ಚಿತ್ರದುರ್ಗ, (ಮಾರ್ಚ್.19) : ಕ್ಷಯರೋಗ ಮುಕ್ತ ಗ್ರಾಮ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಇದಕ್ಕೆ ಎಲ್ಲಾ ಇಲಾಖೆಗಳ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕ್ಷಯರೋಗ ನಿರ್ಮೂಲನಾ ಮಾಹಿತಿ ಶಿಕ್ಷಣ ಸಂವಹನದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ ದೇಶದಲ್ಲಿ ಪ್ರತಿ ನಿತ್ಯ 5000 ಕ್ಷಯರೋಗದ ಪ್ರಕರಣಗಳು ಕಂಡು ಬರುತ್ತಿವೆ. ಶೀಘ್ರವಾಗಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಈ ರೋಗವನ್ನು ಹತೋಟಿಗೆ ತಂದು ನಿರ್ಮೂಲನೆ ಮಾಡಬಹುದು ಎಂದರು.
ಕ್ಷಯರೋಗ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎ.ಮಾರುತಿಪ್ರಸಾದ್ ಮಾತನಾಡಿ ಕ್ಷಯರೋಗಿಗಳಿಗೆ ಸರ್ಕಾರದಿಂದ ಸಿಗುವ ಆರ್ಥಿಕ, ಚಿಕಿತ್ಸಾ ಸೇವಾ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕುಂದು-ಕೊರತೆಗಳ ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು. ತಹಶೀಲ್ದಾರ್ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರ ತಂಡ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಉಪ ತಹಶೀಲ್ದಾರ್ ಫಾತಿಮಾ ಬಿ.ಬಿ., ಡಾ.ನಳಿನಾಕ್ಷಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಕ್ಷಯರೋಗ ತಾಂತ್ರಿಕ ಅಧಿಕಾರಿ ಮಾರುತಿ, ಮಹೇಶ್, ನಿರ್ಮಲ, ಭಾರತಿ, ಮಂಜುಶ್ರೀ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.