ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಅ. 09 : ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ, ಶ್ರೀ ಜಗದ್ಗುರು ಮುರುಘಾರಾಜೇಂದ್ರ ವಿಶ್ವವಿದ್ಯಾಲಯ ಹಾಗೂ ಶ್ರೀ ಮುರುಘಾರಾಜೇಂದ್ರ ವಿದ್ಯಾಪೀಠದ ಜಂಟಿ ಸಹಯೋಗದಲ್ಲಿ 9 ದಿನಗಳ ಕಾಲ ‘ಶರಣ ಸಂಸ್ಕೃತಿ ಉತ್ಸವ 2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ ಬಸವಕುಮಾರಸ್ವಾಮಿಗಳ ತಿಳಿಸಿದರು.
ಚಿತ್ರದುರ್ಗ ನಗರದ ಹೊರ ವಲಯದ ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮಿಗಳ ಸಭಾಭವನದಲ್ಲಿ ಶುಕ್ರವಾರ ‘ಶರಣ ಸಂಸ್ಕೃತಿ ಉತ್ಸವ 2026’ದ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಿಳಿಸಲು ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾಹಿತಿ ನೀಡಿದ ಶ್ರೀಗಳು, ಈ ಒಂಬತ್ತು ದಿನಗಳ ಬೃಹತ್ ಉತ್ಸವದಲ್ಲಿ ಪ್ರತಿವರ್ಷದಂತೆ ಸಾಂಸ್ಕೃತಿಕ, ಸಾಹಿತ್ಯಿಕ, ಜನಪದ, ಮಹಿಳಾ, ಮಕ್ಕಳ ಹಾಗೂ ಕ್ರೀಡಾ ಕೂಟಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಗಳು ಮುಂಜಾನೆ 5:30ರಿಂದ ಆರಂಭಗೊಂಡು ರಾತ್ರಿ 10 ಗಂಟೆಯವರೆಗೆ ನೆರವೇರಲಿವೆ. ರಾಷ್ಟ್ರೀಯ ಮಟ್ಟದ ಯೋಗಪಟು ವೈದ್ಯ ಶ್ರೀ ಚನ್ನಬಸವಣ್ಣ ಅವರ ನೇತೃತ್ವದಲ್ಲಿ ಪ್ರತಿದಿನ ಬೆಳಿಗ್ಗೆ ಯೋಗಾಭ್ಯಾಸ ಹಾಗೂ ಶಿವಯೋಗಾಭ್ಯಾಸ ನಡೆಯಲಿದೆ ಎಂದರು.
ನಾಡಿನ ವಿವಿಧ ಬಸವ ಒಕ್ಕೂಟಗಳು, ಲಿಂಗಾಯತ ಸಂಘಟನೆಗಳು ಹಾಗೂ ಮಠಗಳ ಸಹಯೋಗದೊಂದಿಗೆ ವಿಚಾರ ಸಂಕಿರಣಗಳು ನಡೆಯಲಿವೆ. ಈ ವೇಳೆ ನಾಲ್ಕು ಪ್ರಮುಖ ಕೃತಿಗಳು ಲೋಕಾರ್ಪಣೆಗೊಳ್ಳಲಿದ್ದು, ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಬಸವ ಸಮಿತಿಯ ಅಧ್ಯಕ್ಷ ಅರವಿಂದ್ ಜತ್ತಿ ಹಾಗೂ ಸಿದ್ಧಣ್ಣ ಲಂಗೋಟಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮ ಶತಮಾನೋತ್ಸವ, ಫಾ.ಗು. ಹಳಕಟ್ಟಿ ಅವರ ‘ಶಿವಾನುಭವ’ ಪತ್ರಿಕೆಯ 100 ವರ್ಷಗಳ ನೆನಪಿನ ಸಮಾರಂಭ, ಪತ್ರಕರ್ತ ವೈ.ಎನ್. ಕೃಷ್ಣಮೂರ್ತಿ ಅವರ ನೆನಪಿನ ಕಾರ್ಯಕ್ರಮ ಹಾಗೂ ಎಸ್. ನಿಜಲಿಂಗಪ್ಪ ಅವರ 125ನೇ ಜನ್ಮ ವರ್ಷಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಗೋಷ್ಠಿಯಲ್ಲಿ ರಾಜ್ಯದ ಪ್ರಮುಖ ಪತ್ರಿಕೆಗಳ ಸಂಪಾದಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಕ್ಟೋಬರ್ 18ರ ಭಾನುವಾರ ಮಧ್ಯಪಾನ ನಿಯಂತ್ರಣ ಸಮ್ಮೇಳನ ಹಾಗೂ ಮದ್ಯವರ್ಜನ ಕುರಿತು ಬೃಹನ್ಮಠ, ಲಿಂಗಾಯತ ಹಾಗೂ ದಲಿತ-ಹಿಂದುಳಿದ ಮಠಾಧೀಶರ ಒಕ್ಕೂಟಗಳು ಮತ್ತು ಮದ್ಯಪಾನ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಸುಮಾರು 300 ಮಠಾಧೀಶರು ಹಾಗೂ 300 ಪ್ರಗತಿಪರ ಚಿಂತಕರ ಉಪಸ್ಥಿತಿಯಲ್ಲಿ ದುಂಡುಮೇಜಿನ ಪರಿಷತ್ತು ನಡೆಯಲಿದೆ. ಇದ್ದಲ್ಲದೆ ರಾಜ್ಯ ಮಟ್ಟದ ಅಂಗವಿಕಲ ಚೇತನರ ಕುರಿತು ವಿಶೇಷ ಸಮಾವೇಶವನ್ನು ಆಯೋಜಿಸಲಾಗಿದ್ದು, ಅವರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ 1 ಲಕ್ಷ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೃಷಿ ಮೇಳದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಸವಾಲುಗಳು ಮತ್ತು ಜವಾಬ್ದಾರಿಗಳ ಕುರಿತು ರೈತರೊಂದಿಗೆ ಚರ್ಚಾ ಗೋಷ್ಠಿ ನಡೆಯಲಿದೆ. ಇದರೊಂದಿಗೆ ಜೋಡೆತ್ತು ಸ್ಪರ್ಧೆ ಹಾಗೂ ಅಪರೂಪದ ಸಾಕುಪ್ರಾಣಿಗಳ ಪ್ರದರ್ಶನವೂ ಇರಲಿದೆ ಎಂದರು.
