Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ ರಾಜ್ಯೋತ್ಸವ ವಿಶೇಷ: ಹೊಸಗನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿದ ಧೀಮಂತ ಸಾಹಿತಿ ಎಂ.ಎಸ್. ಪುಟ್ಟಣ್ಣ

---Advertisement---

 

ವಿಶೇಷ ಲೇಖನ: ಕೆ. ಪಿ. ಎಂ. ಗಣೇಶಯ್ಯ,         ನೀನಾಸಂ-93, ರಂಗ ನಿರ್ದೇಶಕರು, ಚಿತ್ರದುರ್ಗ (ದೂರವಾಣಿ: 9448664878)

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ಕನ್ನಡ ರಾಜ್ಯೋತ್ಸವವೆಂದರೆ ಕೇವಲ ನಾಡಹಬ್ಬದ ಸಂಭ್ರಮವಲ್ಲ, ಅದು ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಕೃತಜ್ಞತೆಯಿಂದ ಸ್ಮರಿಸುವ ಪವಿತ್ರ ಸಂದರ್ಭವಾಗಿದೆ. ಹೊಸಗನ್ನಡ ಸಾಹಿತ್ಯದ ಆರಂಭಿಕ ಕಾಲಘಟ್ಟದಲ್ಲಿ ತಮ್ಮ ಅಪಾರ ಪಾಂಡಿತ್ಯ, ಸಾಮಾಜಿಕ ಕಳಕಳಿ ಮತ್ತು ಕನ್ನಡ ಪ್ರೇಮದಿಂದ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಹಿರಿಯ ಸಾಹಿತಿಗಳಲ್ಲಿ ಎಂ.ಎಸ್. ಪುಟ್ಟಣ್ಣನವರು ಕೂಡ ಒಬ್ಬರು.

ಲಕ್ಷ್ಮೀನರಸಿಂಹ ಶಾಸ್ತ್ರಿ ಎಂಬ ಮೂಲ ಹೆಸರಿನ ಇವರು 1854ರ ನವೆಂಬರ್ 21ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣ ಭಟ್ಟರು ಮತ್ತು ತಾಯಿ ಲಕ್ಷ್ಮಮ್ಮನವರ ಸುಸಂಸ್ಕೃತ ಮಡಿಲಲ್ಲಿ ಬೆಳೆದರು.

ವೃತ್ತಿಜೀವನ ಮತ್ತು ಕನ್ನಡಪರ ಸಂಘಟನಾ ಶಕ್ತಿ
ಎಂ.ಎಸ್. ಪುಟ್ಟಣ್ಣನವರದು ಕೇವಲ ಸಾಹಿತ್ಯಕ್ಕೆ ಸೀಮಿತವಾದ ಬದುಕಲ್ಲ, ಅದೊಂದು ಬಹುಮುಖಿ ವ್ಯಕ್ತಿತ್ವ. ತಮ್ಮ ಜೀವಿತಾವಧಿಯಲ್ಲಿ ಅವರು ಅನೇಕ ಮಹತ್ವದ ಹುದ್ದೆಗಳನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿದರು. ಉಪಾಧ್ಯಾಯರಾಗಿ ವಿದ್ಯಾದಾನ ಮಾಡಿದ ಅವರು, ನ್ಯಾಯಾಲಯದಲ್ಲಿ ಭಾಷಾಂತರಕಾರರಾಗಿ, ಅಮಲ್ದಾರರಾಗಿ ಹಾಗೂ ವಕೀಲರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡರು. ಶೈಕ್ಷಣಿಕ ಕ್ಷೇತ್ರದ ಮೇಲಿನ ಅಪಾರ ಆಸಕ್ತಿಯಿಂದ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಇದೆಲ್ಲಕ್ಕಿಂತ ಮಿಗಿಲಾಗಿ, ಕನ್ನಡ ನುಡಿಯ ಏಳಿಗೆಗಾಗಿ ಶ್ರಮಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಅವರು ಸಲ್ಲಿಸಿದ ಸೇವೆ ಸಲ್ಲಿಸಿದ್ದಾರೆ.

ಆಡುಮಾತಿನ ಸೊಗಡು
ಹೊಸಗನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ ಕಾಣಿಸಿಕೊಳ್ಳುತ್ತಿದ್ದ ಆರಂಭಿಕ ದಿನಗಳಲ್ಲಿ ಪುಟ್ಟಣ್ಣನವರು ಕಾದಂಬರಿ ಪ್ರಕಾರಕ್ಕೆ ಹೊಸ ಆಯಾಮ ನೀಡಿದರು. ಅಂದಿನ ಗ್ರಾಂಥಿಕ ಭಾಷೆಯ ಚೌಕಟ್ಟನ್ನು ಮೀರಿ, ಜನಸಾಮಾನ್ಯರ ಆಡುಮಾತಿನ ಸೊಗಡನ್ನು ಬಳಸಿ ಕಾದಂಬರಿಗಳನ್ನು ರಚಿಸಿದ್ದು ಇವರ ವಿಶೇಷತೆ. ಇವರು ಬರೆದ ‘ಮಾಡಿದ್ದುಣ್ಣೋ ಮಹಾರಾಯ’, ‘ಮುಸುಗ ತೆಗೆಯೇ ಮಾಯಾಂಗನೆ’ ಹಾಗೂ ‘ಅವರಿಲ್ಲದೂಟ’ ಮುಂತಾದ ಕಾದಂಬರಿಗಳು ಅಂದಿನ ಸಾಮಾಜಿಕ ವಾಸ್ತವಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದರಿಂದ ಬಹುಬೇಗ ಜನಪ್ರಿಯವಾದವು.

