ಚಿತ್ರದುರ್ಗ. ಅ.09: ವಚನ, ಕೀರ್ತನೆ ಹಾಗೂ ತತ್ವಪದಗಳಲ್ಲಿ ಜೀವನ ಪ್ರೀತಿ ಅಡಗಿದೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಜಿಲ್ಲಾ ಸಂಚಾಲಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಸ್ವಾಯತ್ತ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನಕ ಸಂಸ್ಕøತಿ ಪುನಶ್ಚೇತನ ಶಿಬಿರ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಹವೇ ದೇಗುಲ, ಆತ್ಮವೇ ದೇವರು ಎಂದು ನಂಬಿದ್ದ ತತ್ವಪದಕಾರರು ವೈಚಾರಿಕ ಬೀಜ ಬಿತ್ತುವ ಮೂಲಕ ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಿದರು. ಪ್ರಸ್ತುತ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ವಿದ್ಯಾರ್ಥಿಗಳು ಓದು, ಬರಹ ಹಾಗೂ ಮಾತಿನ ಶಕ್ತಿಯನ್ನು ಕಳೆದುಕೊಂಡು ವ್ಯಸನಿಗಳಾಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ವ್ಯಸನಮುಕ್ತರನ್ನಾಗಿ ಮಾಡುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಮಾನವೀಯತೆ, ವೈಚಾರಿಕ ಚಿಂತನೆ ಹಾಗೂ ಬುದ್ಧ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಾಹಿತ್ಯ ಪ್ರಕಾರಗಳಾದ ವಚನ, ಕೀರ್ತನೆ ಮತ್ತು ತತ್ವಪದಗಳು ಬರಿ ಸಾಹಿತ್ಯವಲ್ಲ, ಅವು ಸಾಮಾಜಿಕ ಮತ್ತು ಸಾಂಸ್ಕøತಿಕ ಆಂದೋಲನಗಳು. ಜನಸಾಮಾನ್ಯರ ಭಾμÉಯಲ್ಲಿ ಬದುಕಿನ ತಾತ್ವಿಕತೆ ಹಾಗೂ ಸಾಮಾಜಿಕ ಸುಧಾರಣೆಯನ್ನು ತಿಳಿಸಿದ ಜನಪರ ಚಳವಳಿಗಳಾಗಿವೆ. ಜಾತಿಸೂತಕ, ವರ್ಗಭೇದ ಮತ್ತು ಲಿಂಗ ತಾರತಮ್ಯವನ್ನು ಕಟುವಾಗಿ ವಿರೋಧಿಸಿದ ಈ ಚಳವಳಿಗಳು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿವೆ. ಇವುಗಳ ಅಧ್ಯಯನದಿಂದ ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಮೂಡುತ್ತವೆ ಎಂದರು.
ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೆಚ್. ಜಿ. ವಿಜಯಕುಮಾರ ಮಾತನಾಡಿ, ಶರಣರು ಭಕ್ತಿ ಮತ್ತು ಸಾಮರಸ್ಯದ ಮೂಲಕ ನಡೆಸಿದ ಆಂದೋಲನಗಳು ಜನಸಾಮಾನ್ಯರನ್ನು ಒಂದುಗೂಡಿಸಿವೆ. ಯುವಜನತೆಯನ್ನು ಉತ್ತಮ ಮಾರ್ಗದತ್ತ ಕೊಂಡೊಯ್ಯಲು ಈ ಆಂದೋಲನಗಳ ತಾತ್ವಿಕತೆಯನ್ನು ಎಲ್ಲರೂ ಅರ್ಥೈಸಿಕೊಳ್ಳುವುದು ಅಗತ್ಯ ಎಂದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಆರ್. ತಾರಿಣಿ ಶುಭಾದಾಯಿನಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಓದು ವ್ಯಾಖ್ಯಾನ ಹಾಗೂ ವೈಚಾರಿಕ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ 30 ವಿದ್ಯಾರ್ಥಿಗಳಿಗೆ ತಲಾ ರೂ1,000 ಹಾಗೂ ಪ್ರಬಂಧ ಸ್ಪರ್ಧೆಯಲ್ಲಿದ್ದ 15 ವಿದ್ಯಾರ್ಥಿಗಳಿಗೆ ತಲಾ ರೂ.2,000 ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಯನ ಕೇಂದ್ರದ ನಿರ್ದೇಶಕ ಸತ್ಯನಾರಾಯಣ, ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಕೆ.ಚಿತ್ತಯ್ಯ, ಸಹ ಪ್ರಾಧ್ಯಾಪಕರಾದ ಎನ್. ಜಗನ್ನಾಥ, ಕೆ. ಮಂಜುನಾಥ, ಐಕ್ಯೂಎಸಿ ಸಹ ಸಂಚಾಲಕಿ ಸೌಮ್ಯ, ಅಧೀಕ್ಷಕ ಹರಿಶಬಾಬು ರೆಡ್ಡಿ, ಕನ್ನಡ ಸ್ನಾತಕ ವಿಭಾಗದ ಮುಖ್ಯಸ್ಥೆ ಲಕ್ಷ್ಮಿ, ಸಲ್ಮಾ ಹಾಗೂ ಸಹಾಯಕ ಪ್ರಾಧ್ಯಾಪಕ ಗಿರೀಶ ಗೌಡ ಉಪಸ್ಥಿತರಿದ್ದರು.











