ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ನವೆಂಬರ್. 14 : ಇಂದಿನ ಕಾಲದಲ್ಲಿ ರಸ್ತೆಯಲ್ಲಿ ಒಂದು ರೂಪಾಯಿ ಸಿಕ್ಕರೂ ಅದನ್ನು ಹಿಂದಿರುಗಿಸುವ ಮನಸ್ಸು ಅನೇಕರಿಗೆ ಇರುವುದಿಲ್ಲ. ಆದರೆ
ಬಂಗಾರದ ಒಡವೆಯೇ ಕೈಗೆ ಸಿಕ್ಕರೂ ಅದರ ವಾರಸುದಾರರಿಗೆ ಮರಳಿಸಬೇಕು ಎಂಬ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಚಳ್ಳಕೆರೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ

48 ಸಾವಿರ ರೂಪಾಯಿ ಮೌಲ್ಯದ ಬಂಗಾರದ ಕಿವಿಯೋಲೆ ಬಸ್ನಲ್ಲಿ ಬಿದ್ದಿದ್ದರೂ ಅದನ್ನು ತಮ್ಮದಾಗಿಸಿಕೊಳ್ಳದೆ, ನಿಜವಾದ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆಯ ಮಾದರಿಯಾಗಿದ್ದಾರೆ ಖಾಸಗಿ ಬಸ್ ಮಾಲೀಕ ಪ್ರವೀಣ್ ಕುಮಾರ್!.
ಈ ಘಟನೆ ನಡೆದಿದ್ದೆ ಹೇಗೆ..?
ಚಿತ್ರದುರ್ಗದಿಂದ ಪಾವಗಡಕ್ಕೆ ಸಂಚರಿಸುವ ಲಕ್ಷ್ಮಿನರಸಿಂಹಸ್ವಾಮಿ ಖಾಸಗಿ ಬಸ್ನಲ್ಲಿ ರಂಗಸಮುದ್ರ ಗ್ರಾಮದ ಶಿಲ್ಪ ಎಂಬ ಮಹಿಳೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಬ್ಯಾಗ್ನಲ್ಲಿದ್ದ ಸುಮಾರು 2.80 ಗ್ರಾಂ ತೂಕದ, 48 ಸಾವಿರ ರೂಪಾಯಿ ಮೌಲ್ಯದ ಬಂಗಾರದ ಕಿವಿಯೋಲೆಯ ಬಾಕ್ಸ್ ಆಕಸ್ಮಿಕವಾಗಿ ಬಸ್ನಲ್ಲಿಯೇ ಬಿದ್ದಿತ್ತು.
ಮನೆಗೆ ತೆರಳಿದ ನಂತರ ಬಂಗಾರದ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಎಲ್ಲೆಡೆ ಹುಡುಕಾಡಿದರೂ ಸಿಗದೆ ಮಹಿಳೆ ಆತಂಕಕ್ಕೊಳಗಾಗಿದ್ದರು.
ಇತ್ತ ಬಸ್ನಲ್ಲಿ ಬಿದ್ದಿದ್ದ ಬಂಗಾರದ ಬಾಕ್ಸ್ ಬಸ್ ಏಜೆಂಟ್, ಪರಶುರಾಂಪುರದ ಸಂತೋಷ್ ಕುಮಾರ್ ಅವರ ಗಮನಕ್ಕೆ ಬಂದಿದೆ.ತಕ್ಷಣವೇ ಅವರು ಬಸ್ ಮಾಲೀಕ ಜಿ.ಎನ್. ತಿಪ್ಪೇಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ. ನಂತರ ಈ ಒಡವೆಯನ್ನು ವಾರಸುದಾರರಿಗೆ ತಲುಪಿಸುವ ಜವಾಬ್ದಾರಿಯನ್ನು ಮತ್ತೊಬ್ಬ ಖಾಸಗಿ ಬಸ್ ಮಾಲೀಕ ಪ್ರವೀಣ್ ಕುಮಾರ್ ಅವರಿಗೆ ವಹಿಸಲಾಗಿದೆ.
