ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 23 : ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಸ್ವಚ್ಛತೆ ಕಾಪಾಡುವುದು ಸೇರಿದಂತೆ ವಿವಿಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾರುಕಟ್ಟೆಯ ಎಲ್ಲಾ ದಲ್ಲಾಲರು ಹಾಗೂ ಖರೀದಿದಾರರಿಗೆ ಎಪಿಎಂಸಿ ಕ್ಯಾರ್ಯದರ್ಶಿಯವರು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರು ನಾಳೆ ( ದಿನಾಂಕ:24-9-2026 ರಂದು) ಚಿತ್ರದುರ್ಗ ತಾಲ್ಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳ ನಿಮಿತ್ತ ಭೇಟಿ ನೀಡಲಿರುವುದರಿಂದ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಯಪಡಿಸಲಾಗಿದೆ.
1) ತಮ್ಮ ತಮ್ಮ ಗೋದಾಮುಗಳ ಮುಂಭಾಗದಲ್ಲಿ ಮತ್ತು ಚರಂಡಿಗಳಲ್ಲಿರುವ ಕಸ-ಕಡ್ಡಿಗಳನ್ನು ಈ ದಿನವೇ ಸ್ವಚ್ಚಗೊಳಿಸಿಕೊಳ್ಳಲು ತಿಳಿಯಪಡಿಸಲಾಗಿದೆ.
2) ತಾವು ಹೊಂದಿರುವ ಎಲೆಕ್ಟ್ರಾನಿಕ್ ತೂಕದ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು, ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮಾಡಿಸಿಕೊಂಡು ರೈತರ ಹುಟ್ಟುವಳಿಗಳ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಕಾರ್ಯನಿರ್ವಹಿಸಲು ತಿಳಿಯಪಡಿಸಲಾಗಿದೆ.
3) ತಮ್ಮ ಅಂಗಡಿಯ ಕೆಲಸ ಕಾರ್ಯಗಳಿಗೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳಬಾರದಾಗಿ ಸೂಚಿಸಿದೆ.
ಈ ಬಗ್ಗೆ ನ್ಯೂನ್ಯತೆಗಳು ಕಂಡುಬಂದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.











