ಬೆಂಗಳೂರು: ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಬಗ್ಗೆ ಸಾಕಷ್ಟು ವಿಚಾರಗಳು ತಿಳಿದೇ ಇರಲಿಲ್ಲ. ಯಾಕಂದ್ರೆ ಅವರು ‘ದೊಡ್ಮನೆ ಹುಡುಗ’. ಅಣ್ಣಾವ್ರ ಆದರ್ಶಗಳನ್ನು ಹೊತ್ತು ಬಂದವರು. ಅವರ ನಟನೆ, ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುತ್ತಿತ್ತು. ಆದರೇ ಅದರಿಂದಾಚೆಗೂ ಪುನೀತ್ ಅವರ ಸಹಾಯದ ಗುಣ ಗೊತ್ತಾಗಿದ್ದು, ಅವರ ನಿಧನದ ಬಳಿಕ.
ಅವರ ಸಹಾಯ ಗುಣ ಎಲ್ಲರಿಗೂ ಸ್ವಲ್ಪಮಟ್ಟಿಗೆ ಗೊತ್ತಿತ್ತು. ಆದ್ರೆ ಅಪಾರವಾದ ಮಟ್ಟಕ್ಕೆ, ನಿರೀಕ್ಷೆಯನ್ನೇ ಮಾಡದ ಮಟ್ಟಕ್ಕೆ ಅವರು ಸಹಾಯ ಮಾಡಿದ್ದಾರೆ. ಶಿಕ್ಷಣ ವಿಚಾರಕ್ಕೆ ಸಾಕಷ್ಟು ನೆರವು ನೀಡಿದ್ದಾರೆ. ಬಲ ಗೈ ಕೊಟ್ಡದ್ದು ಎಡಗೈಗೆ ಗೊತ್ತಾಗಬಾರದು ಎಂಬ ದೊಡ್ಡ ಗುಣ ಈ ದೊಡ್ಮನೆಯವರದ್ದು. ಇಂಥ ವ್ಯಕ್ತಿತ್ವವುಳ್ಳ ನಟನ ಬಗ್ಗೆ ಮಕ್ಕಳು ತಿಳಿದು, ಆ ವಯಸ್ಸಿನಿಂದಲೇ ಮಾನವೀಯತೆಯ ಗುಣವನ್ನ ಅಳವಡಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಸೆಯಾಗಿದೆ.
ಇದೇ ಕಾರಣಕ್ಕೆ ಅಭಿಮಾನಿಗಳೆಲ್ಲಾ ಸೇರಿ ಶಿಕ್ಷಣ ಸಚಿವ ನಾಗೇಶ್ ಅವರ ಬಳಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ನಾಗೇಶ್ ಅವರು, ಅಭಿಮಾನಿಗಳು ಈ ಸಂಬಂಧ ಮನವಿ ಮಾಡಿದ್ದಾರೆ. 4 ಅಥವಾ 5 ನೇತರಗತಿಯ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಚರಿತ್ರೆಯನ್ನ ತರಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮತ್ತು ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಒಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.