Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೂಲವಿಜ್ಞಾನದೊಂದಿಗೆ ತಂತ್ರಜ್ಞಾನದ ಸಮನ್ವಯ ಅತ್ಯಗತ್ಯ : ಶಶಿಧರ್ ರಾವ್

---Advertisement---

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 11 :
ಆಧುನಿಕ ತಂತ್ರಜ್ಞಾನ, ನಾವೀನ್ಯತೆಯ ನಾಗಾಲೋಟದ ಈ ಕಾಲಘಟ್ಟದಲ್ಲಿ ಮೂಲವಿಜ್ಞಾನದೊಂದಿಗೆ ಆಧುನಿಕ ತಂತ್ರಜ್ಞಾನ, ನಾವೀನ್ಯತೆಗಳ ಸಮನ್ವಯ ಅತ್ಯಗತ್ಯವಾಗಿದ್ದು, ತಂತ್ರಜ್ಞಾನದ ನವಾನ್ವೇಷಣೆಗಳು ಸುಸ್ಥಿರವಾಗಲು ಮೂಲವಿಜ್ಞಾನದ ಅಡಿಪಾಯವನ್ನು ಮರೆಯುವಂತಿಲ್ಲ ಎಂದು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಕ್ಷೇತ್ರಗಳ ಹಿರಿಯ ತಜ್ಞರಾದ ಶಶಿಧರ್ ರಾವ್ ತಿಳಿಸಿದರು.

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಎಂ.ಎಸ್ಸಿ. ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗವು ಆಯೋಜಿಸಿ, ಐ.ಕ್ಯೂ.ಎ.ಸಿ. ಪ್ರಾಯೋಜಿಸಿ, ಸ್ನಾತಕೋತ್ತರ ಸಸ್ಯಶಾಸ್ತ್ರ, ಗಣಿತಶಾಸ್ತ್ರ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಭಾಗಗಳು ಭಾಗವಹಿಸಿದ್ದ ವಿಚಾರ ಸಂಕಿರಣದ ಮುಖ್ಯಅತಿಥಿಗಳಾಗಿ ಮತ್ತು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದಂತೆ ಮೂಲವಿಜ್ಞಾನವೂ ಸಹಾ ವಿಪುಲ ಅವಕಾಶಗಳನ್ನು ಹೊಂದಿದ್ದು, ಮೂಲವಿಜ್ಞಾನದ ಸಂಶೋಧನೆಗಳೇ ತಂತ್ರಜ್ಞಾನದ ಎಲ್ಲಾ ನವಾನ್ವೇಷಣೆಗಳ ಮೂಲವಾಗಿದ್ದು, ಇದರ ಮಹತ್ವವನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದರು. ಸಸ್ಯಶಾಸ್ತ್ರದ ಅಧ್ಯಯನವಿಲ್ಲದೆ ಜೀವಸಂಕುಲದ ಸಂರಕ್ಷಣೆ ಸಾಧ್ಯವಿಲ್ಲ. ಆಹಾರ ಸರಪಳಿಯ ಸಮತೋಲನವನ್ನು ಕಾಯ್ದುಕೊಳ್ಳಲು ಸಸ್ಯಶಾಸ್ತ್ರದ ಅಧ್ಯಯನವು ಮಹತ್ವದ ಪಾತ್ರ ವಹಿಸುತ್ತದೆ. ಗಣಿತಶಾಸ್ತ್ರದ ಪ್ರಮೇಯಗಳು ಮತ್ತು ತಾರ್ಕಿಕ ಅಂಶಗಳು ಮನುಷ್ಯನ ಬುದ್ಧಿಮತ್ತೆಯ ಅನ್ವಯದ ವಿಧಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಭೌತಶಾಸ್ತ್ರದ ಅಧ್ಯಯನವು ಬಲ, ಚಲನೆ, ಬೆಳಕು ಇತ್ಯಾದಿಗಳ ಕುರಿತಾಗಿ ತಾರ್ಕಿಕ ಸ್ಪಷ್ಟತೆಯನ್ನು ನೀಡುತ್ತದೆ. ರಸಾಯನಶಾಸ್ತ್ರದ ಅಧ್ಯಯನವು ದ್ರವ್ಯಗಳ ಗುಣಲಕ್ಷಣಗಳು, ಸಂಯೋಜನೆ, ರಚನೆಯ ಕುರಿತಾಗಿ ಬೆಳಕು ಚೆಲ್ಲುತ್ತವೆ.