ಕಥಾ ಸಾಹಿತ್ಯ, ಜೀವನ ಚರಿತ್ರೆ
ಪುಟ್ಟಣ್ಣನವರ ಸಾಹಿತ್ಯ ಕೃಷಿ ಕೇವಲ ಕಾದಂಬರಿಗಳಿಗೆ ನಿಲ್ಲದೆ ಕಥೆ, ಪತ್ರಿಕಾ ಸಾಹಿತ್ಯ, ಭಾಷಾಂತರ, ರೂಪಾಂತರ ಮತ್ತು ಹಳೆಯ ಕಾವ್ಯಗಳ ಪ್ರಕಟಣೆಯವರೆಗೂ ವ್ಯಾಪಿಸಿತ್ತು. ಪುರಾಣ, ಇತಿಹಾಸ, ಕಾವ್ಯ ಮತ್ತು ಶಾಸ್ತ್ರ ಗ್ರಂಥಗಳನ್ನು ಆಧರಿಸಿ ಇವರು ಸುಮಾರು 150ಕ್ಕೂ ಹೆಚ್ಚು ಕಥೆಗಳನ್ನು ರಚಿಸಿದ್ದಾರೆ. ‘ನೀತಿ ಚಿಂತಾಮಣಿ’, ‘ಪುಟ್ಟಣ್ಣ ಹೇಳಿದ ಕಥೆಗಳು’ ಮತ್ತು ‘ಪೇಟೆ ಮಾತೇನಜ್ಜಿ’ ಇವರ ಪ್ರಮುಖ ಕಥಾ ಸಂಕಲನಗಳಾಗಿವೆ. ಜೀವನ ಚರಿತ್ರೆಗಳ ರಚನೆಯಲ್ಲೂ ಸಿದ್ಧಹಸ್ತರಾಗಿದ್ದ ಇವರು, ಚೀನಾ ದೇಶದ ತತ್ವಜ್ಞಾನಿ ಕನ್ಫ್ಯೂಷಿಯಸ್ ಕುರಿತ ‘ಕಂಫೂಷನ ಚರಿತ್ರೆ’, ‘ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ’, ಹೈದರಾಬಾದಿನ ಮಂತ್ರಿ ‘ಸರ್ ಸಾಲಾರ್ಜಂಗ್ನ ಚರಿತ್ರೆ’, ಬಹುಮನಿ ಸಂಸ್ಥಾನದ ಮಂತ್ರಿ ‘ಮಹಮ್ಮದ್ ಗವಾನನ ಚರಿತ್ರೆ’ ಹಾಗೂ ‘ಛತ್ರಪತಿ ಶಿವಾಜಿ ಮಹಾರಾಜ’ರ ಚರಿತ್ರೆಗಳನ್ನು ಕನ್ನಡಕ್ಕೆ ನೀಡಿದರು.

ಅನ್ಯಭಾಷೆಯ ಶ್ರೇಷ್ಠ ಕೃತಿಗಳನ್ನು ಕನ್ನಡದ ನೆಲದ ಸೊಗಡಿಗೆ ಒಗ್ಗಿಸಿ ರೂಪಾಂತರಿಸುವಲ್ಲಿಯೂ ಪುಟ್ಟಣ್ಣನವರು ಯಶಸ್ವಿಯಾದರು. ವಿಶ್ವವಿಖ್ಯಾತ ನಾಟಕಕಾರ ಶೇಕ್ಸ್ಪಿಯರ್ನ ಮೂರು ಪ್ರಸಿದ್ಧ ನಾಟಕಗಳನ್ನು ಅವರು ಕನ್ನಡಕ್ಕೆ ರೂಪಾಂತರಿಸಿದರು. ‘ಸಿಂಬಲೈನ್’ ನಾಟಕವನ್ನು ‘ಜಯಸಿಂಹರಾಜ ಚರಿತ್ರೆ’ಯಾಗಿಯೂ, ‘ಕಿಂಗ್ ಲಿಯರ್’ ನಾಟಕವನ್ನು ‘ಹೇಮಚಂದ್ರ ರಾಜವಿಲಾಸ’ವಾಗಿಯೂ ಹಾಗೂ ‘ಹ್ಯಾಮ್ಲೆಟ್’ ನಾಟಕವನ್ನು ‘ಹೇಮಲತ’ ಎಂದೂ ಕನ್ನಡೀಕರಿಸಿದರು. ಇದರೊಂದಿಗೆ ‘ದ ಹಿಸ್ಟರಿ ಆಫ್ ಸ್ಯಾಂಡ್ ಫೋರ್ಡ್ ಅಂಡ್ ಮರ್ಟನ್’ ಕೃತಿಯನ್ನು ‘ಸುಮತಿ ಮದನ ಸುಕುಮಾರ ಚರಿತ್ರೆ’ಯಾಗಿ ಹಾಗೂ ಪರ್ಷಿಯನ್ ಮೂಲದ ‘ಹಾತಿಂತಾಯ್’ (ಅಪ್ರಕಟಿತ) ಕೃತಿಯನ್ನು ರೂಪಾಂತರಿಸಿ ಕನ್ನಡ ಸಾಹಿತ್ಯದ ವಿಸ್ತಾರವನ್ನು ಹೆಚ್ಚಿಸಿದರು.

