ದಾವಣಗೆರೆ : ಈ ವರ್ಷದ ದೀಪಾವಳಿಯನ್ನು ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಿ ಹಾಗೂ ವಿವಿಧ ಸ್ವ ಸಹಾಯ ಸಂಘದ ಮಹಿಳೆಯರು ತಯಾರಿಸಿದ ಮಣ್ಣಿನ ದೀಪಗಳನ್ನು ಸಾರ್ವಜನಿಕರು ಖರೀದಿಸಿ ಮಹಿಳೆಯರ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ತಿಳಿಸಿದರು.
ಅವರು ಬುಧವಾರ ನಗರದ ಎಸ್. ಎಸ್ ಮಾಲ್ ಮುಂಭಾಗ ಜಿಲ್ಲಾ ಪಂಚಾಯತ್,ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಲೀಡ್ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ದೀಪ ಸಂಜೀವಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ,
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ವಿವಿಧ ತರಬೇತಿಗಳ ಜೊತೆಗೆ ಸಂಘದ ವತಿಯಿಂದ ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದ್ದು, ವಿವಿಧ ಉದ್ಯೋಗಗಳಲ್ಲಿ ತರಬೇತಿ ಪಡೆದು ಮಹಿಳೆಯರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮಹಿಳೆಯರ ಸ್ವಾವಲಂಬನೆಗೆ ಬೆಂಬಲವಾಗಿ ನಿಲ್ಲಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಣ್ಣಿನ ದೀಪಗಳನ್ನು ಖರೀದಿಸಿ, ಈ ಬಾರಿಯ ದೀಪಾವಳಿಯನ್ನು ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವಂತೆ ತಿಳಿಸಿದರು.
ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ, ಬಿ.ಎಸ್. ಸಿ ಎಕ್ಸ್ ಕ್ಲೂಸಿವ್, ಡೆಂಟಲ್ ಕಾಲೇಜು ರಸ್ತೆ ಹತ್ತಿರ ಹಾಗೂ ಎಸ್. ಎಸ್ ಮಾಲ್ ಮುಂಭಾಗ ಸೇರಿದಂತೆ ಮೂರು ಕಡೆಗಳಲ್ಲಿ ಮಣ್ಣಿನ ದೀಪಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ ,ಜಿಲ್ಲೆಯ ವಿವಿಧ ಕ್ಷೇತ್ರಗಳ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯೆಯರು ಒಗ್ಗೂಡಿ ಅತ್ಯಂತ ಸುಂದರವಾಗಿ ತಯಾರಿಸಿರುವ ಮಣ್ಣಿನಿಂದ ಮಾಡಿದ ವಿವಿಧ ಶೈಲಿಯ ದೀಪಗಳು, ಪರಿಸರ ಸ್ನೇಹಿ ಬ್ಯಾಗ್ ಗಳು ಇಂದು ಮತ್ತು ಶನಿವಾರದಂದು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್. ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸಾಹಿತ್ಯ ಎಂ ಆಲದಕಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ ಹಿರೇಮಠ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.










