ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಖಾತೆದಾರರಿಗೆ 58 ವರ್ಷಗಳ ನಿವೃತ್ತಿ ಅವಧಿಯ ನಂತರ ಪ್ರತಿ ತಿಂಗಳು ಪಿಂಚಣಿ ಸೌಲಭ್ಯ ಲಭ್ಯವಿರುತ್ತದೆ. ಆದರೆ, ಇಪಿಎಸ್ (EPS) ಅಡಿಯಲ್ಲಿ ಪಿಂಚಣಿ ಪಡೆಯುವವರು ಪ್ರತಿ ವರ್ಷ ಕಡ್ಡಾಯವಾಗಿ ಜೀವಿತ ಪ್ರಮಾಣಪತ್ರವನ್ನು (Life Certificate) ಸಲ್ಲಿಸಬೇಕಾಗುತ್ತದೆ.
ಇದಕ್ಕಾಗಿ ಪಿಂಚಣಿದಾರರು ಇಪಿಎಫ್ಒ ಕಚೇರಿಗಳಿಗೆ ಅಲೆಯಬೇಕಾದ ಅಗತ್ಯವಿಲ್ಲ. ಬದಲಾಗಿ, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಈ ಪ್ರಮಾಣಪತ್ರವನ್ನು ಸುಲಭವಾಗಿ ಸಲ್ಲಿಸಬಹುದು. ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಪಿಂಚಣಿ ಪಡೆಯುವವರು ಈ ಪ್ರಮಾಣಪತ್ರವನ್ನು ಸಲ್ಲಿಸಲು ನವೆಂಬರ್ 30ರವರೆಗೆ ಮಾತ್ರ ಕೇಂದ್ರ ಸರ್ಕಾರ ಗಡುವು ನೀಡಿದ್ದು, ಈ ದಿನಾಂಕದೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಆನ್ಲೈನ್ ಸೌಲಭ್ಯದ ಪ್ರಯೋಜನಗಳು
ಪಿಂಚಣಿದಾರರು ಜೀವಂತವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪ್ರಮಾಣಪತ್ರ ಅತ್ಯಗತ್ಯವಾಗಿದೆ. ನಿಗದಿತ ದಿನಾಂಕದೊಳಗೆ ಇದನ್ನು ಸಲ್ಲಿಸದಿದ್ದರೆ ಮುಂದಿನ ತಿಂಗಳಿನಿಂದ ಪಿಂಚಣಿ ಹಣ ಸ್ಥಗಿತಗೊಳ್ಳುವ ಅಪಾಯವಿದೆ. ವಯೋವೃದ್ಧರು, ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ಓಡಾಡಲು ಕಷ್ಟವಾಗುವವರ ಅನುಕೂಲಕ್ಕಾಗಿ ಉಮಂಗ್ ಆ್ಯಪ್ (UMANG App) ಮತ್ತು ಆಧಾರ್ ಮುಖದ ದೃಢೀಕರಣ (Aadhaar Face Authentication) ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ಆಗಿ ಪ್ರಮಾಣಪತ್ರ ಸಲ್ಲಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.
ಉಮಂಗ್ ಆ್ಯಪ್ ಮೂಲಕ ಪ್ರಮಾಣಪತ್ರ ಸಲ್ಲಿಸುವ ವಿಧಾನ
ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಲು ಪಿಂಚಣಿದಾರರು ಮೊದಲು ತಮ್ಮ ಮೊಬೈಲ್ನಲ್ಲಿ ಉಮಂಗ್ ಆ್ಯಪ್ ತೆರೆದು, ಸರ್ಚ್ ಬಾರ್ನಲ್ಲಿ ಲೈಫ್ ಸರ್ಟಿಫಿಕೇಟ್ (Life Certificate) ಎಂದು ಟೈಪ್ ಮಾಡಬೇಕು. ಆನಂತರ ಅಲ್ಲಿ ಕೇಳಲಾಗುವ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಗ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು (OTP) ಹಾಕಿ ದೃಢೀಕರಿಸಬೇಕು. ಇದಾದ ಬಳಿಕ ಪಿಂಚಣಿದಾರರ ಹೆಸರು, ಪಿಂಚಣಿ ಪ್ರಕಾರ, ಸಂಸ್ಥೆಯ ಹೆಸರು, ಪಿಂಚಣಿ ಮಂಜೂರು ಮಾಡುವ ಅಧಿಕಾರಿ, ಹಣ ವಿತರಿಸುವ ಏಜೆನ್ಸಿ, ಪಿಪಿಒ (PPO) ಸಂಖ್ಯೆ ಮತ್ತು ಪಿಂಚಣಿ ಖಾತೆ ಸಂಖ್ಯೆಯಂತಹ ಅಗತ್ಯ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕಾಗುತ್ತದೆ.
ಮುಖ ದೃಢೀಕರಣ ಮತ್ತು ಪ್ರಮಾಣಪತ್ರ ಲಭ್ಯತೆ
ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ಮೇಲೆ ‘ಆಧಾರ್ ಫೇಸ್ ಆರ್ಡಿ’ (Aadhaar Face RD) ಆ್ಯಪ್ ಸಹಾಯದಿಂದ ಮುಖವನ್ನು ಸ್ಕ್ಯಾನ್ ಮಾಡಿ ದೃಢೀಕರಿಸಬೇಕು. ಈ ಮುಖ ದೃಢೀಕರಣ ಪ್ರಕ್ರಿಯೆ ಯಶಸ್ವಿಯಾದ ತಕ್ಷಣ ನಿಮ್ಮ ಡಿಜಿಟಲ್ ಜೀವಿತ ಪ್ರಮಾಣಪತ್ರವು ಸೃಷ್ಟಿಯಾಗುತ್ತದೆ. ಇದರ ಬೆನ್ನಲ್ಲೇ ನಿಮ್ಮ ಮೊಬೈಲ್ಗೆ ಎಸ್ಎಂಎಸ್ ಮೂಲಕ ‘ಜೀವನ್ ಪ್ರಮಾಣ್ ಐಡಿ’ ರವಾನೆಯಾಗುತ್ತದೆ. ತರುವಾಯ ಉಮಂಗ್ ಆ್ಯಪ್ನ ವ್ಯೂ ಸರ್ಟಿಫಿಕೇಟ್ (View Certificate) ಆಯ್ಕೆಗೆ ಹೋಗಿ ಪ್ರಮಾಣಪತ್ರವನ್ನು ನೋಡಬಹುದು ಅಥವಾ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ನೀವು ಆನ್ಲೈನ್ನಲ್ಲಿ ಇದನ್ನು ಸಲ್ಲಿಸಿದ ತಕ್ಷಣ, ಅದು ನೇರವಾಗಿ ನಿಮ್ಮ ಪಿಂಚಣಿ ವಿತರಣಾ ಸಂಸ್ಥೆಗೆ ಡಿಜಿಟಲ್ ರೂಪದಲ್ಲಿ ರವಾನೆಯಾಗುತ್ತದೆ. ಹೀಗಾಗಿ ಭೌತಿಕವಾಗಿ ಯಾವುದೇ ಕಾಗದ ಪತ್ರಗಳನ್ನು (Physical copy) ಕಚೇರಿಗೆ ಹೋಗಿ ನೀಡುವ ಅಗತ್ಯವಿರುವುದಿಲ್ಲ.