ಪಾಳೆಯಗಾರರ ಕುರಿತು ಇತಿಹಾಸಿದ ಕೃತಿಗಳು
ಕನ್ನಡ ನಾಡಿನ ಪ್ರಾದೇಶಿಕ ಇತಿಹಾಸವನ್ನು ದಾಖಲಿಸುವಲ್ಲಿ ಪುಟ್ಟಣ್ಣನವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಾಡಿನ ಪಾಳೇಗಾರರ ಇತಿಹಾಸದ ಕುರಿತು ಆಳವಾದ ಸಂಶೋಧನೆ ನಡೆಸಿದ ಅವರು ‘ಪಾಳೆಯಗಾರರ ಐದು ಉಪನ್ಯಾಸಗಳು’, ‘ಚಿತ್ರದುರ್ಗದ ಪಾಳೆಯಗಾರರು’, ‘ಗುಮ್ಮ ನಾಯಕನ ಪಾಳಯದ ಪಾಳೆಯಗಾರರು’, ‘ಹಾಗಲವಾಡಿ ಪಾಳಯದ ಪಾಳೆಯಗಾರರು’ ಹಾಗೂ ‘ಇಕ್ಕೇರಿ ಸಂಸ್ಥಾನದ ಚರಿತ್ರೆ’ ಎಂಬ ಮೌಲಿಕ ಕೃತಿಗಳನ್ನು ರಚಿಸಿ ಇತಿಹಾಸ ಕ್ಷೇತ್ರಕ್ಕೆ ಮೆರಗು ತಂದರು. ಅಷ್ಟೇ ಅಲ್ಲದೆ, ಅಂದಿನ ಕಾಲದಲ್ಲಿ ಶಾಲಾ ಮಕ್ಕಳಿಗೆ ಇದ್ದ ಕನ್ನಡ ಪಠ್ಯಪುಸ್ತಕಗಳ ಕೊರತೆಯನ್ನು ನೀಗಿಸಲು ‘ಹಿಂದೂ ಚರಿತ್ರೆ ದರ್ಪಣ’, ‘ಹಿಂದೂ ಚರಿತ್ರೆ ಸಂಗ್ರಹ’, ‘ಕನ್ನಡ ಲೇಖನ ಲಕ್ಷಣ’ ಹಾಗೂ ‘ಕನ್ನಡ ಒಂದನೆಯ ಪುಸ್ತಕ’ದಂತಹ ಉಪಯುಕ್ತ ಕೃತಿಗಳನ್ನು ರಚಿಸಿ ಶೈಕ್ಷಣಿಕ ಪ್ರಗತಿಗೆ ನೆರವಾದರು.

ಕನ್ನಡದ ಅಮರ ಚೇತನಕ್ಕೆ ನಮನ
ಸುಮಾರು 76 ವರ್ಷಗಳ ಕಾಲ ಸಾರ್ಥಕ ಬದುಕು ನಡೆಸಿದ ಎಂ.ಎಸ್. ಪುಟ್ಟಣ್ಣನವರು 1930ರ ಏಪ್ರಿಲ್ 11ರಂದು ಇಹಲೋಕ ತ್ಯಜಿಸಿದರು. ಭೌತಿಕವಾಗಿ ಅವರು ನಮ್ಮನ್ನಗಲಿದ್ದರೂ, ಅವರು ರಚಿಸಿದ ಅಮೂಲ್ಯ ಕೃತಿಗಳು ಮತ್ತು ಕನ್ನಡ ನುಡಿಗಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆ ಇಂದಿಗೂ ಜೀವಂತವಾಗಿದೆ. ಈ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಅಂತಹ ಧೀಮಂತ ಸಾಹಿತಿಯ ಕೊಡುಗೆಗಳನ್ನು ಸ್ಮರಿಸುವುದು ಮತ್ತು ಅವರ ಕನ್ನಡ ಪ್ರೇಮವನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now