Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING : ಬೆಳ್ಳಂಬೆಳಗ್ಗೆ ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ವಿವಿಧೆಡೆ ಲೋಕಾಯುಕ್ತ ದಿಢೀರ್ ದಾಳಿ

---Advertisement---

ಬೆಂಗಳೂರು : ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆಯೇ ಅಖಾಡಕ್ಕಿಳಿದಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಹಾಗೂ ಲಂಚದ ಆರೋಪದಡಿ ಬಾಗಲಕೋಟೆ, ಚಿತ್ರದುರ್ಗ, ಹಾಸನ ಮತ್ತು ಹುಬ್ಬಳ್ಳಿ ಸೇರಿದಂತೆ ರಾಜ್ಯದ ಒಟ್ಟು 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ತೀವ್ರ ಬಿಸಿ ಮುಟ್ಟಿಸಿದ್ದಾರೆ.

ಹುಬ್ಬಳ್ಳಿಯ ಗಾಂಧಿನಗರದಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಹಾಗೂ ಕಂಡಕ್ಟರ್ ಆಗಿರುವ ಷಡಕ್ಷರಯ್ಯ ಎಂಬುವವರ ಮನೆ ಮೇಲೆ ಲೋಕಾಯುಕ್ತರು ಹಠಾತ್ ದಾಳಿ ನಡೆಸಿದ್ದಾರೆ. ಓರ್ವ ಸಾಮಾನ್ಯ ಕಂಡಕ್ಟರ್ ಆಗಿದ್ದುಕೊಂಡು ಆದಾಯಕ್ಕಿಂತ ಮೀರಿ ಅಕ್ರಮವಾಗಿ ಆಸ್ತಿ ಗಳಿಸಿರುವ ಗಂಭೀರ ಆರೋಪ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಲೋಕಾಯುಕ್ತ ಎಸ್.ಪಿ ಸಿದ್ದಲಿಂಗಪ್ಪನವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮನೆಗೆ ನುಗ್ಗಿದ್ದು, ಆಸ್ತಿ ಪತ್ರಗಳು ಮತ್ತು ಬ್ಯಾಂಕ್ ದಾಖಲೆಗಳ ತೀವ್ರ ಶೋಧನೆಯಲ್ಲಿ ತೊಡಗಿದೆ.

ಇದೇ ವೇಳೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಪಂಚಾಯಿತಿ ಅಧಿಕಾರಿಯಾಗಿರುವ ಸಂಜೀವ ಹಿಪ್ಪರಗಿ ಅವರ ಮನೆ ಮೇಲೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಪಂಚಾಯತ್ ರಾಜ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಲಂಚ ಪಡೆಯುವಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಇತ್ತ ಚಿತ್ರದುರ್ಗದಲ್ಲಿ ಕೂಡ ಕಾರ್ಯಾಚರಣೆ ಚುರುಕುಗೊಂಡಿದ್ದು, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾಕ್ಟರ್ ರವೀಂದ್ರ ಹಾಗೂ ತೂಕ ಮತ್ತು ಅಳತೆ ಇಲಾಖೆಯ ಇನ್ಸ್ಪೆಕ್ಟರ್ ವೆಂಕಟೇಶ್ ಅವರ ನಿವಾಸಗಳ ಮೇಲೂ ದಾಳಿಯಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ವಲಯದಲ್ಲಿ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಅವರಿಗೂ ಅನಿರೀಕ್ಷಿತ ಶಾಕ್ ಎದುರಾಗಿದೆ. ಇವರ ವಿರುದ್ಧವೂ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಮಾಡಿರುವ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮನೆ ಮೇಲೆ ರೇಡ್ ಮಾಡಲಾಗಿದೆ.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ದಾಳಿಗೊಳಗಾದ ಅಧಿಕಾರಿಗಳ ಮನೆಗಳಲ್ಲಿ ಸದ್ಯ ಕಾಗದ ಪತ್ರಗಳ ಪರಿಶೀಲನೆ ಬಿರುಸಿನಿಂದ ಸಾಗಿದೆ. ಪತ್ತೆಯಾಗಿರುವ ಆಸ್ತಿಪಾಸ್ತಿಗಳು ಹಾಗೂ ಅವುಗಳ ಮೂಲದ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಲಾಗುತ್ತಿದೆ. ಒಟ್ಟಾರೆ ಈ ಪರಿಶೀಲನೆಗಳ ಬಳಿಕ ಲಭ್ಯವಾಗುವ ದಾಖಲೆಗಳ ಆಧಾರದ ಮೇಲೆ ಲೋಕಾಯುಕ್ತರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಿದ್ದಾರೆ.

Join WhatsApp

Join Now

Join Telegram

Join Now