10,000 ಜನ ಭಕ್ತರು ಏಕಕಾಲದಲ್ಲಿ 32 ವಚನಗಳನ್ನು ಸಮೂಹ ಗಾಯನ ಮಾಡುವ ‘ವಚನ ಜಯಂಕಾರ’ ವಿಶೇಷ ಆಕರ್ಷಣೆಯಾಗಿದ್ದು, ಗದಗ, ಇಳಕಲ್ ಹಾಗೂ ಬಾಲ್ಕಿ ಶ್ರೀಗಳು ಭಾಗವಹಿಸಲಿದ್ದಾರೆ. ಜೊತೆಗೆ ಸ್ಥಳೀಯ ಮಹಿಳೆಯರ ಸಾಧನೆ ಗುರುತಿಸುವ ಮಹಿಳಾ ಗೋಷ್ಠಿ, ಸಾಂಪ್ರದಾಯಿಕ ವೈದ್ಯರ ಸಮ್ಮೇಳನ, ಮಕ್ಕಳ ಗೋಷ್ಠಿ, ಕ್ರೀಡಾಕೂಟಗಳು ಮತ್ತು ಜಾನಪದ ಕಲಾಮೇಳಗಳು ನಡೆಯಲಿವೆ ಎಂದು ಶ್ರೀಗಳು ತಿಳಿಸಿದರು.

ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ಚಿತ್ರದುರ್ಗದ ಶ್ರೀಮಠದ ವತಿಯಿಂದ ಪ್ರತಿವರ್ಷದಂತೆ ನಡೆಯಲಿರುವ ಒಂಬತ್ತು ದಿನಗಳ ಕಾಲದ ‘ಶರಣ ಸಂಸ್ಕೃತಿ ಉತ್ಸವ’ವನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಮುರುಘಾ ಪರಂಪರೆಯಲ್ಲಿ ಹಿಂದಿನಿಂದಲೂ ಶರಣ ಸಂಸ್ಕೃತಿ ಉತ್ಸವದಲ್ಲಿ ಆಚರಿಸಿಕೊಂಡು ಬಂದಿರುವ ಯಾವುದೇ ಆಚರಣೆಗಳಿಗೆ ಧಕ್ಕೆಯಾಗದಂತೆ ಹಾಗೂ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿ ನೆರವೇರಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಅವರು ಸ್ವಾಮೀಜಿಯವರಿಗೆ ಮತ್ತು ಶ್ರೀಮಠದ ಮಂಡಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ ರಾಜಕೀಯ ವಿದ್ಯಮಾನಗಳು ಅಥವಾ ಚುನಾವಣಾ ನೀತಿ ಸಂಹಿತೆಯ ನಡುವೆಯೂ ಶ್ರೀಮಠದ ಸಾಂಪ್ರದಾಯಿಕ ಶರಣ ಸಂಸ್ಕೃತಿ ಉತ್ಸವವು ತನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದೊಂದಿಗೆ ನಿಗದಿತವಾಗಿ ನೆರವೇರಲಿದೆ ಎಂದು ತಿಳಿಸಿದರು.
ಪ್ರಸಕ್ತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕಾರಣಿಗಳ ಭಾಗವಹಿಸುವಿಕೆ ಕುರಿತು ಉದ್ಭವಿಸಬಹುದಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಕಳಸದ್ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಅಧ್ಯಕ್ಷರ ಮಾರ್ಗದರ್ಶನದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಯಶಸ್ವಿಯಾಗಿ ನೆರವೇರಲು ಅಗತ್ಯವಿರುವ ಮುನ್ನೆಚ್ಚರಿಕೆ ಹಾಗೂ ಸಿದ್ಧತಾ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ.
