ಚಿತ್ರದುರ್ಗ, (ಮಾರ್ಚ್.12) : ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಟಿಪ್ಪಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು “ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಚಾಲನೆ ನೀಡಲಾಗಿದ್ದು ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಅವರು ಚಿತ್ರದುರ್ಗ ತಾಲ್ಲೂಕಿನ ಕುಂಚಿಗನಾಳ್ ಗ್ರಾಮದಲ್ಲಿ ಏರ್ಪಡಿಸಲಾದ ಕಂದಾಯ ಇಲಾಖೆ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮದಡಿ ರೈತರಿಗೆ ಪಹಣಿ, ಅಟ್ಲಾಸ್, ಟಿಪ್ಪಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವುಳ್ಳ ದಾಖಲೆಯ ಕಿಟ್ ಮನೆಬಾಗಿಲಿಗೆ ತೆರಳಿ ವಿತರಣೆ ಮಾಡಿ ಏರ್ಪಡಿಸಲಾದ ಸಮಾರಂಭದಲ್ಲಿ ಮಾತನಾಡಿದರು.
ಕಂದಾಯ ಇಲಾಖೆ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕೆನ್ನುವುದು ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿನ ಎಲ್ಲರಿಗೂ ಕಂದಾಯ ದಾಖಲೆಗಳನ್ನು ವಿತರಣೆ ಮಾಡಲಾಗುತ್ತಿದೆ.
ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದರಿಂದ ತಮ್ಮ ಜಮೀನಿನ ಖಾತೆದಾರರ ಹೆಸರು, ವಿಸ್ತೀರ್ಣ, ಋಣಭಾರ, ಚೆಕ್ಬಂದಿ, ವಿನ್ಯಾಸ ಸೇರಿದಂತೆ ನೈಜತೆಯ ಎಲ್ಲಾ ಮಾಹಿತಿಯು ನಿಮಗೆ ಮನೆ ಬಾಗಿಲಲ್ಲೆ ತಿಳಿಯಲಿದೆ ಎಂದರು.
ಗ್ರಾಮದಲ್ಲಿ ಪಂಚಾಯಿತಿಯಿಂದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಮೀನಿನ ಕೊರತೆ ಇದ್ದು ಈ ಬಗ್ಗೆ ಜಮೀನು ನೀಡಲು ಪಂಚಾಯಿತಿ ಅಧ್ಯಕ್ಷರು ತಿಳಿಸಿದ್ದು ಪ್ರಸ್ತಾವನೆಯನ್ನು ಕಳುಹಿಸಿಕೊಡಲು ತಿಳಿಸಿ ಶಾಲೆಯ ಕೊಠಡಿ ನಿರ್ಮಾಣ ಹಾಗೂ ಗ್ರಾಮಸ್ಥರು ನೀಡಿರುವ ಕುಂದುಕೊರತೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಂದಾಯ ಇಲಾಖೆಯ ದಾಖಲೆಗಳನ್ನು ರಾಜ್ಯದ ಎಲ್ಲಾ ಕಡೆ ವಿತರಣೆ ಮಾಡಲಾಗುತ್ತಿದೆ. ಕಂದಾಯ ದಾಖಲೆಗಳ ವ್ಯತ್ಯಾಸದಿಂದ ಅನೇಕ ವ್ಯಾಜ್ಯಗಳು ನಡೆಯುತ್ತವೆ. ಕಾಲ ಕಾಲಕ್ಕೆ ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳುವುದರಿಂದ ಯಾವುದೇ ತಿದ್ದುಪಡಿ ಇದ್ದಲ್ಲಿ ತಕ್ಷಣವೇ ಮಾಹಿತಿ ಸಿಗಲಿದೆ ಎಂದರು.
ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯನವರು ಮಾತನಾಡಿ ತಮ್ಮ ಜಮೀನಿನ ಜಾತಕ ಪಹಣಿಯಾಗಿದ್ದು ಇದರಲ್ಲಿನ ಪ್ರತಿಯೊಂದು ಕಾಲಂಗಳನ್ನು ಪರಿಶೀಲಿಸಿಕೊಳ್ಳಬೇಕು. ನಿಮ್ಮ ಸರ್ವೇ ನಂಬರ್, ಹಿಸ್ಸಾ, ಋಣಭಾರ, ಬೆಳೆ ವಿವರ ಸೇರಿದಂತೆ ಎಲ್ಲಾ ವಿವರ ಇದರಲ್ಲಿರುತ್ತದೆ. ಪಹಣಿ ಇಟ್ಟುಕೊಂಡು ಪರಿಶೀಲನೆ ನಡೆಸುವುದರಿಂದ ಇದರಿಂದಾಗುವ ಅನೇಕ ವ್ಯಾಜ್ಯಗಳು ತಪ್ಪಲಿವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ನಾಯ್ಕ, ತಹಶೀಲ್ದಾರ್ ಸತ್ಯನಾರಾಯಣ, ವಾರ್ತಾಧಿಕಾರಿ ಧನಂಜಯ, ಎಡಿಎಲ್ಆರ್ ಯಾಸ್ಮೀನ್, ಗ್ರೇಡ್-2 ತಹಶೀಲ್ದಾರ್ ಫಾತಿಮಾ, ಮುಖ್ಯ ಶಿಕ್ಷಕಿ ಮಂಜುಳಾದೇವಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಕಂದಾಯ ಇಲಾಖೆ ಸಿಬ್ಬಂದಿಯವರು ಉಪಸ್ಥಿತರಿದ್ದರು.