Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಂದೇ ಮಾತರಂ ಗೀತೆ ಪೂರ್ಣ ಹಾಡುವುದು ಕಡ್ಡಾಯವಲ್ಲ, ಹಾಡದವರನ್ನು ಶಿಕ್ಷಿಸುವಂತಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

---Advertisement---

ನವದೆಹಲಿ: ಧಾರ್ಮಿಕ ನಂಬಿಕೆ ಅಥವಾ ಮನಃಸಾಕ್ಷಿಯ ಕಾರಣದಿಂದ ‘ವಂದೇ ಮಾತರಂ’ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸುವ ವ್ಯಕ್ತಿಗಳನ್ನು ಅಪರಾಧಿಗಳನ್ನಾಗಿ ಮಾಡಿ ಶಿಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಷ್ಟ್ರಗೀತೆಯ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂಬ ಕೇಂದ್ರ ಸರ್ಕಾರದ ನಿಯಮವನ್ನು ಪ್ರಶ್ನಿಸಿ ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ. ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಾತುಗಳನ್ನು ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ 1986ರ ಪ್ರಸಿದ್ಧ ಬಿಜೋಯ್ ಇಮ್ಯಾನುಯೆಲ್ ಪ್ರಕರಣದ ತೀರ್ಪನ್ನು ನ್ಯಾಯಪೀಠ ಉಲ್ಲೇಖಿಸಿತು. ಆ ಪ್ರಕರಣದಲ್ಲಿ, ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದ ಯೆಹೋವನ ಸಾಕ್ಷಿಗಳು (ಜೆಹೋವಾಸ್ ವಿಟ್ನೆಸಸ್) ಪಂಗಡದ ಶಾಲಾ ಮಕ್ಕಳ ಹಕ್ಕನ್ನು ನ್ಯಾಯಾಲಯ ಎತ್ತಿಹಿಡಿದಿತ್ತು. ರಾಷ್ಟ್ರೀಯ ಗೌರವಕ್ಕೆ ಯಾವುದೇ ಅಗೌರವ ತೋರದೇ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರದೇ ಇದ್ದರೆ, ತಮ್ಮ ಧಾರ್ಮಿಕ ನಂಬಿಕೆಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಭಾಗವಹಿಸದಿರಲು ವ್ಯಕ್ತಿಗಳಿಗೆ ಹಕ್ಕಿದೆ ಎಂದು ನ್ಯಾಯಾಲಯ ಈ ಹಿಂದೆಯೇ ಸ್ಪಷ್ಟಪಡಿಸಿದೆ ಎಂಬುದನ್ನು ಪೀಠ ನೆನಪಿಸಿತು.

ರಾಷ್ಟ್ರಗೀತೆ ಯಾವುದು ಹಾಗೂ ಅದರಲ್ಲಿ ಎಷ್ಟು ಚರಣಗಳಿರಬೇಕು ಎಂದು ತೀರ್ಮಾನಿಸುವುದು ಪ್ರಜಾಸತ್ತಾತ್ಮಕ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ಆದರೆ, ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಭಾವಿಸುವ ಅಥವಾ ಮನಃಸಾಕ್ಷಿಯ ಆಧಾರದ ಮೇಲೆ ಹಾಡಲು ಒಪ್ಪದ ವ್ಯಕ್ತಿಯ ಮೇಲೆ ಕ್ರಿಮಿನಲ್ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಮೂರ್ತಿ ಬಾಗ್ಚಿ ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಗೆ ಇತ್ತೀಚೆಗೆ ತರಲಾದ ತಿದ್ದುಪಡಿಯನ್ನು ಪ್ರಶ್ನಿಸಿ ಟಿ. ಎಂ. ಕೃಷ್ಣ ಅರ್ಜಿ ಸಲ್ಲಿಸಿದ್ದಾರೆ. ಈ ತಿದ್ದುಪಡಿಯು ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಸ್ಥಾನಮಾನ ನೀಡಿದ್ದು, ಹಿಂದೂ ದೇವತೆಗಳ ಹೆಸರುಗಳನ್ನು ಒಳಗೊಂಡಿರುವ ಆರು ಚರಣಗಳನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಹಾಡಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಈ ಕಾಯ್ದೆಯಲ್ಲಿರುವ ಶಿಕ್ಷಾರ್ಹ ನಿಯಮಗಳನ್ನು ಪರಿಶೀಲಿಸುವುದಾಗಿ ನ್ಯಾಯಪೀಠ ತಿಳಿಸಿದೆ.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲ ಎಸ್. ಮುರಳೀಧರ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಡುವೆ ತೀವ್ರ ವಾಗ್ವಾದ ನಡೆಯಿತು. ಮೆಹ್ತಾ ಅವರು ವಾದ ಮಂಡಿಸುತ್ತಾ ‘ನಕ್ಸಲೈಟ್’ ಎಂಬ ಪದವನ್ನು ಬಳಸಿದ್ದಕ್ಕೆ ಮುರಳೀಧರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಆ ಪದವನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿಗಳು, ಸಂವಿಧಾನದ ಕಾನೂನು ವ್ಯಾಖ್ಯಾನಕ್ಕೆ ಮಾತ್ರ ನಮ್ಮ ವಾದವನ್ನು ಸೀಮಿತಗೊಳಿಸೋಣ ಎಂದು ಇಬ್ಬರನ್ನೂ ಸಮಾಧಾನಪಡಿಸಿದರು.

ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಬಾಗ್ಚಿ ಅವರು, ಸಂವಿಧಾನಬದ್ಧ ಸಂಸ್ಥೆಗಳ ಮಹತ್ವವನ್ನು ವಿವರಿಸಿ, ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ವ್ಯಕ್ತಿಗೂ ಸಂವಿಧಾನದಡಿ ಸಮಾನ ಹಕ್ಕುಗಳಿರುತ್ತವೆ ಮತ್ತು ಸಾರ್ವಜನಿಕವಾಗಿ ಗುಂಡು ಹಾರಿಸಿದವರಿಗೂ ನ್ಯಾಯಯುತ ವಿಚಾರಣೆಯ ಅವಕಾಶ ನೀಡಲಾಗಿದೆ; ಇದೇ ಕಾರಣಕ್ಕಾಗಿ ಸಾಂವಿಧಾನಿಕ ನ್ಯಾಯಾಲಯಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟರು.

Join WhatsApp

Join Now

Join Telegram

Join Now