ಚಿತ್ರದುರ್ಗ : ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ.ಬಹುಮತಗಳಿಸಿರುವುದಕ್ಕೆ ಭಾರತೀಯ ಜನತಾಪಾರ್ಟಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಮಣಿಪುರ, ಗೋವಾ, ಉತ್ತರಾಖಂಡ, ಉತ್ತರಪ್ರದೇಶದ ಚುನಾವಣೆಯ ಫಲಿತಾಂಶದಿಂದ ಬಿಜೆಪಿ.ಗೆ ಇನ್ನು ಹೆಚ್ಚಿನ ಹುರುಪು ಸ್ಪೂರ್ತಿ ಬಂದಂತಾಗಿದೆ.
ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ತಪ್ಪು ಮಾಹಿತಿ ನೀಡಿ ದೆಹಲಿಯ ಗಡಿಯಲ್ಲಿ ರೈತರನ್ನು ಎತ್ತಿಕಟ್ಟಿ ಚಳುವಳಿಗೆ ಪ್ರಚೋದಿಸಿ, ಇಲ್ಲ ಸಲ್ಲದ ಆರೋಪ ಹೊರಿಸಿದರೂ ನಾಲ್ಕು ರಾಜ್ಯಗಳ ಮತದಾರರು ಮೋದಿ ಸರ್ಕಾರವನ್ನು ಬೆಂಬಲಸಿರುವುದನ್ನು ನೋಡಿದರೆ ಇನ್ನು ಹತ್ತಾರು ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಅಧಿಕಾರ ನಡೆಸಲಿದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 150 ಸೀಟುಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ದೇಶದ ಬೆನ್ನೆಲುಬು ರೈತರಿಗೆ ಕೇಂದ್ರ ಸರ್ಕಾರ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಿದ್ದರ ಫಲವಾಗಿ ನಾಲ್ಕು ರಾಜ್ಯಗಳಲ್ಲಿ ನಮ್ಮ ಪಕ್ಷ ಬಹುಮತ ಗಳಿಸಲು ಸಾಧ್ಯವಾಯಿತು. ಪಂಜಾಬ್ ಒಂದರಲ್ಲಿ ಮಾತ್ರ ಆಮ್ ಆದ್ಮಿ ಪಕ್ಷ ಜಯಗಳಿಸಿದೆ ಪ್ರಜಾಪ್ರಭುತ್ವದಲ್ಲಿ ಮತದಾರರು ನೀಡಿದ ತೀರ್ಪಿಗೆ ತಲೆಬಾಗಬೇಕು.
ಆದರೂ ಅಲ್ಲಿ ಯುವ ಸಮೂಹ ಡ್ರಗ್ಸ್ಗೆ ಬಲಿಯಾಗಿರುವುದು ನೋವಿನ ಸಂಗತಿ. ಪಾಕಿಸ್ತಾನಕ್ಕೆ ಪಂಜಾಬ್ ಹತ್ತಿರದಲ್ಲಿರುವುದರಿಂದ ಈ ಚುನಾವಣೆಯಲ್ಲಿ ದೇಶದ ಆಂತರಿಕ ಭದ್ರತೆಗೆ ಲೋಪವಾಗಬಾರದೆನ್ನುವ ದೃಷ್ಟಿಯಿಂದ ಮೋದಿ ಹೆಚ್ಚಿನ ಗಮನ ಕೊಡಲಿಲ್ಲ. ಹಾಗಾಗಿ ಅಲ್ಲಿ ನಮ್ಮ ಪಕ್ಷ ಸೋಲಬೇಕಾಯಿತು. ಉಳಿದಂತೆ ನಾಲ್ಕು ರಾಜ್ಯಗಳಲ್ಲಿ ಬಹುಮತ ಪಡೆದಿರುವುದು ನಿಜಕ್ಕೂ ಪಕ್ಷದ ಸಾಧನೆಗೆ ಸಿಕ್ಕ ಜಯ ಎಂದು ಹೇಳಿದರು.
