ಭಜರಂಗದಳ ಭಾವನೆಗಳ ಭಯೋತ್ಪಾದಕ ಆಗುವದು ಬೇಡ : ಕುಮಾರಸ್ವಾಮಿ ಟ್ವೀಟ್

suddionenews
1 Min Read

ಬೆಂಗಳೂರು: ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. ‘ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ’ ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಡ್ ಮಾಡಿದ್ದಾರೆ.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ.ಇದು ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಜಹಗೀರಲ್ಲ. ಇವೇನು ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಗಳೂ ಅಲ್ಲ. ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ. ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ.

ʼಧರ್ಮೋ ರಕ್ಷತಿ ರಕ್ಷಿತಃʼ ಎನ್ನುವುದರ ಅರಿವು ನನಗೂ ಇದೆ. ಧರ್ಮ ರಕ್ಷಣೆ ಎಂದರೆ ಇನ್ನೊಬ್ಬರ ಅನ್ನ ಕಸಿಯುವುದಲ್ಲ? ನೆಮ್ಮದಿಯ ನಾಡಿಗೆ ಕಿಚ್ಚಿಡುವುದಲ್ಲ? ಮನಸ್ಸುಗಳನ್ನು ಒಡೆದು ದೇಶವನ್ನು ʼಒಡೆದ ಮಡಿಕೆʼ ಮಾಡುವುದಲ್ಲ. ದೇಶವೆಂದರೆ ಮಣ್ಣಲ್ಲ, ಮನುಷ್ಯರು.

ವಿಶ್ವ ಹಿಂದೂ ಪರಿಷತ್‌, ʼವಿಶ್ವ ವಿನಾಶಕ ಪರಿಷತ್‌ʼ ಅಥವಾ ʼಧರ್ಮ ವಿನಾಶಕ ಪರಿಷತ್‌ʼ ಆಗುವುದು ಬೇಡ. ಬಜರಂಗದಳ ಭಾವನೆಗಳ ಭಯೋತ್ಪಾದಕ ಆಗುವದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೇ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ?.

ಕೊರೋನಾ ಕಾಲದಲ್ಲಿ ನೀವೊಬ್ಬರೇ ಜನರ ಸೇವೆ ಮಾಡಿಲ್ಲ. ಎಲ್ಲರೂ ಜಾತಿ, ಧರ್ಮ ಮೀರಿ ಸೇವೆ ಮಾಡಿದ್ದಾರೆ. ʼಶವ ಸಂಸ್ಕಾರದಲ್ಲೂ ಕೀರ್ತಿʼಯನ್ನು ಹುಡುಕುವ ನಿಮ್ಮಗಳ ವಿಕೃತ ಮನಸ್ಥಿತಿಗೆ ನನ್ನ ಮರುಕವಿದೆ. ಇದಾ ನಿಮ್ಮ ಧರ್ಮ?.

ಸೋಂಕಿಗೆ ಬಲಿಯಾದವರ ಪಾರ್ಥೀವ ಶರೀರಗಳನ್ನು ನೀವು ಬಾಲಂಗೋಚಿ ಆಗಿರುವ ಪಕ್ಷದ ಸರಕಾರ ಹೇಗೆ ಕಂಡಿತು ಎಂಬುದಕ್ಕೆ ದಿವಂಗತ ಕೇಂದ್ರ ಮಂತ್ರಿ ಶ್ರೀ ಸುರೇಶ ಅಂಗಡಿಯವರೇ ಸಾಕ್ಷಿ. ಅವರ ಅಂತ್ಯಕ್ರಿಯೆ ಹೇಗಾಯಿತು ಎಂದು ಮಾಧ್ಯಮಗಳ ಮೂಲಕ ಕಣ್ಣಾರೆ ನೋಡಿದ್ದೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *