ಮೈಸೂರು: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿದ್ದು, ರಾಜ್ಯ ರಾಜಕಾರಣದ ಮೇಲೂ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಬಿಟ್ಟು ಹೋದವರು ಮತ್ತೆ ವಾಪಾಸ್ ಆದರೆ ಎಂಬ ಪ್ರಶ್ನೆಗಳು ಎದ್ದಿದ್ದು, ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋದವರನ್ನ ಮತ್ತೆ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇದೀಗ ಮೈಸೂರಿನಲ್ಲಿ ಮಾತನಾಡಿರುವ ಸಚುವ ಎಸ್ ಟಿ ಸೋಮಶೇಖರ್, ನಾವೆಲ್ಲರೂ ಮುಂದೆಯೂ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇವೆ. ನಾನು ಮೈಸೂರಿನಿಂದ ವಿಮುಖವಾಗಿಲ್ಲ. ನಾನು ವಾರದಲ್ಲಿ ಎರಡು ದಿನ ಮೈಸೂರಿನಲ್ಲೇ ಇರುತ್ತೇನೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ಸಂಸದ ಮತ್ತು ಶಾಸಕರ ಕ್ರೆಡಿಟ್ ವಾರ್ ಬಗ್ಗೆ ಮಾತನಾಡಿದ ಎಸ್ ಟಿ ಸೋಮಶೇಖರ್, ಕೆ ಆರ್ ಆಸ್ಪತ್ರೆ ಅಭಿವೃದ್ಧಿಗೆ ರಾಜ್ಯ ಬಜೆಟ್ ನಲ್ಲಿ ಅನುದಾನ ನೀಡಲಾಗಿದೆ. ಅನುದಾನ ತರುವಲ್ಲಿ ಸಂಸದ, ಶಾಸಕ ಇಬ್ಬರ ಪರಿಶ್ರಮವೂ ಇದೆ. ಹೀಗಾಗಿ ಇಬ್ಬರು ಕ್ರೆಡಿಟ್ ಪಡೆಯುವುದರಲ್ಲಿ ತಪ್ಪಿಲ್ಲ. ಇದರಲ್ಲಿ ಪಕ್ಷಕ್ಕೆ ಮುಜುಗರವಾಗುವಂಥದ್ದು ಏನು ಇಲ್ಲ ಎಂದಿದ್ದಾರೆ.
ಕೆ ಆರ್ ಆಸ್ಪತ್ರೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡಿದೆ. ಈ ಸಂಬಂಧ, ಅನುದಾನದ ಕ್ರೆಡಿಟ್ ಪಡೆಯೋದಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ನಾಗೇಂದ್ರ ಮಧ್ಯೆ ಫೈಟ್ ಶುರುವಾಗಿದೆ. ಈ ಕ್ರೆಡಿಟ್ ಗಲಾಟೆಯಿಂದ ಪಕ್ಷ ಮುಜುಗರಕ್ಕೊಳಪಟ್ಟಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಸಚಿವ ಎಸ್ ಟಿ ಸೋಮಶೇಖರ್ ಅದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.