ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 14 : ಮಹಾತ್ಮಗಾಂಧಿರವರಿಂದ ಪ್ರೇರಣೆಗೊಂಡು ಬ್ರಿಟೀಷರ ವಿರುದ್ದ ಹೋರಾಡಿದ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರುರವರು ಅನೇಕ ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ. ದೇಶದ ಅಭಿವೃದ್ದಿಗೆ ಅವರ ಕೊಡುಗೆ ಅಪಾರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಮಕ್ಕಳ ದಿನಾಚರಣೆಯಲ್ಲಿ ಜವಾಹರಲಾಲ್ ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ನೆಹರುರವರು ತಮ್ಮ ಹುಟ್ಟುಹಬ್ಬವನ್ನು ಆಡಂಬರವಾಗಿ ಆಚರಿಸುವ ಬದಲು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿ ಎಂದು ಕರೆ ಕೊಟ್ಟಿದ್ದರಿಂದ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನೆಹರುರವರ ನಂತರ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ರಾಜೀವ್ಗಾಂಧಿ ಇವರುಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ನೆಹರು ಮನೆತನದ ಕುಡಿ ರಾಹುಲ್ಗಾಂಧಿ ಕೂಡ ತಮ್ಮ ಹಿರಿಯರ ಹಾದಿಯಲ್ಲಿ ನಡೆಯುತ್ತಿದ್ದಾರೆ. ಭಾರತ ವಿಭಜನೆಯಾಗಲು ನೆಹರು ಕಾರಣ ಎಂದು ಬಿಜೆಪಿ.ಯವರು ಅಪ ಪ್ರಚಾರ ಮಾಡುತ್ತಿರುವುದು ಶುದ್ದ ಸುಳ್ಳು, ಬ್ರಿಟೀಷರ ಕುಮ್ಮಕ್ಕಿನಿಂದ
ಹಿಂದೂ ಮಹಾಸಭಾ ಹಾಗೂ ಮುಸ್ಲಿಂ ಲೀಗ್ನವರು ದೇಶದ ವಿಭಜನೆಗೆ ಕಾರಣ ಎನ್ನುವುದನ್ನು ಕೋಮುವಾದಿ ಬಿಜೆಪಿ.ಯವರು ಮರೆಯಬಾರದು ಎಂದರು.
ಬ್ರಿಟೀಷರು ದೇಶಕ್ಕೆ ಸ್ವಾತಂತ್ರ ಕೊಟ್ಟಾಗ ಭಾರತ ಕಷ್ಟದಲ್ಲಿತ್ತು. ಆಗ ಪ್ರಧಾನಿಯಾದ ಜವಾಹರಲಾಲ್ ನೆಹರು ಪಂಚ ವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ಕೃಷಿ
ಕೈಗಾರಿಕೆ, ಶಿಕ್ಷಣ, ನೀರಾವರಿಗೆ ಒತ್ತು ಕೊಟ್ಟರು. ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಯಿತು. ಬಾಕ್ರಾ ನಂಗಲ್ ಡ್ಯಾಂಗೆ ಅಡಿಪಾಯ ಹಾಕಿದ್ದು, ನೆಹರುರವರು ಎನ್ನುವುದನ್ನು ವಿರೋಧಿಗಳು ಮರೆಯಬಾರದು ಎಂದು ಎಚ್ಚರಿಸಿದರು.
ಜವಾಹರಲಾಲ್ ನೆಹರುರವರ ಜೊತೆ ಲಾಲ್ಬಹದ್ದೂರ್ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಸೇರಿದಂತೆ ಅನೇಕರು ದೇಶದ ಅಭಿವೃದ್ದಿಗೆ ಕೈಜೋಡಿಸಿದ್ದಾರೆ.
ಸಂವಿಧಾನ ರಚಿಸುವ ಹೊಣೆಯನ್ನು ಡಾ.ಬಿ.ಆರ್.ಅಂಬೇಡ್ಕರ್ಗೆ ವಹಿಸಿದರು. ಅದೇ ರೀತಿ ಶಿಕ್ಷಣದಲ್ಲಿ ದೇಶ ಉನ್ನತ ಮಟ್ಟಕ್ಕೆ ಏರಬೇಕೆಂದು ಮೌಲಾನ ಅಬು ಕಲಾಂಗೆ ಶಿಕ್ಷಣ ಖಾತೆಯನ್ನು ನೀಡಿದರು. ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ನೆಹರುರವರು ಲಂಡನ್ನಲ್ಲಿ ಶಿಕ್ಷಣ ಪಡೆದು ಬ್ಯಾರಿಸ್ಟರ್ ಆಗಿದ್ದರು. ಅಲಹಾಬಾದ್ನಲ್ಲಿ ಆನಂದ ಭವನವನ್ನು ಕೊಡುಗೆಯಾಗಿ ನೀಡಿದ ಕೀರ್ತಿ ನೆಹರು ಕುಟುಂಬಕ್ಕೆ ಸಲ್ಲುತ್ತದೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಮಕ್ಕಳಿಗೆ ಅಚ್ಚುಮೆಚ್ಚಿನವರಾಗಿದ್ದ ಜವಾಹರಲಾಲ್ ನೆಹರುರವರ ಜನ್ಮ
ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಪ್ರತಿ ವರ್ಷವೂ ಆಚರಿಸಿಕೊಂಡು ಬರಲಾಗುತ್ತಿದೆ. ಅಲಿಪ್ತ ರಾಷ್ಟ್ರಗಳಾದ ಅಮೇರಿಕಾ, ರಷ್ಯ ನಡುವೆ ಶೀತಲ ಸಮರವನ್ನು ಕೊನೆಗಾಣಿಸಲು ನೆಹರುರವರು ಉಸ್ತುವಾರಿ ವಹಿಸಿಕೊಂಡಿದ್ದರು. ದೇಶದ ಪ್ರಧಾನಿಯಾಗಿದ್ದಾಗ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಮೆಡಿಕಲ್ ಸೈನ್ಸ್, ತಂತ್ರಜ್ಞಾನ, ಕೃಷಿ ಕೈಗಾರಿಕೆ, ನೀರಾವರಿಗೆ ಹೆಚ್ಚಿನ ಒತ್ತು ಕೊಟ್ಟ ಪರಿಣಾಮ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದೆ ಎಂದು ನುಡಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷೆ ನಜ್ಮತಾಜ್, ಮುದಸಿರ್ ನವಾಜ್, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ನಾಗರಾಜ್
ಪೈಲೆಟ್, ನ್ಯಾಯವಾದಿ ಸುದರ್ಶನ್, ಯೂತ್ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ನ್ಯಾಯವಾದಿ ಎನ್.ಶಶಾಂಕ್, ಸೇವಾದಳದ ಜಿಲ್ಲಾಧ್ಯಕ್ಷ ಬೂತೇಶ್, ಸೈಯದ್ ಸೈಫುಲ್ಲಾ, ಚಾಂದ್ಪೀರ್ ಇನ್ನು ಅನೇಕರು ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿದ್ದರು.











