Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಮಸ್ಯೆ, ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಉತ್ತಮ ಭವಿಷ್ಯ : ಡಾ.ಮಂಜುನಾಥ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : : ಜೀವನದಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ದಾವಣಗೆರೆ
ಎಸ್‍ಬಿಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮಂಜುನಾಥ ಕೆ.ಎಂ. ವಿದ್ಯಾರ್ಥಿನಿಯರಿಗೆ ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ ಸಮಾಜಶಾಸ್ತ್ರ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪದವಿಯಿಂದ ವೃತ್ತಿ ಜೀವನದತ್ತ ಸಮಾಜಶಾಸ್ತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಜಗತ್ತು ವೇಗವಾಗಿ ಸಾಗುತ್ತಿದೆ. ಮೊಬೈಲ್, ಟಿ.ವಿ. ನೋಡಿಕೊಂಡು ಕಾಲ ಕಳೆದು ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಸಾಮಾಜಿಕ ಸಂಬಂಧ ಕಡಿಮೆಯಾಗುತ್ತಿದೆ. ವ್ಯಕ್ತಿತ್ವ ವಿಕಸನ, ಜ್ಞಾನಕ್ಕಾಗಿ ಶಿಕ್ಷಣ ಎನ್ನವುದನ್ನು ಮರೆಯಬೇಡಿ. ಪ್ರಾಚೀನ ಕಾಲದಲ್ಲಿ ರಾಜಮಹಾರಾಜರು ಮಕ್ಕಳನ್ನು ಗುರುಕುಲಕ್ಕೆ ಕಳಿಸುತ್ತಿದ್ದರು. ಮೌಲ್ಯವಿಲ್ಲದ ಶಿಕ್ಷಣ ಸುಗಂಧವಿಲ್ಲದ ಹೂವಿನಂತೆ. ಹಾಗಾಗಿ ಶಿಕ್ಷಣದ ಜೊತೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯಿರಿ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ನೀವುಗಳು ಕಲಿಯುವ ಶಿಕ್ಷಣ ಜ್ಞಾನವಾಗಿ ಪರಿವರ್ತನೆಯಾಗದಿದ್ದರೆ ವ್ಯರ್ಥವಾಗುತ್ತದೆ. ಎಲ್ಲರೂ ಸಾಮಾಜಿಕ ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಅಂತಹ ಸಮಾಜ, ದೇಶ ಅಭಿವೃದ್ದಿಯಾಗಲ್ಲ. ಎಲ್ಲೆಡೆ ನಗರೀಕರಣವಾಗುತ್ತಿದೆ. ಸಮಾಜಶಾಸ್ತ್ರವೆಂದರೆ ಕೀಳರಿಮೆ ಬೇಡ. ಜೀವನೋತ್ಸಾಹ ತುಂಬುವ ವಿಷಯ ಎನ್ನುವುದು ನೆನಪಿರಲಿ. ಎಲ್ಲಾ ರಂಗಗಳಲ್ಲಿಯೂ ವಿಫುಲ ಅವಕಾಶಗಳಿವೆ. ಹುಡುಕಿಕೊಂಡು ಹೋಗಬೇಕಷ್ಟೆ. ಸಮಾಜಶಾಸ್ತ್ರಕ್ಕೆ ಬದುಕು ಕಟ್ಟಿಕೊಡುವ ಅನ್ನ ನೀಡುವ ಶಕ್ತಿಯಿದೆ. ಕೈತುಂಬಾ ಹಣ
ಸಿಕ್ಕರೆ ಖುಷಿಯಾಗಿರಬಹುದೆಂಬುದು ಮೂರ್ಖತನ. ಭವಿಷ್ಯದ ಜವಾಬ್ದಾರಿಗಳೇನು ಎನ್ನುವುದರ ಕಡೆ ನಿಮ್ಮಲ್ಲಿ ಅರಿವಿರಬೇಕೆಂದು ಹೇಳಿದರು.

