ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 26 : ಸ್ವಯಂಪ್ರೇರಿತರಾಗಿ ಸತತ 25 ವರ್ಷಗಳಿಂದ ಅನ್ನಸಂತರ್ಪಣೆ ಸೇವೆ ಕೆ.ಎಂ. ವೀರೇಶ್ ಮಾಡಿದ್ದಾರೆ ಎಂದು ಚಿತ್ರದುರ್ಗ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ತಿಳಿನಿದರು.
ನಗರದ ಐಶ್ವರ್ಯ ಪೋರ್ಟ್ ಸಭಾಂಗಣದಲ್ಲಿ ಶುಕ್ರವಾರ ಡಾ.ಕೆ.ಎಂ.ವೀರೇಶ್ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕೆ.ಎಂ.ವೀರೇಶ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿವರ್ಷ ಜಿಲ್ಲಾ ಆಡಳಿತ ವತಿಯಿಂದ ನಡೆಯುವ ಶಿಕ್ಷಕರ ದಿನಾಚರಣೆಯ ದಿನದಂದು ದಿವಂಗತ ಕೆ.ಎಂ. ವೀರೇಶ್ ಅವರು ಯಾವುದೇ ಪ್ರಚಾರವಿಲ್ಲದೆ ಸ್ವಯಂಪ್ರೇರಿತರಾಗಿ ಸತತ 25 ವರ್ಷಗಳಿಂದ ಅನ್ನಸಂತರ್ಪಣೆ ಸೇವೆಯನ್ನು ಮಾಡಿದ್ದಾರೆ ಆದರೆ, ಇಂದು ನಮ್ಮನ್ನು ಅಗಲಿರುವುದು ತುಂಬಲಾರದ ನಷ್ಟ ತಂದಿದೆ ಪ್ರತಿವರ್ಷ ಶಿಕ್ಷಕರ ದಿನಾಚರಣೆಯಂದು ಡಾ.ಕೆ.ಎಂ. ವೀರೇಶ್ ಅವರು ಶ್ರದ್ಧೆಯಿಂದ ಅನ್ನಸಂತರ್ಪಣೆ ಮಾಡುತ್ತಿದ್ದ ವಿಷಯ ನನಗೆ ತಿಳಿದು ಆಶ್ಚರ್ಯವಾಯಿತು. ಅಂತಹ ಮಹಾನ್ ಅನ್ನದಾಸೋಹಿ ಇಂದು ನಮ್ಮ ನಡುವಿಲ್ಲ. ‘ಮುಂದಿನ ವರ್ಷದಿಂದ ಶಿಕ್ಷಕರ ದಿನಾಚರಣೆ ದಿನದಂದು ಯಾರು ತಾನೆ ಅನ್ನಸಂತರ್ಪಣೆ ಮಾಡುತ್ತಾರೆ?’ ಎಂದು ಶಿಕ್ಷಕರು ಆತಂಕದಿಂದ ಚರ್ಚಿಸುತ್ತಿರುವುದು ನಿಜಕ್ಕೂ ಕರುಳು ಚುರುಕ್ ಅನ್ನಿಸಿತು ಮತ್ತು ಎಂಥವರನ್ನೂ ಆಶ್ಚರ್ಯ ಹಾಗೂ ಯೋಚನೆಗೆ ಒಳಗಾಗಿಸುತ್ತದೆ” ಎಂದು ನುಡಿದರು.
ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಪತ್ರಕರ್ತರ ಸಂಘದಿಂದ ಯಾವಾಗಲಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ, ನೀವು ಕಡ್ಡಾಯವಾಗಿ ಕಾರ್ಯಕ್ರಮಕ್ಕೆ ಬರಬೇಕು ಎಂದು ಆಹ್ವಾನಿಸಿದರೆ ಸಾಕು, ಅವರು ತಕ್ಷಣವೇ ಸ್ಪಂದಿಸುತ್ತಿದ್ದರು. ಅಷ್ಟೇ ಅಲ್ಲದೆ, ನನ್ನ ಕಡೆಯಿಂದ ಏನು ಬೇಕು? ಎಂದು ತಾವಾಗಿಯೇ ಮುಂದೆ ನಿಂತು ಕೇಳುತ್ತಿದ್ದರು. ಆಗ ನಾವು, ನಿಮ್ಮಿಂದ ನಮಗೆ ಬೇರೆ ಯಾವುದೇ ಸಹಾಯ ಬೇಡ, ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಕು, ನಮಗೆ ಅಗತ್ಯವಿದ್ದಾಗ ನಾವೇ ತಿಳಿಸುತ್ತೇವೆ ಎಂದು ಹೇಳುತ್ತಿದ್ದೆವು. ಅಂತಹ ದೊಡ್ಡ ಗುಣವಂತ ಮತ್ತು ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಿರುವುದು ನೋವಿನ ಸಂಗತಿ ಎಂದು ಸ್ಮರಿಸಿದರು.
ಕೆಎಂಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಕೆ. ಮಂಜುಳ ಮಾತನಾಡಿ, ಬಾಪೂಜಿ ವಿದ್ಯಾಸಂಸ್ಥೆಯ ಮಕ್ಕಳು ಇತ್ತೀಚೆಗಷ್ಟೇ ಅಗಲಿದ ಬಾಪೂಜಿ ವಿದ್ಯಾಸಂಸ್ಥೆಯ ಹಿತೈಷಿ ಹಾಗೂ ಅನ್ನದಾಸೋಹಿ ಕೆ.ಎಂ. ವೀರೇಶ್ ಅವರ ಜ್ಞಾಪಕಾರ್ಥವಾಗಿ ವಿಶಿಷ್ಟ ರೀತಿಯಲ್ಲಿ ನುಡಿನಮನ ಸಲ್ಲಿಸಲಾಯಿತು.
ವೀರೇಶ್ ಅವರ ಸ್ಮರಣಾರ್ಥ ಶಾಲೆಯ ಪ್ರತಿಯೊಂದು ಮಗುವೂ ತಲಾ ಒಂದೊಂದು ಮುಷ್ಟಿ ಅಕ್ಕಿಯನ್ನು ತಂದು ಅನ್ನದಾಸೋಹಕ್ಕಾಗಿ ಪ್ರೀತಿಯಿಂದ ನೀಡಿದರು. ಹೀಗೆ ವಿದ್ಯಾರ್ಥಿಗಳಿಂದ ಸಂಗ್ರಹವಾದ ಅಕ್ಕಿ ಒಟ್ಟು 7 ಪಾಕೆಟ್‌ಗಳಾಗಿದೆ. ಆ ಅಕ್ಕಿಯನ್ನು ಮುರುಘಾಮಠದಲ್ಲಿ ನಡೆಯುವ ದಾಸೋಹಕ್ಕೆ ಸಮರ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ,ಡಾ. ಲೋಕೇಶ್ ಅಗಸನಕಟ್ಟೆ, ಡಾ.ಜೆ.ಕರಿಯಪ್ಪ
ಮಲ್ಲಿಕಾರ್ಜುನಯ್ಯ, ಪ್ರೊ. ನಟರಾಜ್ , ಆನಂದ್ ಕುಮಾರ್
ಜಿತೇಂದ್ರ,ನಿರಂಜನಮೂರ್ತಿ ,ರಾಜಣ್ಣ, ನಾಗರಾಜ್, ಸಂಗೇನಹಳ್ಳಿ ಅಶೋಕ್‌ಕುಮಾರ್ , ಆರ್. ಶೇಷಣ್ಣಕುಮಾರ್, ಜೆ.ಯಾದವರೆಡ್ಡಿ, ಎಚ್.ಎಸ್.ಟಿ. ಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ.ಸಿ.ಉಮಾಮಹೇಶ್ವರ, ಬಸವರಾಜ ಮುದನೂರು, ಕಿರಣ್‌ಕುಮಾರ್, ದ್ವಾರಕನಾಥ್, ಚಂದ್ರು, ಚಳ್ಳಕೆರೆ ವೀರೇಶ್, ಕ್ರಿಯೇಟಿವ್ ವೀರೇಶ್, ಹಾಸ್ಯ ಸಾಹಿತಿ ಜಗನ್ನಾಥ್, ಶಾರದಾ ಬ್ಯಾಂಡ್ ಗುರುಮೂರ್ತಿ, ಚಳ್ಳಕೆರೆ ಬಸವರಾಜ್, ಪ್ರಕಾಶ್ ಬಾದರದಿನ್ನಿ, ಪರಮೇಶ್ವರಪ್ಪ ಕುದುರಿ, ಹುರುಳಿ ಬಸವರಾಜ್, ಕೆ.ಎಂ.ವೀರೇಶ್ ಪ್ರತಿಷ್ಠಾನದ ಸಂಚಾಲಕ ಗೌನಹಳ್ಳಿ ಗೋವಿಂದಪ್ಪ, ಟಿ.ಎನ್.ಪ್ರಹ್ಲಾದ್, ರಂಗಕರ್ಮಿ ಕೆಪಿಎಂ ಗಣೇಶಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು.











