ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಹಾಗೂ ಸಾರಿಗೆ ಸೇವೆಗಳಲ್ಲಿ ಪಾರದರ್ಶಕತೆ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಡ್ರೈವಿಂಗ್ ಲೈಸೆನ್ಸ್ (DL) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಹೊಸ ನಿಯಮಗಳು ಜಾರಿಗೆ ಬರಲಿವೆ.
ಒಂದೆಡೆ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಕಠಿಣಗೊಳಿಸಲಾಗಿದ್ದರೆ, ಮತ್ತೊಂದೆಡೆ ಈಗಾಗಲೇ ಲೈಸೆನ್ಸ್ ಹೊಂದಿರುವವರಿಗೆ ದಾಖಲೆಗಳ ತಿದ್ದುಪಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ರಿಲೀಫ್ ನೀಡಿದೆ.
ಹೊಸ ನಿಯಮಗಳ ಪ್ರಮುಖ ಅಂಶಗಳು ಇಲ್ಲಿವೆ

ಉಚಿತವಾಗಿ ವಿವರಗಳ ಬದಲಾವಣೆ (Zero Fee)
ಡ್ರೈವಿಂಗ್ ಲೈಸೆನ್ಸ್ನಲ್ಲಿರುವ ಮೊಬೈಲ್ ನಂಬರ್, ಇ-ಮೇಲ್ ಐಡಿ ಮತ್ತು ವಿಳಾಸದಂತಹ (Address) ವೈಯಕ್ತಿಕ ವಿವರಗಳನ್ನು ಅಪ್ಡೇಟ್ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಅತ್ಯಂತ ಸರಳಗೊಳಿಸಿದೆ. ಈ ಹಿಂದೆ ಇಂತಹ ತಿದ್ದುಪಡಿಗಳಿಗೆ ₹200 ರವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ, ಒಂದು ರೂಪಾಯಿ ಶುಲ್ಕವಿಲ್ಲದೆ ಉಚಿತವಾಗಿ ಈ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಬಹುದು.
15 ದಿನಗಳಲ್ಲಿ ಅರ್ಜಿ ವಿಲೇವಾರಿ ಮತ್ತು ‘ಆಟೋಮ್ಯಾಟಿಕ್’ ಅನುಮೋದನೆ
ವೈಯಕ್ತಿಕ ವಿವರಗಳ ಬದಲಾವಣೆಗಾಗಿ ಸಲ್ಲಿಸುವ ಅರ್ಜಿಗಳ ಮೇಲೆ ಸಾರಿಗೆ ಅಧಿಕಾರಿಗಳು 15 ದಿನಗಳ ಒಳಗಾಗಿ ನಿರ್ಧಾರ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಅರ್ಜಿಯನ್ನು ತಿರಸ್ಕರಿಸಿದರೆ, ಅದಕ್ಕೆ ಸೂಕ್ತ ಕಾರಣವನ್ನು ನಮೂದಿಸಬೇಕು. ವಿಶೇಷವೆಂದರೆ, ವಿಳಾಸ ಬದಲಾವಣೆಗೆ ಸಲ್ಲಿಸಿದ ಅರ್ಜಿಯ ಮೇಲೆ 30 ದಿನಗಳವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ, ಆ ಅರ್ಜಿಗೆ ತಾನಾಗಿಯೇ (Automatically) ಅನುಮೋದನೆ ದೊರೆತಿದೆ ಎಂದು ಪರಿಗಣಿಸಲಾಗುತ್ತದೆ.
ಲರ್ನರ್ಸ್ ಲೈಸೆನ್ಸ್ (LL) ಪರೀಕ್ಷೆ ಇನ್ನಷ್ಟು ಕಠಿಣ:
ರಸ್ತೆ ನಿಯಮಗಳು ಮತ್ತು ಸಂಚಾರಿ ಚಿಹ್ನೆಗಳ ಬಗ್ಗೆ ಚಾಲಕರಿಗೆ ಸಂಪೂರ್ಣ ಅರಿವು ಮೂಡಿಸುವ ಉದ್ದೇಶದಿಂದ ಲರ್ನಿಂಗ್ ಲೈಸೆನ್ಸ್ ಪರೀಕ್ಷೆಯನ್ನು ಕಠಿಣಗೊಳಿಸಲಾಗುತ್ತಿದೆ.
ಈ ಹಿಂದೆ ಲರ್ನರ್ಸ್ ಲೈಸೆನ್ಸ್ ಪರೀಕ್ಷೆಯಲ್ಲಿ ಪಾಸ್ ಆಗಲು ಶೇ. 60 ರಷ್ಟು ಅಂಕಗಳು ಸಾಕಾಗಿತ್ತು. ಆದರೆ ಹೊಸ ನಿಯಮದಂತೆ ಕನಿಷ್ಠ ಶೇ. 75 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಲಿದೆ.
ಟ್ಯುಟೋರಿಯಲ್ ಅವಧಿ ವಿಸ್ತರಣೆ:
ಸುರಕ್ಷಿತ ಚಾಲನೆಯ ಕುರಿತಾದ ಆನ್ಲೈನ್ ಟ್ಯುಟೋರಿಯಲ್ (ವಿಡಿಯೋ ತರಬೇತಿ) ಕನಿಷ್ಠ 30 ನಿಮಿಷಗಳ ಅವಧಿಯನ್ನು ಹೊಂದಿರಲಿದೆ. ಈ ಟ್ಯುಟೋರಿಯಲ್ ಪೂರ್ಣಗೊಳಿಸಲು ಈ ಹಿಂದೆ ನೀಡಲಾಗುತ್ತಿದ್ದ 7 ದಿನಗಳ ಕಾಲಾವಕಾಶವನ್ನು ಈಗ 15 ದಿನಗಳಿಗೆ ಹೆಚ್ಚಿಸಲಾಗುತ್ತಿದೆ. ನಿಗದಿತ ಅವಧಿಯೊಳಗೆ ಟ್ಯುಟೋರಿಯಲ್ ಮುಗಿಸಿ ಪರೀಕ್ಷೆ ಬರೆಯಬೇಕಾಗುತ್ತದೆ.
ಒಟ್ಟಾರೆಯಾಗಿ, ಅನರ್ಹರಿಗೆ ಲೈಸೆನ್ಸ್ ಸಿಗುವುದನ್ನು ತಪ್ಪಿಸಿ ರಸ್ತೆ ಅಪಘಾತಗಳನ್ನು ನಿಯಂತ್ರಿಸುವುದು ಹಾಗೂ ಸಾರ್ವಜನಿಕರಿಗೆ ಕಚೇರಿ ಅಲೆದಾಟ ಮತ್ತು ಹೆಚ್ಚುವರಿ ಶುಲ್ಕದ ಹೊರೆ ತಪ್ಪಿಸುವುದು ಕೇಂದ್ರ ಸರ್ಕಾರದ ಈ ಹೊಸ ನಡೆಗಳ ಮುಖ್ಯ ಉದ್ದೇಶವಾಗಿದೆ











