Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುರಕ್ಷಿತ ದೀಪಾವಳಿ ಆಚರಣೆಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

Police department issues guidelines for safe Diwali celebration
---Advertisement---

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಸುರಕ್ಷಿತ ಹಾಗೂ ಪರಿಸರಸ್ನೇಹಿಯಾಗಿ ಆಚರಿಸಲು ಬೆಂಗಳೂರು ನಗರ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶಗಳು ಹಾಗೂ ಸರ್ಕಾರದ ನಿಯಮಗಳ ಅನ್ವಯ ಪಟಾಕಿ ಸಿಡಿಸುವ ಸಮಯ ಮತ್ತು ಸುರಕ್ಷತಾ ಕ್ರಮಗಳ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಪ್ರಮುಖ ಮಾರ್ಗಸೂಚಿಗಳು

ಪಟಾಕಿ ಸಿಡಿಸುವ ಸಮಯ: ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ, ರಾತ್ರಿ 8:00 ಗಂಟೆಯಿಂದ 10:00 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ಇರುತ್ತದೆ.

ಹಸಿರು ಪಟಾಕಿ ಬಳಕೆ: ಪರಿಸರಸ್ನೇಹಿ ಹಸಿರು ಪಟಾಕಿಗಳನ್ನು (Green Crackers) ಮಾತ್ರ ಖರೀದಿಸಬೇಕು. ಪ್ಯಾಕೆಟ್ ಮೇಲಿರುವ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅವುಗಳ ನೈಜತೆಯನ್ನು ಪರಿಶೀಲಿಸಬೇಕು.

ಪರವಾನಗಿ ಪಡೆದ ಅಂಗಡಿಗಳಿಂದಷ್ಟೇ ಖರೀದಿ: ಮಾನ್ಯತೆ ಪಡೆದ ಹಾಗೂ ಅಧಿಕೃತ ಲೈಸೆನ್ಸ್ ಪ್ರದರ್ಶಿಸಿರುವ ಮಳಿಗೆಗಳಿಂದಲೇ ಗುಣಮಟ್ಟದ ಪಟಾಕಿಗಳನ್ನು ಖರೀದಿಸಬೇಕು. ಅನಧಿಕೃತ ಮಾರಾಟ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.

ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಬಂಧ: ಆಸ್ಪತ್ರೆಗಳು, ಪೆಟ್ರೋಲ್ ಬಂಕ್‌ಗಳು, ಗ್ಯಾಸ್ ಸ್ಟೇಷನ್‌ಗಳು, ಧಾರ್ಮಿಕ ಸ್ಥಳಗಳು, ವೃದ್ಧಾಶ್ರಮಗಳು ಮತ್ತು ಶಿಶುಪಾಲನಾ ಕೇಂದ್ರಗಳ ಸುತ್ತಮುತ್ತ ಪಟಾಕಿ ಸಿಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ರಸ್ತೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ನಿಷೇಧ: ವಾಹನಗಳನ್ನು ನಿಲುಗಡೆ ಮಾಡಿರುವ ಜಾಗಗಳು, ಮುಖ್ಯ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಹೊಡೆಯಬಾರದು. ತೆರೆದ ಮೈದಾನಗಳು ಅಥವಾ ಕಡಿಮೆ ಜನರಿರುವ ಸ್ಥಳಗಳಲ್ಲಿ ಸಿಡಿಸುವುದು ಸೂಕ್ತ.

ಮಕ್ಕಳ ಸುರಕ್ಷತೆ: ಮಕ್ಕಳು ಸ್ವತಂತ್ರವಾಗಿ ಪಟಾಕಿ ಸಿಡಿಸಲು ಬಿಡಬಾರದು; ಪೋಷಕರು ತಮ್ಮ ನೇರ ಮೇಲ್ವಿಚಾರಣೆಯಲ್ಲಿಯೇ ಪಟಾಕಿ ಹಚ್ಚಿಸಬೇಕು. ಕೈಯಲ್ಲಿ ಹಿಡಿದು ಪಟಾಕಿ ಸಿಡಿಸುವುದು ಅಪಾಯಕಾರಿ.

ವಸ್ತ್ರಸಂಹಿತೆ ಮತ್ತು ಸುರಕ್ಷತೆ: ಪಟಾಕಿ ಹೊಡೆಯುವಾಗ ಕೈಗವಸು (Gloves) ಹಾಗೂ ಕಣ್ಣಿನ ರಕ್ಷಣೆಗೆ ಕನ್ನಡಕ (Goggles) ಧರಿಸುವುದು ಒಳ್ಳೆಯದು. ಸಿಂಥೆಟಿಕ್, ನೈಲಾನ್ ಅಥವಾ ಪಾಲಿಯೆಸ್ಟರ್ ಬಟ್ಟೆಗಳನ್ನು ತಪ್ಪಿಸಿ, ಹತ್ತಿ (ಕಾಟನ್) ಬಟ್ಟೆಗಳನ್ನೇ ಧರಿಸಬೇಕು.

ತುರ್ತು ಮುನ್ನೆಚ್ಚರಿಕೆ: ಪಟಾಕಿ ಸಿಡಿಸುವ ಸ್ಥಳದ ಬಳಿ ನೀರು, ಮರಳು ಮತ್ತು ಅಗ್ನಿಶಾಮಕ ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆಯೂ (First-aid kit) ಲಭ್ಯವಿರಬೇಕು.

ಪ್ರಾಣಿಗಳ ಬಗ್ಗೆ ಕಾಳಜಿ: ಪಟಾಕಿಗಳಿಂದ ಪ್ರಾಣಿಗಳಿಗೆ ತೊಂದರೆ ಅಥವಾ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

ತ್ಯಾಜ್ಯ ವಿಲೇವಾರಿ ಹಾಗೂ ನೈರ್ಮಲ್ಯ: ಹೊತ್ತಿ ಉರಿದ ಪಟಾಕಿಗಳನ್ನು ಬಕೆಟ್‌ನಲ್ಲಿ ಸಂಗ್ರಹಿಸಿ, ಅವುಗಳ ಮೇಲೆ ಮರಳು ಅಥವಾ ನೀರು ಸುರಿದು ಆರಿಸಬೇಕು. ಪಟಾಕಿ ಸಿಡಿಸಿದ ನಂತರ ರಸ್ತೆ, ಆಟದ ಮೈದಾನ ಮತ್ತು ಮನೆಯ ಮುಂಭಾಗದ ಸ್ವಚ್ಛತೆಯನ್ನು ಕಾಪಾಡಬೇಕು.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

ನಿಗದಿಪಡಿಸಿದ ಸಮಯ ಮೀರಿ ಅಥವಾ ನಿಯಮಗಳನ್ನು ಉಲ್ಲಂಘಿಸಿ ಪಟಾಕಿ ಸಿಡಿಸುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಸ್ಫೋಟಕ ವಸ್ತುಗಳ ಕಾಯ್ದೆ ಹಾಗೂ ಮಾಲಿನ್ಯ ನಿಯಂತ್ರಣ ಕಾನೂನುಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

ಯಾವುದೇ ಅಗ್ನಿ ಅವಘಡ ಅಥವಾ ತುರ್ತು ಸಂದರ್ಭ ಎದುರಾದಲ್ಲಿ ತಕ್ಷಣವೇ 112 ಅಥವಾ 108 ಸಹಾಯವಾಣಿಗೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

Join WhatsApp

Join Now

Join Telegram

Join Now