ಚಿತ್ರದುರ್ಗ : ನಗರದ ಹೊರವಲಯ ಬೆಂಗಳೂರು ರಸ್ತೆಯಲ್ಲಿರುವ ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಶಾಲೆಯಲ್ಲಿ ಶನಿವಾರ ಎಲಿಮೆಂಟ್ಸ್ ಆಫ್ ನೇಚರ್ ವಿಜ್ಞಾನೋತ್ಸವ ಏರ್ಪಡಿಸಲಾಗಿತ್ತು.
ನರ್ಸರಿಯಿಂದ ಹತ್ತನೆ ತರಗತಿ ಮಕ್ಕಳು ತಾವುಗಳೆ ಸಿದ್ದಪಡಿಸಿದ ವಿಜ್ಞಾನೋತ್ಸವದಲ್ಲಿನ ಮಾದರಿಗಳನ್ನು ಸಾರ್ವಜನಿಕರು, ಪೋಷಕರು ಹಾಗೂ ಶಾಲೆಯ ಶಿಕ್ಷಕ ವೃಂದವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಇದೊಂದು ಅತ್ಯಂತ ಪರಿಣಾಮಕಾರಿ ಪ್ರಯೋಗ ಎಂದು ಸಂತಸ ವ್ಯಕ್ತಪಡಿಸಿದರು.
ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಡ್ರಿಪ್ ಇರಿಗೇಷನ್, ಗಾಳಿ ಯಂತ್ರ, ನಾನ್ ಕನ್ವೆನ್ಷನಲ್ ಮತ್ತು ಕನ್ವೆನ್ಷನಲ್ ಪವರ್, ಡ್ಯಾಂ ನಿರ್ಮಾಣ ಮಾದರಿ, ಹಣ್ಣು, ಹಸಿರು ತಕರಾರಿ ಇವುಗಳು ವಿಜ್ಞಾನೋತ್ಸವದಲ್ಲಿ ಎಲ್ಲರ ಗಮನ ಸೆಳೆಯುವಂತಿದ್ದವು.
ಪ್ರತಿ ವರ್ಷವೂ ಮಕ್ಕಳಿಗೆ ಇಲ್ಲಿ ವಿಜ್ಞಾನ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ವಿಜ್ಞಾನೋತ್ಸವವನ್ನು ಮುಂದೂಡಲಾಗಿತ್ತು. ಆದರೆ ಈ ಬಾರಿ ಕೊರೋನಾ ಇಳಿಮುಖವಾಗಿರುವುದರಿಂದ ವಿಜ್ಞಾನೋತ್ಸವದಲ್ಲಿ ಮಕ್ಕಳು ಆಸಕ್ತಿ ಹಾಗೂ ಲವಲವಿಕೆಯಿಂದ ಪಾಲ್ಗೊಂಡಿದ್ದ ಮಕ್ಕಳು ವೀಕ್ಷಣೆಗೆ ಬರುವವರಿಗೆ ಮಾದರಿಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡುತ್ತಿದ್ದರು.
ತಾಜ್ಮಹಲ್, ಗಾಳಿಯಂತ್ರ, ಮಾನವನ ದೇಹದ ಅಂಗಾಂಗಗಳು, ಅಸ್ತಿಪಂಜರ, ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಹೀಗೆ 250 ಕ್ಕೂ ಹೆಚ್ಚು ಮಾದರಿಗಳನ್ನು ಮಕ್ಕಳು ಸಿದ್ದಪಡಿಸಿದ್ದರು.
ವಿಜ್ಞಾನ ವಸ್ತುಪ್ರದರ್ಶನಗಳನ್ನು ಏರ್ಪಡಿಸುವುದರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿ ಹೊಸ ಹೊಸ ಸಂಶೋಧನೆಗಳತ್ತ ಆಕರ್ಷಿತರಾಗುತ್ತಾರೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಚಿಕ್ಕ ಚಿಕ್ಕ ಮಾದರಿಗಳನ್ನು ಮಾಡಿ ಯಶಸ್ವಿಯಾದರೆ ನಂತರ ದೊಡ್ಡ ಪ್ರಮಾಣದ ಸಂಶೋಧನೆ ಮಾಡಿ ಸಮಾಜಕ್ಕೆ ಉಪಯುಕ್ತವಾಗಲು ಅನುಕೂಲವಾಗಲಿದೆ. ಒಟ್ಟಾರೆ ಹೊಸ ಹೊಸ ಆವಿಷ್ಕಾರಗಳಿಗೆ ವಿಜ್ಞಾನೋತ್ಸವ ಮಕ್ಕಳಿಗೆ ಮೆಟ್ಟಿಲಾಗಲಿದೆ ಎಂದು ಮುಖ್ಯ ಶಿಕ್ಷಕಿ ಪ್ರಿಯಕುಮಾರ್ ಹೇಳಿದರು.
ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ನ ನಿರ್ದೇಶಕರುಗಳಾದ ಶ್ರೀಹರ್ಷ ಹಾಗೂ ಶ್ರೀಮತಿ ಹರ್ಷ ಇವರುಗಳು ವಿಜ್ಞಾನೋತ್ಸವದಲ್ಲಿದ್ದು, ಮಕ್ಕಳನ್ನು ಪ್ರೋತ್ಸಾಹಿಸಿದರು.