲೇ ಇರುತ್ತದೆ. ಇದೀಗ ಈ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ಸ್ಪಷ್ಟವಾಗಿ ಮಂಡಿಸಿ, ವಿಚಾರಣೆಯಲ್ಲಿ ಭಾಗವಹಿಸಿ, ನಮ್ಮ ಸರ್ಕಾರದ ನಿಲುವಿಗೆ ಒಂದು ಸಹಕಾರವನ್ನು ತೀರ್ಪನ್ನು ಪಡೆಯಲಿಕ್ಕೆ ಪ್ರಯತ್ನಿಸುತ್ತೇವೆ. ಹೆಚ್ಚಿನ ಸ್ಪಷ್ಟತೆಯನ್ನು ಕೊಟ್ಟು ರಾಜ್ಯದಲ್ಲಿ ನಮ್ಮ ಭಾಷೆಯನ್ನು ಕಡ್ಡಾಯವಾಗಿ ಭಾಷೆ ಕಲಿಯುವುದಕ್ಕೆ ಅವಕಾಶ ಮಾಡಿಕೊಡಬೇಕು ಅಂತ ನ್ಯಾಯಾಲಯದ ಮೂಲಕವೇ ಬರಬೇಕು.

ಹಾಗಂತ ನಾವೇನು ತುಂಬಾ ಕಡ್ಡಾಯ ಮಾಡಿ ಅಂತಿಲ್ಲ. ಕನ್ನಡಿಗರಿಗೆ ಕನ್ನಡ ಕಡ್ಡಾಯ, ಹೊರಗಿನವರಿಗೆ ಕನ್ನಡ ಕಲಿಯಲು ಆರು ತಿಂಗಳು ಅವಕಾಶ ಮಾಡಿಕೊಡಲಾಗಿದೆ. ಇದನ್ನ ಕಡ್ಡಾಯ ಮಾಡಲು ಒತ್ತಾಯ ಮಾಡುತ್ತೇವೆ. ಜೊತೆಗೆ ನ್ಯಾಯಾಲಯದಲ್ಲಿ ಮಂಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಹಲಾಲ್, ಹಿಜಾಬ್, ಆಜಾನ್ ವಿಚಾರದ ಬಗ್ಗೆ ಮಾತನಾಡಿದ ಅಶ್ವತ್ಥ್ ನಾರಾಯಣ್, ಯಾವುದೇ ರೀತಿಯಾದಂತ ಭಯೋತ್ಪಾದಕ ಸಂಘಟನೆಗಳು ನಮ್ಮ ಆಂತರಿಕ ವಿಚಾರದಲ್ಲಿ ಭಾಗವಹಿಸುವಂತಿಲ್ಲ. ಇದನ್ನು ಖಂಡಿಸುತ್ತೇವೆ. ಅಂಥ ಸಂಘಟನೆಗಳ ಮೇಲೆ ಸಂಪೂರ್ಣವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಇಂಥ ಸಂಘಡನೆಗಳ ಜೊತೆ ಸಂಬಂಧ ಇಟ್ಟುಕೊಂಡರು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಕಾನೂನು ಪಾಲನೆಯನ್ನು ಮಾಡಲಾಗುತ್ತಿದೆ. ಹೊಸದಾಗಿ ಏನನ್ನು ತಂದಿರುವುದಲ್ಲ. ಕಾನೂನು ಪಾಲನೆ ಬಿಟ್ಟು ಬೇರೆ ಏನನ್ನು ತಂದಿರುವುದಲ್ಲ. ಆಲ್ ಖೈದಾ ಮತ್ತೊಂದು ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಮೂಗು ತೂರಿಸುವ ಕೆಲಸ ಮಾಡಿದೆ. ಯಾವುದೇ ಸಮುದಾಯಕ್ಕೂ ಇದು ಆರೋಗ್ಯಕರವಲ್ಲ. ಇಂಥ ವ್ಯಕ್ತಿಗಳ ಜೊತೆ ಸಂಬಂಧವಿಟ್ಟುಕೊಂಡರೆ ಏನಾಗುತ್ತೆ ಅನ್ನೋದನ್ನ ನೆನಪಿಟ್ಟುಕೊಳ್ಳಬೇಕು. ನಮ್ಮ ನಾಗರೀಕರು ಇಂಥದ್ದಕ್ಕೆಲ್ಲಾ ಸ್ಪಂದಿಸಬಾರದು. ಕಾನೂನನ್ನು ಗೌರವಿಸಿ, ಪಾಲಿಸಿ ಎಂದು ಹೇಳುತ್ತೇನೆ ಎಂದಿದ್ದಾರೆ.

