ನವದೆಹಲಿ : ಹಣದುಬ್ಬರದ ಹೊಡೆತಕ್ಕೆ ಸಿಲುಕಿರುವ ದೇಶದ ಜನಸಾಮಾನ್ಯರಿಗೆ ನವೆಂಬರ್ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಮೂಲಕ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆಯಿದೆ.
ಆಕ್ಸ್ಫರ್ಡ್ ಎಕನಾಮಿಕ್ಸ್ ವರದಿಯನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ ಪ್ರಕಟಿಸಿರುವ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ನವೆಂಬರ್ನಲ್ಲಿ ಇಂಧನ ದರಗಳನ್ನು ಹೆಚ್ಚಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ವರ್ಷದ (2027) ಆರಂಭದಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ಸೇರಿದಂತೆ ಹಲವು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾವೇರಲಿದ್ದು, ರಾಜಕೀಯ ಹಾನಿಯನ್ನು ತಪ್ಪಿಸಲು ಸರ್ಕಾರಗಳು ಸಾಮಾನ್ಯವಾಗಿ ಚುನಾವಣಾ ಹೊಸ್ತಿಲಿನಲ್ಲಿ ಬೆಲೆ ಏರಿಕೆಗೆ ಮುಂದಾಗುವುದಿಲ್ಲ. ಹೀಗಾಗಿ, ದರ ಹೆಚ್ಚಳ ಮಾಡಲು ನವೆಂಬರ್ ತಿಂಗಳೇ ಸರ್ಕಾರಕ್ಕೆ ಕೊನೆಯ ಪ್ರಶಸ್ತ ಅವಕಾಶ ಎಂದು ಆಕ್ಸ್ಫರ್ಡ್ ಎಕನಾಮಿಕ್ಸ್ನ ಪ್ರಮುಖ ಅರ್ಥಶಾಸ್ತ್ರಜ್ಞೆ ಅಲೆಕ್ಸಾಂಡ್ರಾ ಹರ್ಮನ್ ಪ್ರಸಾದ್ ವಿಶ್ಲೇಷಿಸಿದ್ದಾರೆ.

ಅಮೆರಿಕ-ಇರಾನ್ ಯುದ್ಧ ಹಾಗೂ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 110 ಡಾಲರ್ ಗಡಿ ದಾಟಿದೆ. ಇದರಿಂದಾಗಿ ದೇಶದ ಸರ್ಕಾರಿ ತೈಲ ಕಂಪನಿಗಳು (OMCs) ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ ಸುಮಾರು ₹8 ಹಾಗೂ ಡೀಸೆಲ್ ಮೇಲೆ ₹9 ನಷ್ಟ ಅನುಭವಿಸುತ್ತಿವೆ. ಈ ನಷ್ಟ ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಆದರೆ, ಒಮ್ಮೆಲೇ ಭಾರಿ ಪ್ರಮಾಣದಲ್ಲಿ ಬೆಲೆ ಏರಿಸದೆ, ಮೇ ತಿಂಗಳಲ್ಲಿ ಮಾಡಲಾಗಿದ್ದ ಶೇಕಡಾ 7.5 ರಷ್ಟು ಹೆಚ್ಚಳದ ಅರ್ಧದಷ್ಟು ಮಾತ್ರ ದರ ಏರಿಕೆಯಾಗುವ ನಿರೀಕ್ಷೆಯಿದೆ. ಈ ಕುರಿತು ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.
ಇಂಧನ ಬೆಲೆ ಏರಿಕೆಯಾದರೆ ಅದು ನೇರವಾಗಿ ಹಣದುಬ್ಬರದ ಮೇಲೂ ಪರಿಣಾಮ ಬೀರಲಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.2 ಹಾಗೂ 2027ರ ಮೊದಲ ತ್ರೈಮಾಸಿಕದಲ್ಲಿ ಶೇ. 6.5ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಸುರಕ್ಷಿತ ಮಿತಿಯಾದ ಶೇ. 2 ರಿಂದ ಶೇ. 6 ಕ್ಕಿಂತ ಹೆಚ್ಚಾಗುವುದರಿಂದ, ಆರ್ಬಿಐ ತನ್ನ ಮುಂದಿನ ಹಣಕಾಸು ನೀತಿ ಸಭೆಗಳಲ್ಲಿ ರೆಪೋ ದರವನ್ನು ಮತ್ತೆ ಹೆಚ್ಚಿಸುವ ಆತಂಕವಿದೆ. ಇದು ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಬಹುದು.
ಸದ್ಯ ದೇಶದಲ್ಲಿ ಹೆಚ್ಪಿಸಿಎಲ್, ಐಒಸಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳು ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹102.12 ಹಾಗೂ ಡೀಸೆಲ್ ₹95.20 ರಷ್ಟಿದೆ. ದೇಶದಲ್ಲೇ ಅತ್ಯಂತ ಕಡಿಮೆ ಬೆಲೆ ಪೋರ್ಟ್ ಬ್ಲೇರ್ನಲ್ಲಿದ್ದು, ಅಲ್ಲಿ ಪೆಟ್ರೋಲ್ ₹88.66 ಮತ್ತು ಡೀಸೆಲ್ ₹84.56 ಕ್ಕೆ ಲಭ್ಯವಿದೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಅತಿ ಹೆಚ್ಚು ದರವಿದ್ದು, ಪೆಟ್ರೋಲ್ ₹118.34 ಹಾಗೂ ಡೀಸೆಲ್ ₹106.06 ರಷ್ಟಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ ಸುಮಾರು ₹110.93 ಹಾಗೂ ಡೀಸೆಲ್ ₹98.80 ರಷ್ಟಿದೆ.