ಇಲ್ಲಿಂದ ಆರಂಭವಾಗುತ್ತದೆ ನಿಜವಾದ ಪ್ರಾಮಾಣಿಕತೆಯ ಕಥೆ!
ಬಂಗಾರದ ಬಾಕ್ಸ್ ಮೇಲಿದ್ದ ಆಭರಣ ಅಂಗಡಿಯ ವಿಳಾಸದ ಸುಳಿವಿನ ಆಧಾರದ ಮೇಲೆ ಪ್ರವೀಣ್ ಕುಮಾರ್ ಅವರು ಅಂಗಡಿಯವರನ್ನು ಸಂಪರ್ಕಿಸಿದ್ದಾರೆ. ವಿಚಾರಿಸಿದಾಗ ಈ ಒಡವೆ ಚಳ್ಳಕೆರೆಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮಂಜುನಾಥ್ ಅವರ ಪತ್ನಿ ಶಿಲ್ಪ ಅವರಿಗೆ ಸೇರಿದ್ದು ಎಂಬುದು ತಿಳಿದುಬಂದಿದೆ. ನಂತರ ಒಡವೆಯ ಖರೀದಿ ಬಿಲ್ ಪರಿಶೀಲಿಸಿ, ಚಳ್ಳಕೆರೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಈರೇಶ್ ಅವರ ಸಮ್ಮುಖದಲ್ಲಿ ನಿಜವಾದ ವಾರಸುದಾರರಿಗೆ ಬಂಗಾರದ ಕಿವಿಯೋಲೆಯನ್ನು ಹಸ್ತಾಂತರಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ,
48 ಸಾವಿರ ರೂಪಾಯಿ ಮೌಲ್ಯದ ಬಂಗಾರ ಕೈಗೆ ಸಿಕ್ಕಾಗಲೂ ಅದನ್ನು ತಮ್ಮದಾಗಿಸಿಕೊಳ್ಳುವ ಆಲೋಚನೆ ಮಾಡದೆ, ವಾರಸುದಾರರನ್ನು ಹುಡುಕಿ ಒಡವೆ ಮರಳಿಸಿದ ಪ್ರವೀಣ್ ಕುಮಾರ್ ಅವರ ನಡೆ ನಿಜಕ್ಕೂ ಶ್ಲಾಘನೀಯ!
ಇಂತಹ ಘಟನೆಗಳು ಸಮಾಜದಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬ ಭರವಸೆ ಮೂಡಿಸುತ್ತವೆ.
ಹಣ ಸಂಪಾದಿಸುವವರು ಹಲವರಿರಬಹುದು. ಆದರೆ ಮತ್ತೊಬ್ಬರ ಕಷ್ಟವನ್ನು ಅರ್ಥಮಾಡಿಕೊಂಡು, ಅವರ ಕಳೆದುಹೋದ ಆಸ್ತಿಯನ್ನು ಮರಳಿಸುವ ದೊಡ್ಡ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ! ಹಣಕ್ಕಿಂತ ಮಾನವೀಯತೆ ದೊಡ್ಡದು… ಆಸ್ತಿಗಿಂತ ಪ್ರಾಮಾಣಿಕತೆ ಅಮೂಲ್ಯ ಎಂಬುದನ್ನು ಪ್ರವೀಣ್ ಕುಮಾರ್ ಅವರು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ.
ಬಸ್ ಏಜೆಂಟ್ ಸಂತೋಷ್ ಕುಮಾರ್, ಬಸ್ ಮಾಲೀಕ ಜಿ.ಎನ್. ತಿಪ್ಪೇಸ್ವಾಮಿ ಹಾಗೂ ಒಡವೆಯನ್ನು ವಾರಸುದಾರರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರವೀಣ್ ಕುಮಾರ್ ಅವರ ಕಾರ್ಯಕ್ಕೆ ಜನಧ್ವನಿ ನ್ಯೂಸ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.
ಇಂತಹ ಪ್ರಾಮಾಣಿಕ ವ್ಯಕ್ತಿಗಳೇ ನಮ್ಮ ಸಮಾಜದ ನಿಜವಾದ ಹೀರೋಗಳು!












