ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ಮಾ.07) : ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಚುನಾವಣೆಯಲ್ಲಿ ತಿಳಿಸಿದಂತೆ ಉದ್ಯೋಗವನ್ನು ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಇದರಿಂದ ಪದವಿಯನ್ನು ಪಡೆದ ಯುವಜನತೆ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಇದರ ವಿರುದ್ದ ಯುವ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಮಾ.8 ರಂದು ಚಿತ್ರದುರ್ಗ ನಗರದಲ್ಲಿ ಯುವಕ್ರಾಂತಿ ಸಮಾವೇಶವನ್ನು ನಡೆಸುತ್ತಿರುವವುದಾಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಏಳುವರೆ ವರ್ಷವಾಗಿದೆ, ಅವರು ಹೇಳಿದಂತೆ ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವುದಾಗಿ ತಿಳಿಸಿದ್ದರು ಅದರಂತೆ ಈವರೆವಿಗೆ ಸುಮಾರು ಹದಿನಾಲ್ಕುವರೆ ಉದ್ಯೋಗ ಸೃಷಿಯಾಗಬೇಕಿತ್ತು ಆದರೆ ಇದರುವರೆವಿಗೂ ಒಂದು ಉದ್ಯೋಗವನ್ನು ಸಹಾ ಸೃಷ್ಟಿ ಮಾಡಿಲ್ಲ, ಪದವಿಯನ್ನು ಪಡೆದ ಯುವಜನತೆ ಸರ್ಕಾರದ ಈ ಕ್ರಮದಿಂದ ಭ್ರಮನಿರಸನಗೊಂಡಿದ್ದಾರೆ. ಓದಿದರು ಸಹಾ ಉದ್ಯೋಗ ವಿಲ್ಲದಂತೆ ಆಗಿದೆ. ಸರ್ಕಾರ ಯುವಜನತೆಯನ್ನು ಮೋಸ ಮಾಡಿದೆ ಎಂದು ಆರೋಪಿಸಿದರು.
ಯುವಜನತೆ 5-6 ವರ್ಷ ಓದು ಪದವಿ ಪ್ರಮಾಣ ಪತ್ರವನ್ನು ಕೈಯಲ್ಲಿ ಇಟ್ಟುಕೊಂಡು ಉದ್ಯೋಗಕ್ಕಾಗಿ ಆಲೆದಾಡುತ್ತಿದ್ದಾರೆ. ಆದರೆ ಉದ್ಯೋಗ ಮಾತ್ರ ಎಲ್ಲೂ ಸೃಷ್ಟಿಯಾಗಿಲ್ಲ, ಅಧಿಕಾರ ಪಡೆಯುವುದಕ್ಕೆ ಸುಳ್ಳು ಭರವಸೆಯನ್ನು ನೀಡಿದ ಬಿಜೆಪಿ ಯುವಜನತೆಯ ಬದುಕಿನಲ್ಲಿ ಆಟವಾಡುತ್ತಿದೆ.
ಅವರ ಜೀವನವನ್ನು ಹಾಳು ಮಾಡುತ್ತಿದೆ. ವಿನಾಕಾರಣ ಕೋಮ, ಗಲಭೆಯನ್ನು ಸೃಷ್ಟಿ ಮಾಡಿ ಅವರನ್ನು ಹಾಳು ಮಾಡುತ್ತಿದೆ. ಸಚಿವರು ಓರ್ವರು ರಾಷ್ಟ್ರ ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ಹಾಕುವುದಾಗಿ ಹೇಳಿದ್ದಾರೆ. ಆದರೆ ಉಕ್ರನ್ನಲ್ಲಿ ನಮ್ಮ ರಾಷ್ಟ್ರ ಧ್ವಜ ಇದ್ದ ವಾಹನಕ್ಕೆ ಏನು ಮಾಡದೇ ಅವರು ಹೋಗಲಿಕ್ಕೆ ದಾರಿ ಮಾಡಿದ್ದಾರೆ ಇದು ನಮ್ಮ ರಾಷ್ಟ್ರ ಧ್ವಜ ಮಹತ್ವ ಇದರ ಬಗ್ಗೆ ತಿಳಿಯದವರು ಏನೇನೂ ಮಾತನಾಡುತ್ತಿದ್ದಾರೆ ಎಂದು ಉಲ್ಲಾಸ್ ದೂರಿದರು.
ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಯುವಜನತೆಗಾಗಿ ಏನು ಮಾಡಿದೆ. ಇದರ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ ನಾಳೆ ಯುವಕಾಂತ್ರಿ ಸಮಾವೇಶವನ್ನು ನಡೆಸಲಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಯುವಜನತೆಗಾಗಿ ಏನೇನು ಮಾಡಿದೆ ಎಂಬುದನ್ನು ಮುಖಂಡರು ತಿಳಿಸಲಿದ್ದಾರೆ.
ಮುಂಬರುವ ವಿಧಾನಸಭೆ ಮತು ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಯುವ ಕಾಂಗ್ರೆಸ್ ಶ್ರಮವನ್ನು ಹಾಕಲಿದೆ. ಇದಕ್ಕೆ ಈಗಿನಿಂದಲೇ ತಯಾರಿಯನ್ನು ಮಾಡಲಿದೆ ಎಂದು ತಿಳಿಸಿದರು.
ಯುವಕ್ರಾಂತಿ : ಜಿಲ್ಲಾ ಯುವ ಕಾಂಗ್ರೆಸ್ ಸಮಿತಿವತಿಯಿಂದ ಮಾ.8ರ ಮಂಗಳವಾರ ಮಧ್ಯಾಹ್ನ 12ಕ್ಕೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಯುವಕ್ರಾಂತಿ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಮಹಮ್ಮದ್ ಹ್ಯಾರೀಸ್ ನಲಪಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶಾಸಕರಾದ ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಹೆಚ್.ಅಂಜನೇಯ, ಡಿ.ಸುಧಾಕರ್, ಮಾಜಿ ಶಾಸಕರಾದ ಗೋವಿಂದಪ್ಪ, ಎಸ್.ತಿಪ್ಪೇಸ್ವಾಮಿ, ಶ್ರೀಮತಿ ಜಯಮ್ಮ ಬಾಲರಾಜ್, ರಘು ಆಚಾರ್, ಉಮಾಪತಿ, ಮುಖಂಡರಾದ ಬಿ.ಸೋಮಶೇಖರ್, ಜಿ.ಎಸ್.ಮಂಜುನಾಥ್, ಕಾರ್ಯಧ್ಯಕ್ಷ ಹಾಲಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಯೋಗಿಶ್ ಬಾಬು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಡಿಸಿಸಿ ಅಧ್ಯಕ್ಷ ತಾಜ್ ಪೀರ್ ಸಮಾರಂಭದ ಅಧ್ಯಕ್ಷತೆವಹಿಸಲಿದ್ದಾರೆ.
ಇದಕ್ಕೂ ಮುನ್ನಾ ರಾ,ಹೆ.4ರ ಉಪಾಧ್ಯ ಹೋಟೇಲ್ನಿಂದ ನಲಪಾಡ್ ರವರನ್ನು ದ್ವಿಚಕ್ರ ವಾಹನದ ರ್ಯಾಲಿಯ ಮೂಲಕ ನಗರದ ವಿವಿಧ ಬಡಾವಣೆಯಲ್ಲಿ ಸಂಚಾರಿಸಿ ಕಾರ್ಯಕ್ರಮ ನಡೆಯುವ ಸಮಾರಂಭಕ್ಕೆ ಕರೆತರಲಾಗುವುದು.
ಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ತಾಜ್ಪೀರ್, ಪ್ರಧಾನ ಕಾರ್ಯದರ್ಶೀ ಸಂಪತ್, ನಗರಸಭೆ ಮಾಜಿ ಆಧ್ಯಕ್ಷ ಮೈಲಾರಪ್ಪ, ಮಹಮ್ಮದ ಅಜುಮ್ಮ, ಮೂಡಲಗಿರಿಯಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.