ತಂತ್ರಜ್ಞಾನಕ್ಕೆ ಬೇಕಾದ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಅಭಿವೃದ್ಧಿಗೆ ಬೇಕಾದ ಜ್ಞಾನಕ್ಕೆ ಮೂಲತಃ ಮೂಲವಿಜ್ಞಾನದ ಸಂಶೋಧನೆ, ಅಧ್ಯಯನ, ಗ್ರಹಿಕೆ, ವೈಜ್ಞಾನಿಕ ತರ್ಕ, ವಸ್ತುಗಳ ಸರಿಯಾದ ಪರಿಮಾಣಗಳ ಸಂಯೋಜನೆಯ ಅಂಶಗಳ ಒಟ್ಟುಗೂಡುವಿಕೆಯಿಂದ ಆಗಬಹುದಾದ ಪರಿಣಾಮ ಹಾಗೂ ಈ ಎಲ್ಲಾ ಅಧ್ಯಯನಗಳಿಂದ ಸೃಜಿತವಾದ ಅಂಶಗಳೇ ಅಡಿಪಾಯವಾಗಿದ್ದು, ಮೂಲವಿಜ್ಞಾನ ಕ್ಷೇತ್ರವನ್ನು ಕಡೆಗಣಿಸಕೂಡದು ಎಂಬ ಅರಿವನ್ನು ಸಮಾಜ ಇನ್ನೂ ಹೆಚ್ಚು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಸಮಾಜದ ಸಮತೋಲನಕ್ಕೆ ತಂತ್ರಜ್ಞಾನ, ವೈದ್ಯಕೀಯ, ಕಲೆ, ವಾಣಿಜ್ಯ, ವೃತ್ತಿಪರ ತರಬೇತಿ ಹೀಗೆ ಎಲ್ಲಾ ಕ್ಷೇತ್ರಗಳನ್ನೂ ಸಮಾನ ಗೌರವದಿಂದ ಕಾಣುವುದು ಅಗತ್ಯ ಎಂದರು.

ಅನ್ವಯಿಕವಾಗಿ ಮೂಲವಿಜ್ಞಾನದ ಕಲಿಕೆ ಹಾಗೂ ಕಾರ್ಯನಿರ್ವಹಣೆಗೆ ಪೂರಕವಾದ ಅನೇಕ ಹೊಸಾ ಸಾಧ್ಯತೆಗಳನ್ನು ಆಧುನಿಕ ತಂತ್ರಜ್ಞಾನದ ಭಾಗವಾದ ಕೃತಕ ಬುದ್ಧಿಮತ್ತೆಯು ರೂಪಿಸಿದೆ. ಎಲ್ಲಾ ಮೂಲವಿಜ್ಞಾನ ವಿಷಯಗಳ ಕಾರ್ಯಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಬಲ್ಲ ಹೊಸ ಕೃತಕ ಬುದ್ಧಿಮತ್ತೆಯ ಉತ್ಪನ್ನಗಳು ಲಭ್ಯವಿದ್ದು ಅವುಗಳನ್ನು ಉಪಯೋಗಿಸುವ ವಿಧಾನಗಳನ್ನು ಕಾಲೇಜು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕುಮಾರಿ ಐಶ್ವರ್ಯ ಹಾಗೂ ಹರ್ಷಿತಾ ಪ್ರಾರ್ಥಿಸಿದರು.
ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾದ ಡಾ. ಸುಧಾಮ ವಿ.ಎನ್. ಸ್ವಾಗತಿಸಿದರು. ಪ್ರಿನ್ಸಿಪಾಲರಾದ ಡಾ. ರವಿಕಾಂತ ಎಂ.ಎನ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಶ್ರೀಮತಿ ಸಾದಿಯಾ ಖಾನ್ ಮುಖ್ಯಅತಿಥಿಗಳಾದ ಪ್ರಧಾನ ಭಾಷಣಕಾರ ಸಂಪನ್ಮೂಲ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಪರಿಚಯಿಸಿದರು. ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ರಾಘವೇಂದ್ರ ಕೆ. ವಿಶೇಷ ಅಹ್ವಾನಿತರಾಗಿದ್ದರು.

ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾದ ಡಾ. ಆನಂದ ಗೋವಿಂದ ಪುರಾಣಿಕ್,
ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾದ ಡಾ. ಗುರುಸ್ವಾಮಿ ಕೆ., ಪ್ರೊಫೆಸರ್ ಡಾ. ನವೀನ್ ಕುಮಾರ್, ಪ್ರೊಫೆಸರ್ ಕೃಷ್ಣಮೂರ್ತಿ ಎಸ್.ಎಂ., ಡಾ. ಚಂದ್ರಪ್ಪ, ಪ್ರೊಫೆಸರ್ ಗೋವಿಂದರಾಜು, ಅಧ್ಯಾಪಕಿ ಕು. ಅನುಷಾ ಎಂ. ಪಾಟೀಲ್ ಉಪಸ್ಥಿತರಿದ್ದರು.

ಅಧ್ಯಾಪಕಿ ಕು. ನಿಶ್ಚಿತಾ ವಂದನಾರ್ಪಣೆ ನೆರವೇರಿಸಿದರು.
ಕಾರ್ಯಕ್ರಮದ ವೇದಿಕೆ ನಿರ್ವಹಣೆಯನ್ನು ಡಾ. ಮಾರುತಿ ಅಂಬಿಗೇರ್ ಸಹಾಯಕ ಪ್ರಾಧ್ಯಾಪಕರು, ಇವರು ನೆರವೇರಿಸಿದರು.

ಸ್ನಾತಕೋತ್ತರ ವಿಭಾಗಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಎಂ.ಎಸ್ಸಿ. ಸ್ನಾತಕೋತ್ತರ ವಿಭಾಗಗಳ ಸುಮಾರು 150 ಜನ ವಿದ್ಯಾರ್ಥಿಗಳು ವಿಚಾರ ಸಂಕಿರಣದ ಸದುಪಯೋಗವನ್ನು ಪಡೆದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now