ಬಿಜೆಪಿ.ಜಾತಿ ಧರ್ಮದ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುವುದು ಸೇರಿದಂತೆ ಅನೇಕ ಬಗೆಯಲ್ಲಿ ಪಕ್ಷಕ್ಕೆ ಧಕ್ಕೆಯಾಗುವ ರೀತಿ ಕಾಂಗ್ರೆಸ್‌ನವರು ದೇಶದ ಮತದಾರರನ್ನು ತನ್ನತ್ತ ಸೆಳೆಯುವ ಕುತಂತ್ರ ನಡೆಸಿದರೂ ಈ ಚುನಾವಣೆಯಲ್ಲಿ ಫಲಿಸಲಿಲ್ಲ. ಏನು ತಪ್ಪು ಸಿಗಲಿಲ್ಲವೆಂದಾಗ ಇ.ವಿ.ಎಂ. ಬಗ್ಗೆ ಮಾತನಾಡುವುದನ್ನು ಜಾಯಮಾನವನ್ನಾಗಿ ಮಾಡಿಕೊಂಡಿದೆ.
ರಷ್ಯಾ-ಉಕ್ರೇನ್ ಯುದ್ದದಲ್ಲಿ ಎರಡು ದೇಶಗಳ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಒಂದೆರಡು ಗಂಟೆಗಳ ಕಾಲ ಯುದ್ದಕ್ಕೆ ವಿರಾಮ ನೀಡಿ ಎಂದು ಕೇಳಿಕೊಂಡು ನಮ್ಮ ದೇಶದ ಪ್ರಜೆಗಳು ಹಾಗೂ ವಿದ್ಯಾರ್ಥಿಗಳನ್ನು ರಕ್ಷಿಸಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲಬೇಕು. ಪಾಕಿಸ್ತಾನ, ಚೀನಾದವರು ಉಕ್ರೇನ್‌ನಲ್ಲಿರುವ ತಮ್ಮ ಪ್ರಜೆಗಳು ಹಾಗೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಕೊರೋನಾ ಸಂಕಷ್ಟದಲ್ಲಿ ನಮ್ಮ ದೇಶದ ಪ್ರಧಾನಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ ಪಡಿತರ ಧಾನ್ಯಗಳನ್ನು ಕೊಟ್ಟಿದ್ದರಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಸಾವು-ನೋವಿನ ಸಂಖ್ಯೆಯೂ ಜಾಸ್ತಿಯಾಗಿಲ್ಲ ಎಂದು ಪ್ರಧಾನಿಗೆ ನಮ್ಮ ದೇಶದ ಮೇಲಿರುವ ಅಭಿಮಾನವನ್ನು ಗುಣಗಾನ ಮಾಡಿದರು.
ವಿಭಾಗೀಯ ಸಂಘಟನಾ ಕಾರ್ಯದರ್ಶಿ ಜೇಷ್ಟ ಪಡಿವಾಳ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ಖಜಾಂಚಿ ಮಾಧುರಿ ಗಿರೀಶ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ಸಂಪತ್‌ಕುಮಾರ್, ಮಲ್ಲಿಕಾರ್ಜುನ್, ದಗ್ಗೆಶಿವಪ್ರಕಾಶ್, ನಾಗರಾಜ್‌ಬೇದ್ರೆ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತೆಗೌಡ ಶೈಲಜಾರೆಡ್ಡಿ, ಜಯಶ್ರೀಷಾ, ವೆಂಕಟೇಶ್‌ಯಾದವ್, ಡಾ.ವಿ.ಎಲ್.ಪ್ರಶಾಂತ್, ಚಂದ್ರಿಕಾ ಲೋಕನಾಥ್, ಬಿಜೆಪಿ.ಗ್ರಾಮಾಂತರ ಅಧ್ಯಕ್ಷ ನಂದಿನಾಗರಾಜ್, ವೀರೇಶ್, ದ್ಯಾಮಣ್ಣ ಕೋಗುಂಡೆ, ವೆಂಕಟೇಶ್, ಕಿರಣ್‌ಕುಮಾರ್, ಬಾಂಡ್‌ರವಿ, ನಾಗರಾಜ್, ಕೃಷ್ಣ, ಪಲ್ಲವಿ ಪ್ರಸನ್ನ, ನಗರಸಭಾ ಸದಸ್ಯರುಗಳಾದ ಹರೀಶ್, ಶ್ರೀನಿವಾಸ್, ಜಯಣ್ಣ, ರವಿ, ಭಾಸ್ಕರ್, ನಗರಸಭೆ ನಾಮನಿರ್ದೇಶಕ ಸದಸ್ಯ ತಿಮ್ಮಣ್ಣ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯೆ ರೇಖ, ಇನ್ನು ಮುಂತಾದವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.