ಸಾಕಷ್ಟು ನಿದ್ರೆ ಸಿಗುತ್ತಿಲ್ಲ ಎಂಬ ಕೊರಗು ಬಹುತೇಕ ಜನರನ್ನು ಕಾಡುತ್ತಿದೆ. ವಾರದ ದಿನಗಳಲ್ಲಿ ಕಡಿಮೆ ನಿದ್ರೆ ಮಾಡಿ, ಶನಿವಾರ ಮತ್ತು ಭಾನುವಾರ ತಡವಾಗಿ ಎದ್ದು ಆ ನಿದ್ರೆಯ ಕೊರತೆಯನ್ನು ಸರಿದೂಗಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ, ವಾರಾಂತ್ಯದಲ್ಲಿ ದೀರ್ಘವಾಗಿ ನಿದ್ದೆ ಮಾಡುವುದರಿಂದ ಮೆದುಳು ಮತ್ತು ದೇಹ ಮೊದಲಿನ ಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎಂಬ ಸತ್ಯ ಹಲವರಿಗೆ ತಿಳಿದಿಲ್ಲ.
ನಿದ್ರಾ ಸಂಶೋಧಕರು ವಾರದ ಕೊರತೆಯನ್ನು ‘ಸ್ಲೀಪ್ ಡೆಟ್’ ಅಥವಾ ನಿದ್ರೆಯ ಸಾಲ ಎಂದು ಕರೆಯುತ್ತಾರೆ. ಪ್ರತಿದಿನ ನಿದ್ರೆ ಕಡಿಮೆಯಾದಂತೆ ನೆನಪಿನ ಶಕ್ತಿ, ರೋಗನಿರೋಧಕ ಶಕ್ತಿ, ಮನಸ್ಥಿತಿ ಮತ್ತು ಕಾರ್ಯಕ್ಷಮತೆ ಕುಸಿಯುತ್ತಾ ಸಾಗುತ್ತದೆ. ವಾರಾಂತ್ಯದ ನಿದ್ರೆಯ ನಂತರ ದೇಹ ಹಗುರವೆನಿಸಿದರೂ, ಜೈವಿಕವಾಗಿ ದೇಹ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದಿಲ್ಲ.
ಪ್ರತಿದಿನ ದೇಹಕ್ಕೆ ಬೇಕಾಗುವ ನಿದ್ರೆಯ ಪ್ರಮಾಣ
ಪ್ರತಿಯೊಬ್ಬ ವಯಸ್ಕ ವ್ಯಕ್ತಿಗೆ 24 ಗಂಟೆಗಳ ಅವಧಿಯಲ್ಲಿ ಏಳರಿಂದ ಒಂಬತ್ತು ಗಂಟೆಗಳ ನಿದ್ರೆ ಅನಿವಾರ್ಯವಾಗಿದೆ. ಮೆದುಳು ತನ್ನ ಎಲ್ಲಾ ನಿದ್ರೆಯ ಹಂತಗಳನ್ನು ಪೂರ್ಣಗೊಳಿಸಲು ಈ ಸಮಯ ಬೇಕಾಗುತ್ತದೆ. ಗಾಢ ನಿದ್ರೆಯ ಸಮಯದಲ್ಲಿ ಮೆದುಳು ತ್ಯಾಜ್ಯಗಳನ್ನು ಹೊರಹಾಕಿ ನೆನಪುಗಳನ್ನು ಗಟ್ಟಿಗೊಳಿಸಿದರೆ, ನಿದ್ರೆಯ ಕೊನೆಯ ಹಂತದಲ್ಲಿ ಬರುವ ‘ರೆಮ್’ ನಿದ್ರೆಯು ಭಾವನಾತ್ಮಕ ಸಮತೋಲನ ಮತ್ತು ಸೃಜನಶೀಲತೆಗೆ ಕಾರಣವಾಗುತ್ತದೆ. ನಿದ್ರೆಯ ಅವಧಿಯನ್ನು ಮೊಟಕುಗೊಳಿಸಿದಾಗ, ಈ ಕೊನೆಯ ಹಂತದ ನಿದ್ರೆಯೇ ಮೊದಲು ನಷ್ಟವಾಗುತ್ತದೆ. ದಿನಕ್ಕೆ ಕೇವಲ ಆರು ಗಂಟೆ ನಿದ್ರಿಸಿದರೂ ದೇಹ ಹೊಂದಿಕೊಂಡಂತೆ ಕಂಡರೂ, ವಾಸ್ತವದಲ್ಲಿ ಮೆದುಳಿನ ಸಾಮರ್ಥ್ಯ ತಗ್ಗಿರುತ್ತದೆ ಮತ್ತು ಸ್ವತಃ ವ್ಯಕ್ತಿಗೇ ತನ್ನ ದೌರ್ಬಲ್ಯವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ವಾರಾಂತ್ಯದ ವಿಶ್ರಾಂತಿ ಪರಿಹಾರವಲ್ಲವೇಕೆ?