ಚಿತ್ರದುರ್ಗ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಬಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಮುಂಚಿನಂತೆಯೇ ಯಶಸ್ವಿಗೊಳಿಸಬೇಕೆಂದು ಶ್ರೀಮಠದ ಪರವಾಗಿ ಸಮಸ್ತ ಭಕ್ತರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ಮಾತನಾಡಿ, ನಗರದಲ್ಲಿ ನಡೆಯಲಿರುವ ಒಂಬತ್ತು ದಿನಗಳ ಕಾಲದ ‘ಶರಣ ಸಂಸ್ಕೃತಿ ಉತ್ಸವವು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮಹತ್ವದ ಕಾರ್ಯ ಕ್ರಮವಾಗಿದೆಇದರ ಭಾಗವಾಗಿ ಅತ್ಯಂತ ವೈಭವದ ಹಾಗೂ ಐತಿಹಾಸಿಕ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಶ್ರೀಮಠವು ತಮಗೆ ಈ ಐತಿಹಾಸಿಕ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದು, ಅದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವುದಾಗಿ ತಿಳಿಸಿದರು.
ಈ ಬಾರಿಯ ಕುಸ್ತಿ ಪಂದ್ಯಾವಳಿಯಲ್ಲಿ ಮಹಿಳೆಯರು ಹಾಗೂ ಪುರುಷರು ಇಬ್ಬರಿಗೂ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಸೂಕ್ತ ಬಹುಮಾನಗಳನ್ನು ನೀಡಲಾಗುವುದು ಹಿಂದೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು ಕುಸ್ತಿ ಕಲೆಗೆ ಹೆಸರುವಾಸಿಯಾಗಿದ್ದವು. ದಕ್ಷಿಣ ಭಾರತ ಹಾಗೂ ಕರ್ನಾಟಕ ಮಟ್ಟದಲ್ಲಿ ‘ಮದಕರಿ’ ಎಂಬ ಹೆಸರು ಬರಲು ಕುಸ್ತಿ ಪಟುಗಳ ಕೊಡುಗೆ ಅಪಾರವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾನಪದ ಕ್ರೀಡೆ ಹಾಗೂ ಪರಂಪರೆ ಕಾಣೆಯಾಗುತ್ತಿದ್ದು, ಕೇವಲ ಕ್ರೀಡೆಯಾಗಿ ಮಾತ್ರ ಉಳಿದುಕೊಂಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗರಡಿ ಮನೆಗಳಲ್ಲಿ ಪೂಜೆ ಸಲ್ಲಿಸುವ ಮಟ್ಟಕ್ಕೆ ಕುಸ್ತಿ ಸೀಮಿತವಾಗುತ್ತಿರುವ ಈ ಸಂದರ್ಭದಲ್ಲಿ, ಈ ಸಾಂಪ್ರದಾಯಿಕ ಕ್ರೀಡೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಶ್ರೀಮಠವು ಈ ಆಯೋಜನೆ ಮಾಡಿದೆ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಭಾಗಗಳಿಂದ ಸುಮಾರು 300ಕ್ಕೂ ಹೆಚ್ಚು ಕುಸ್ತಿ ಪಟುಗಳು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಕುಸ್ತಿ ಕಲೆಗೆ ಮರುಜೀವ ನೀಡುವ ಮತ್ತು ದೇಶದ ವಿವಿಧ ಭಾಗಗಳ ನೂರಾರು ಪಟುಗಳನ್ನು ಒಂದೇ ವೇದಿಕೆಗೆ ತಂದು ಜನರಿಗೆ ಕಸರತ್ತಿನ ರಸದೌತಣ ನೀಡುವ ನಿಟ್ಟಿನಲ್ಲಿ ಶರಣ ಸಂಸ್ಕೃತಿ ಉತ್ಸವದ ಕುಸ್ತಿ ಪಂದ್ಯಾವಳಿ ಪ್ರಮುಖ ಹೆಜ್ಜೆಯಾಗಿದೆ.
ಗೋಷ್ಟಿಯಲ್ಲಿ ಪಟೇಲ್ ಶಿವಕುಮಾರ್, ಸಿದ್ದಾಪುರದ ಪರಮೇಶ್ವರಪ್ಪ, ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ, ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುನೀತಾ ಮಲ್ಲಿಕಾರ್ಜನ್, ಶ್ರೀ ಜಗದ್ಗುರು ಮುರುಘಾರಾಜೇಂದ್ರ ವಿಶ್ವವಿದ್ಯಾಲಯದ ಕುಪತಿಗಳಾದ ಕುಡುಚಿ,ರೈತ ಮುಖಂಡ ರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸುರೇಶ್ ಬಸ್ತಿಹಳ್ಳಿ, ಹೋರಕೇರಪ್ಪ ವೀರೇಂದ್ರ ಕುಮಾರ್ ಸೇರಿದಂತೆ ಹರಗುರು ಚರಮೂರ್ತಿಗಳು ಭಾಗವಹಿಸಿದ್ದರು.












