ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 28 : ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ್‍ಬೊಮ್ಮಾಯಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ಹೆಚ್ಚಿಸಿದ್ದ ಮೀಸಲಾತಿಯನ್ನು ಹೈಕೋರ್ಟ್ ರದ್ದುಪಡಿಸಿರುವುದು ಮರಣ ಶಾಸನ, ಸಂವಿಧಾನ ವಿರೋಧಿಯಾಗಿದೆ. ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಧಾನಿ ನರೇಂದ್ರಮೋದಿರವರ ಬಳಿ ಸರ್ವಪಕ್ಷಗಳ ನಿಯೋಗ ಕೊಂಡೊಯ್ದು ನೈನ್ ಷೆಡ್ಯೂಲ್‍ಗೆ ಸೇರಿಸಲು ಒತ್ತಡ ಹೇರುವಂತೆ ಪಾರ್ಲಿಮೆಂಟ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಭದ್ರರು ಮೀಸಲಾತಿ ಹೆಚ್ಚಳ ಪ್ರಶ್ನಿಸಿ ರಿಟ್ ಹಾಕಿದ್ದರಿಂದ ಹೈಕೋರ್ಟ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದವರ ಮೀಸಲಾತಿಯನ್ನು ರದ್ದುಪಡಿಸಿರುವುದಕ್ಕೆ ರಾಜ್ಯ ಸರ್ಕಾರ ಕೂಡಲೆ ಸುಪ್ರೀಂಕೋರ್ಟ್‍ಗೆ ಎಸ್‍ಪಿಎಲ್.ಹಾಕಬೇಕು. ಇಲ್ಲವಾದರೆ ಮೀಸಲಾತಿ ಅಡಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಹಾಗೂ ಸರ್ಕಾರಿ ನೌಕರಿಗೆ ಸೇರಿರುವವರ ಬದುಕು ಅತಂತ್ರವಾಗಲಿದೆ. ಕೇಂದ್ರ ಸರ್ಕಾರ ಏಕಾಏಕಿ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ನೀಡಿದಾಗ ಸುಪ್ರೀಂಕೋರ್ಟ್ ಏಕೆ ಸುಮ್ಮನಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು ಇಲ್ಲಿಯತನಕ 375 ಕಾಯಿದೆಗಳನ್ನು ನೈನ್ ಷೆಡ್ಯೂಲ್‍ಗೆ ಸೇರಿಸಲಾಗಿದೆ. ಇದೊಂದನ್ನು ನೈನ್ ಷೆಡ್ಯುಲ್‍ಗೆ ಸೇರಿಸಲು ಏನು ಕಷ್ಟ ಎಂದು ಪ್ರಶ್ನಿಸಿದರು.?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರ ಮತಗಳನ್ನು ಪಡೆದು ಗೆದ್ದಿರುವ ಸಂಸದ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಮಂತ್ರಿ
ಟಿ.ರಘುಮೂರ್ತಿ, ಜಿಲ್ಲೆಯ ಶಾಸಕರುಗಳು ಏಕೆ ಧ್ವನಿ ಎತ್ತುತ್ತಿಲ್ಲ. ಸರ್ಕಾರದಿಂದ ಅನುದಾನ ಪಡೆದುಕೊಳ್ಳುತ್ತಿರುವ ಸ್ವಾಮೀಜಿಗಳು ಎಸ್ಸಿ, ಎಸ್ಟಿ, ಹಿಂದುಳಿದವರಿಗೆ
ಅನ್ಯಾಯವಾಗುತ್ತಿದ್ದರೂ ಮೌನವಾಗಿದ್ದಾರೆ. ವಾಲ್ಮೀಕಿ, ಅಂಬೇಡ್ಕರ್, ಕನಕದಾಸರ ಹೆಸರಿನಲ್ಲಿ ಪ್ರಶಸ್ತಿಗಳನ್ನು ತೆಗೆದುಕೊಂಡಿರುವವರು ಏಕೆ ಮಾತನಾಡುತ್ತಿಲ್ಲ. ರಾಜಕಾರಣಿಗಳು, ಖಾವಿದಾರಿಗಳು, ಬರಹಗಾರರು, ವಿಚಾರವಾದಿಗಳು ಬೀದಿಗೆ ಬಂದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರ ಪರವಾಗಿ ಹೋರಾಡಿ. ನಿಜವಾಗಿಯೂ ಈ ಸಮುದಾಯಗಳಿಗೆ ನ್ಯಾಯ ಸಿಗಬೇಕಾದರೆ ಬಾಯಿ ಬಿಡಿ ಎಂದು ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಲ್ಲಿ ಒಂದು ಕೋಟಿ ಇಪ್ಪತ್ತೈದು ಲಕ್ಷ ಜನಸಂಖ್ಯೆಯಿದೆ. ಪರಿಶಿಷ್ಟ ಪಂಗಡಗಳ 51 ಜಾತಿಯಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಎರಡು ಸಾವಿರ ಹಿಂದುಳಿದ ಜಾತಿಗಳಲ್ಲಿ ಮೂರು ಕೋಟಿ ಇಪ್ಪತ್ತೈದು ಲಕ್ಷ ಮಂದಿಯಿದ್ದಾರೆ. ಆದರೆ ಕೇವಲ ಏಳುವರೆ ಪರ್ಸೆಂಟ್ ಇರುವವರು ಮಾತ್ರ ದೇಶ ಆಳುತ್ತಿದ್ದಾರೆ. ತಮಿಳುನಾಡಿನಲ್ಲಿ ಶೇ.69 ರಷ್ಟು ಮೀಸಲಾತಿಯಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಮೀಸಲಾತಿಯನ್ನು ನೈನ್ ಷೆಡ್ಯೂಲ್‍ಗೆ ಸೇರಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರಿಗೆ ನ್ಯಾಯ ಒದಗಿಸುವಂತೆ ರಾಜ್ಯದಲ್ಲಿ ಎರಡನೆ ಸುತ್ತಿನ ಹೋರಾಟ ಹಮ್ಮಿಕೊಂಡಿದ್ದೇವೆಂದು ಹೇಳಿದರು.
ನರಸಿಂಹಯ್ಯ, ಹನುಮಂತರಾಯಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಹೆಚ್.ಅಂಜಿನಪ್ಪ, ಉಪ್ಪಾರ ಸಮಾಜದ ಮುಖಂಡ ಆರ್.ಮೂರ್ತಿ, ಯುವ ನ್ಯಾಯವಾದಿ ಅಶೋಕ್‍ಬೆಳಗಟ್ಟ, ಲಕ್ಷ್ಮಿಸಾಗರ ರಾಜಣ್ಣ, ದಲಿತ ಮುಖಂಡ ರಾಜಪ್ಪ, ಆನಂದಪ್ಪ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.