ಜ್ಞಾನ ಸಂಪಾದಿಸಿದರೆ ಎಂದಿಗೂ ನಷ್ಟವಾಗುವುದಿಲ್ಲ. ಮೊಬೈಲನ್ನು ಮಾಹಿತಿ, ಸಂವಹನಕ್ಕಾಗಿ ಬಳಸಿಕೊಳ್ಳಿ. ಸರ್ಕಾರದಷ್ಟೆ ಎನ್.ಜಿ.ಓ.ಗಳಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಿ. ಡಾ.ಎ.ಪಿ.ಜೆ.ಅಬ್ದುಲ್‍ಕಲಾಂ, ಡಾ.ಬಿ.ಆರ್.ಅಂಬೇಡ್ಕರ್, ಸರ್ ಎಂ.ವಿಶ್ವೇಶ್ವರಯ್ಯ ಇವರುಗಳೆಲ್ಲಾ ಬಡತನದಿಂದ ಮೇಲೆ ಬಂದು ಸಾಧಕರಾದವರು. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ. ನಿಮ್ಮ ಮೇಲೆ ನಂಬಿಕೆಯಿಟ್ಟುಕೊಂಡಿರುವ ತಂದೆ-ತಾಯಿಗಳ ಕನಸನ್ನು ನನಸು ಮಾಡಿ. ಕೆಲಸ ಯಾವುದಾದರೂ ಇರಲಿ ಶ್ರದ್ದೆ, ಏಕಾಗ್ರತೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿ. ಶಿಕ್ಷಣದ ಜೊತೆ ಕೌಶಲ್ಯ ಕಲಿಯಿರಿ. ಶಿಕ್ಷಣ ಉದ್ಯೋಗ ಕೊಡುತ್ತದೆ. ಉದ್ಯೋಗದಿಂದ ಸ್ಥಾನಮಾನ ಸಿಗುತ್ತದೆ. ದಿನಕ್ಕೆ ಕನಿಷ್ಟ ನಾಲ್ಕು ಗಂಟೆಯಾದರೂ ಓದಿ. ಸಾಧಿಸುವ ಗುರಿ ಇರಬೇಕು. ಆತ್ಮವಿಶ್ವಾಸವಿಲ್ಲದ ಶಿಕ್ಷಣ ಪ್ರಯೋಜನವಿಲ್ಲ ಎಂದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ.ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂಪನ್ಮೂಲ ವ್ಯಕ್ತಿಗಳು ನೀಡುವ ಉಪನ್ಯಾಸವನ್ನು ಒಂದು ಗಂಟೆಗಳ ಕಾಲ ಮನಸ್ಸಿಟ್ಟು ಕೇಳಿದರೆ ಹತ್ತಾರು ಪುಸ್ತಕಗಳ ಓದಿಗೆ ಸಮ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡರೆ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ರಾಜಕೀಯ ಅಸ್ತಿರತೆ, ವಾಸ್ತವದಲ್ಲಿ ಸಮಾಜ ಅಸ್ತವ್ಯಸ್ಥವಾಗುತ್ತಿದೆ. ಸಾಮಾಜಿಕ ಸಂಬಂಧ ಉತ್ತಮಗೊಳ್ಳಬೇಕು. ದೇಹ ಮನಸ್ಸು ಜೊತೆಯಲ್ಲಿರಬೇಕು. ಸಮಾಜಶಾಸ್ತ್ರ
ರಾಜ್ಯಶಾಸ್ತ್ರ, ಅರ್ಥಶಾಸ್ತ್ರವನ್ನು ಓದಿ. ಎಲ್ಲಾ ಶಾಸ್ತ್ರಗಳು ಹುಟ್ಟಿದ್ದು, ಸಮಾಜಶಾಸ್ತ್ರಗಳ ಆಧಾರದ ಮೇಲೆ ಯಾವುದೇ ಪದವಿ ಗಳಿಸಿ ಅದು ಬದುಕು ಕಟ್ಟಿಕೊಡುವಂತಿರಬೇಕೆಂದು ನುಡಿದರು.

 

ಎಲ್ಲರೂ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರುವುದಿಲ್ಲ. ಸಂಪನ್ಮೂಲ ವ್ಯಕ್ತಿಗಳು ನೀಡುವ ಉಪನ್ಯಾಸಗಳಿಂದ ಜ್ಞಾನ ಹೆಚ್ಚುತ್ತದೆ ಎಂದು ಹೇಳಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವಿಜಯಲಕ್ಷ್ಮಿ ಆರ್. ಮಾತನಾಡಿ ಸಮಾಜಶಾಸ್ತ್ರವೆಂದರೆ ಕೇವಲ ಕಲಿಕೆಯಲ್ಲ. ಕ್ಷೇತ್ರ ಕಾರ್ಯಕ್ಕೆ ನೆರವಾಗಲಿದೆ. ಪದವಿಯ ಜೊತೆ ಭವಿಷ್ಯ, ಉದ್ಯೋಗ ಕುಟುಂಬಕ್ಕೆ ಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ವಿಷಯಗಳಿಗೂ ಬೇಡಿಕೆಯಿದೆ. ಕಲಿಕೆಯ ಜೊತೆ ಕಂಪ್ಯೂಟರ್ ಜ್ಞಾನವಿರಬೇಕು. ಸಾಮಾನ್ಯ ಜ್ಞಾನವಿಲ್ಲದಿದ್ದರೆ ರ್ಯಾಂಕ್ ಗಳಿಸಿದರೂ ಉಪಯೋಗಕ್ಕೆ ಬರುವುದಿಲ್ಲ. ಸಮಾಜಶಾಸ್ತ್ರವೆಂದರೆ ಜೀವಂತ ಪಠ್ಯ. ಪುಸ್ತಕದಿಂದ ಜ್ಞಾನ ಹೆಚ್ಚುತ್ತೆ. ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕದ್ದನ್ನು ಬಳಸಿಕೊಳ್ಳುವ ಬುದ್ದಿವಂತಿಕೆಯಿರಬೇಕೆಂದು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದರು.
ಸಹಾಯಕ ಪ್ರಾಧ್ಯಾಪಕ ಮಹಾಂತೇಶ್ ಕೆ.ಹೆಚ್. ಐ.ಕ್ಯು.ಎ.ಸಿ. ಸಂಚಾಲಕ ಹಲಸಂದಿ ಸತೀಶ್ ಇವರುಗಳು ವೇದಿಕೆಯಲ್ಲಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now