ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಮತ್ತಷ್ಟು ಹೈಟೆಕ್ ಆಗಲಿದ್ದು, ಹಲವು ವರ್ಷಗಳಿಂದ ಬಳಕೆಯಲ್ಲಿರುವ ಮೈಕ್ರೋ ಚಿಪ್ ಆಧಾರಿತ ಸ್ಮಾರ್ಟ್ ಕಾರ್ಡ್ಗಳ ಜಮಾನ ಅಂತ್ಯವಾಗಲಿದೆ. ಬದಲಾಗಿ, ಕ್ಯೂಆರ್ ಕೋಡ್ ಆಧಾರಿತ ಹೊಸ ವಿನ್ಯಾಸದ ಡಿಎಲ್ ಕಾರ್ಡ್ಗಳನ್ನು ವಿತರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಹೊಸ ಕ್ಯೂಆರ್ ಕೋಡ್ ಆಧಾರಿತ ಡ್ರೈವಿಂಗ್ ಲೈಸೆನ್ಸ್ ವ್ಯವಸ್ಥೆಯು 2027ರ ಜನವರಿ ತಿಂಗಳಿನಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಹೊಸ ವಿನ್ಯಾಸದ ಕಾರ್ಡ್ಗಳನ್ನು ಭಾರತೀಯ ನಾಗರಿಕರಿಗೆ ಹಳದಿ ಬಣ್ಣದಲ್ಲಿ ಹಾಗೂ ವಿದೇಶಿ ಪ್ರಜೆಗಳಿಗೆ ನೀಲಿ ಬಣ್ಣದಲ್ಲಿ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸದ್ಯ ಬಳಕೆಯಲ್ಲಿರುವ ಚಿಪ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿ ಈ ನೂತನ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.
ಹೊಸ ಡ್ರೈವಿಂಗ್ ಲೈಸೆನ್ಸ್ ಕಾರ್ಡ್ನ ಹಿಂಭಾಗದಲ್ಲಿ ಎಲೆಕ್ಟ್ರಾನಿಕ್ ಚಿಪ್ ಬದಲಿಗೆ ಕ್ಯೂಆರ್ ಕೋಡ್ ಇರಲಿದೆ. ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ ಡಿಜಿಟಲ್ ರೂಪದಲ್ಲಿ ಚಾಲಕನ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಚಾಲಕನ ವೈಯಕ್ತಿಕ ವಿವರಗಳ ಜೊತೆಗೆ, ರಕ್ತದ ಗುಂಪು, ವೈದ್ಯಕೀಯ ವಿವರಗಳು ಹಾಗೂ ಪ್ರಸ್ತುತ ಅವರು ತೆಗೆದುಕೊಳ್ಳುತ್ತಿರುವ ಔಷಧಿಗಳ ಸಂಪೂರ್ಣ ಮಾಹಿತಿಯೂ ಇದರಲ್ಲಿ ಅಡಕವಾಗಿರಲಿದೆ.
ಈ ನೂತನ ಕ್ಯೂಆರ್ ಕೋಡ್ ವ್ಯವಸ್ಥೆಯ ಪ್ರಮುಖ ಉದ್ದೇಶ ತುರ್ತು ಪರಿಸ್ಥಿತಿಯಲ್ಲಿ ನೆರವಾಗುವುದಾಗಿದೆ. ಒಂದು ವೇಳೆ ಚಾಲಕರು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೆ, ವೈದ್ಯರಿಗೆ ಸ್ಕ್ಯಾನಿಂಗ್ ಮೂಲಕ ತಕ್ಷಣವೇ ಚಾಲಕನ ವೈದ್ಯಕೀಯ ಹಿನ್ನೆಲೆ ಹಾಗೂ ರಕ್ತದ ಗುಂಪಿನ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ನಿಖರ ಚಿಕಿತ್ಸೆ ನೀಡಲು ಹೆಚ್ಚು ಅನುಕೂಲವಾಗಲಿದೆ.
ನೂತನ ಕಾರ್ಡ್ನ ಮುಂಭಾಗ ಹೇಗಿರಲಿದೆ?
ಕಾರ್ಡ್ನ ಹಿಂಭಾಗದಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಇದ್ದರೆ, ಕಾರ್ಡ್ನ ಮುಂಭಾಗದಲ್ಲಿ ಭಾರತದ ರಾಷ್ಟ್ರೀಯ ಲಾಂಛನವಾದ ಅಶೋಕ ಚಕ್ರ ರಾರಾಜಿಸಲಿದೆ. ಇದರೊಂದಿಗೆ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ ಮತ್ತು ಚಾಲಕನ ಭಾವಚಿತ್ರವನ್ನು ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಈ ನೂತನ ಡಿಜಿಟಲ್ ಹೆಜ್ಜೆಯನ್ನು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ, ಆಟೋ ಚಾಲಕರ ಸಂಘಟನೆಗಳು ಹಾಗೂ ಕ್ಯಾಬ್ ಸಂಘಟನೆಗಳು ಸ್ವಾಗತಿಸಿವೆ. ಒಟ್ಟಾರೆಯಾಗಿ ದೇಶದಲ್ಲಿ ಮತ್ತೊಂದು ಡಿಜಿಟಲ್ ಕ್ರಾಂತಿಗೆ ಸಾರಿಗೆ ಇಲಾಖೆ ಸಾಕ್ಷಿಯಾಗುತ್ತಿದೆ.












