Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ‘ಕರ್ತವ್ಯ’ ಆ್ಯಪ್‌ನಲ್ಲಿ ಚಲನವಲನ, ನಗದು ಘೋಷಣೆ ವಿವರ ದಾಖಲಿಸುವುದು ಕಡ್ಡಾಯ

---Advertisement---

ಬೆಂಗಳೂರು : ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮಗಳು ಮತ್ತು ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ನೌಕರರು ದಿನಾಂಕ 01.12.2026 ರಿಂದ ಜಾರಿಗೆ ಬರುವಂತೆ ‘ಕರ್ತವ್ಯ’ ಅಪ್ಲಿಕೇಶನ್ ತಂತ್ರಾಂಶದಲ್ಲಿಯೇ ತಮ್ಮ ಚಲನವಲನ ವಹಿ (Movement Register) ಹಾಗೂ ನಗದು ಘೋಷಣಾ ವಹಿಯನ್ನು (Cash Declaration Register) ಕಡ್ಡಾಯವಾಗಿ ದಾಖಲಿಸಬೇಕೆಂದು ಸರ್ಕಾರ ಆದೇಶಿಸಿದೆ.

ನವೆಂಬರ್ 16, 2026 ರಂದು ಈ ಕುರಿತಾದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯ (KAAMS) ಅಡಿಯಲ್ಲಿ ಬರುವ ‘ಕರ್ತವ್ಯ’ ಆ್ಯಪ್‌ನಲ್ಲಿ ಪ್ರಸ್ತುತ ಈ ಎರಡೂ ವಹಿಗಳನ್ನು ನಿರ್ವಹಿಸುವ ಸೌಲಭ್ಯವನ್ನು ಹೊಸದಾಗಿ ಒದಗಿಸಲಾಗಿದೆ.

ಹಿನ್ನೆಲೆ ಮತ್ತು ನ್ಯಾಯಾಲಯದ ಸೂಚನೆ

ಈ ಹಿಂದೆ ಕಚೇರಿ ಅವಧಿಯಲ್ಲಿ ಅನ್ಯ ಕರ್ತವ್ಯದ ಮೇಲೆ ತೆರಳಬೇಕಾಗಿದ್ದಲ್ಲಿ, ಚಲನವಲನ ವಹಿಯಲ್ಲಿ ಸಕಾರಣವನ್ನು ನಮೂದಿಸಿ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿತ್ತು. ಅಲ್ಲದೆ, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು 2021 ರಲ್ಲಿ ನೀಡಿದ ನಿರ್ದೇಶನದಂತೆ, ಪ್ರತಿಯೊಬ್ಬ ನೌಕರರು ಪ್ರತಿದಿನ ಕೆಲಸದ ದಿನ ಪ್ರಾರಂಭದಲ್ಲಿ ಕಚೇರಿಗೆ ತಂದಿರುವ ನಗದು ಮೊತ್ತವನ್ನು ನಗದು ಘೋಷಣಾ ವಹಿಯಲ್ಲಿ ತಮ್ಮ ಸಹಿಯೊಂದಿಗೆ ಘೋಷಿಸಬೇಕೆಂದು ಸೂಚಿಸಲಾಗಿತ್ತು. ಆದರೆ, ಸರ್ಕಾರಿ ಕಚೇರಿಗಳಲ್ಲಿ ಈ ಎರಡೂ ವಹಿಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇದೀಗ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿ ‘ಕರ್ತವ್ಯ’ ಆ್ಯಪ್ ಮೂಲಕವೇ ಕಡ್ಡಾಯವಾಗಿ ನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮದ ಎಚ್ಚರಿಕೆ

ನೌಕರರು ಮತ್ತು ಅಧಿಕಾರಿಗಳು ‘ಕರ್ತವ್ಯ’ ತಂತ್ರಾಂಶದಲ್ಲಿ ಈ ನಮೂದುಗಳನ್ನು ಮಾಡುತ್ತಿರುವ ಬಗ್ಗೆ ಆಯಾ ಇಲಾಖೆಯ ನೋಡಲ್ ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ತಂತ್ರಾಂಶದಲ್ಲಿ ಈ ವಿವರಗಳನ್ನು ನಮೂದಿಸದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಸಕ್ಷಮ ಪ್ರಾಧಿಕಾರವು ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

Join WhatsApp

Join Now

Join Telegram

Join Now