ಚಿತ್ರದುರ್ಗ. ನ.05: ಶಾಲಾ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಮತ್ತು ಪ್ರದರ್ಶಿಸಲು ‘ಪ್ರತಿಭಾ ಕಾರಂಜಿ’ ಕಾರ್ಯಕ್ರಮವು ಅತ್ಯುತ್ತಮವಾದ ಅವಕಾಶ ಒದಗಿಸುವ ವೇದಿಕೆಯಾಗಿದೆ ಎಂದು ಕೂನಬೇವು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಹನುಮಂತಪ್ಪ ಹೇಳಿದರು.
ತುರುವನೂರು ಹೋಬಳಿಯ ಬಾಗೇನಹಳ್ಳಿಯ ಸರ್ಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ತುರುವನೂರು ಹೋಬಳಿಯ ಕೂನಬೇವು ಕ್ಲಸ್ಟರ್ ಮಟ್ಟದ ‘ಪ್ರತಿಭಾ ಕಾರಂಜಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಶಾಲಾ ಮಕ್ಕಳಲ್ಲಿ ಅಪಾರ ಸುಪ್ತ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಹೊರತರುವ ಕೆಲಸವನ್ನು ಸಹಶಿಕ್ಷಕರು ಮಾಡಬೇಕು ಹಾಗೂ ಆ ಮೂಲಕ ಮಕ್ಕಳು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬೆಳಕಿಗೆ ಬರಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಉಮೇಶಯ್ಯ ಮಾತನಾಡಿ, ದಿನನಿತ್ಯದ ಪಾಠ ಬೋಧನೆಯೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವ ಮೂಲಕ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ನಿರ್ದೇಶಕ ರವಿಶಂಕರ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕುಮಾರಸ್ವಾಮಿ, ಶಿಕ್ಷಣ ಸಂಯೋಜಕರಾದ ವಿನೂತಾರಾಣಿ, ಮೈಲಾರಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಾಲತೇಶ್ ಉಪಸ್ಥಿತರಿದ್ದರು. ಇದೇ ವೇಳೆ ಇತ್ತೀಚೆಗೆ ನಿವೃತ್ತರಾದ ಬಾಗೇನಹಾಳ್ ಸರ್ಕಾರಿ ಶಾಲೆಯ ಸಹಶಿಕ್ಷಕಿ ರತ್ನಮ್ಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.