ವಾರಪೂರ್ತಿ ಕಡಿಮೆ ನಿದ್ದೆ ಮಾಡಿ ವಾರಾಂತ್ಯದಲ್ಲಿ ಹತ್ತರಿಂದ ಹನ್ನೊಂದು ಗಂಟೆ ನಿದ್ರಿಸಿದಾಗ ಗಾಢ ನಿದ್ರೆ ಸ್ವಲ್ಪ ಮಟ್ಟಿಗೆ ಮರಳಬಹುದು. ಆದರೆ, ನಿದ್ರೆಯ ಕೊರತೆಯಿಂದ ರಕ್ತದಲ್ಲಿ ಉಂಟಾಗುವ ಹಾರ್ಮೋನ್ ಏರುಪೇರು ಮತ್ತು ಉರಿಯೂತದ ಅಂಶಗಳು ಕೇವಲ ಎರಡು ದಿನಗಳಲ್ಲಿ ಸಹಜ ಸ್ಥಿತಿಗೆ ಬರುವುದಿಲ್ಲ. ವಾರಾಂತ್ಯದಲ್ಲಿ ಹೆಚ್ಚು ನಿದ್ದೆ ಮಾಡಿದ ನಂತರವೂ ಅರಿವಿನ ಸಾಮರ್ಥ್ಯವು ನಿತ್ಯವೂ ಸರಿಯಾಗಿ ನಿದ್ರಿಸುವವರಿಗಿಂತ ಕಡಿಮೆಯೇ ಇರುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. ಜೊತೆಗೆ, ವಾರಾಂತ್ಯದಲ್ಲಿ ತಡವಾಗಿ ಮಲಗಿ ತಡವಾಗಿ ಏಳುವುದರಿಂದ ದೇಹದ ಆಂತರಿಕ ಜೈವಿಕ ಗಡಿಯಾರ ಹಳಿ ತಪ್ಪುತ್ತದೆ. ಇದನ್ನು ತಜ್ಞರು ‘ಸೋಷಿಯಲ್ ಜೆಟ್ಲ್ಯಾಗ್’ ಎಂದು ಕರೆಯುತ್ತಾರೆ. ಇದು ವ್ಯಕ್ತಿಯೊಬ್ಬ ಪ್ರತಿ ವಾರ ಎರಡು-ಮೂರು ಟೈಮ್ ಝೋನ್ಗಳನ್ನು ದಾಟಿ ಪ್ರಯಾಣಿಸಿದಾಗ ಉಂಟಾಗುವ ಆಯಾಸಕ್ಕೆ ಸಮಾನವಾಗಿರುತ್ತದೆ.
ಉತ್ತಮ ಆರೋಗ್ಯಕ್ಕೆ ನಿದ್ರೆಯ ಸರಿಯಾದ ಕ್ರಮ
ದೇಹದಲ್ಲಿ ಎದ್ದಿರುವ ಪ್ರತಿ ಗಂಟೆಯಲ್ಲೂ ಅಡೆನೊಸಿನ್ ಎಂಬ ರಾಸಾಯನಿಕ ಶೇಖರಣೆಯಾಗಿ ನಿದ್ರೆಯ ಒತ್ತಡವನ್ನು ಹೆಚ್ಚಿಸುತ್ತದೆ, ಇದು ನಿದ್ರಿಸಿದಾಗ ಮಾತ್ರ ಕರಗುತ್ತದೆ. ನಿದ್ರೆಯ ಸಾಲವನ್ನು ತಪ್ಪಿಸಲು ಇರುವ ಏಕೈಕ ಮಾರ್ಗವೆಂದರೆ ರಜಾದಿನಗಳಲ್ಲೂ ಒಂದೇ ನಿರ್ದಿಷ್ಟ ಸಮಯಕ್ಕೆ ಮಲಗಿ ಏಳುವ ಅಭ್ಯಾಸ ಮಾಡಿಕೊಳ್ಳುವುದು. ರಾತ್ರಿ ಮಲಗುವ ಸಮಯಕ್ಕಿಂತ ಬೆಳಗ್ಗೆ ಎಚ್ಚರಗೊಳ್ಳುವ ಸಮಯವನ್ನು ನಿಖರವಾಗಿ ಕಾಪಾಡಿಕೊಳ್ಳುವುದು ದೇಹದ ಜೈವಿಕ ಗಡಿಯಾರವನ್ನು ಸ್ಥಿರವಾಗಿಡಲು ಹೆಚ್ಚು ಸಹಕಾರಿಯಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಮಧ್ಯಾಹ್ನದ ವೇಳೆ ಅರ್ಧ ಗಂಟೆಗಿಂತ ಕಡಿಮೆ ಅವಧಿಯ ಕಿರುನಿದ್ರೆ ಮಾಡುವುದರಿಂದ ತಾತ್ಕಾಲಿಕ ಆಯಾಸ ಕಡಿಮೆಯಾಗುತ್ತದೆ. ಆದರೆ ಮೂವತ್ತು ನಿಮಿಷಕ್ಕಿಂತ ಹೆಚ್ಚು ಕಾಲ ನಿದ್ರಿಸಿದರೆ ಗಾಢ ನಿದ್ರೆಯ ಆವರಿಸುವಿಕೆ ಉಂಟಾಗಿ ಮಂಪರು ಹೆಚ್ಚಾಗುತ್ತದೆ ಮತ್ತು ರಾತ್ರಿಯ ನಿದ್ರೆಗೆ ಭಂಗ ಬರುತ್ತದೆ.











