ನವದೆಹಲಿ: ದೇಶದಲ್ಲಿ ಸೈಬರ್ ಅಪರಾಧಗಳು ಹಾಗೂ ಸಿಮ್ ಕಾರ್ಡ್ಗಳ ದುರುಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಇತರರ ಗುರುತಿನ ದಾಖಲೆಗಳನ್ನು ಅನುಮತಿ ಇಲ್ಲದೆ ಬಳಸಿ ಸಿಮ್ ಪಡೆಯುವುದು ಅಥವಾ ನೀಡುವುದು, ಟೆಲಿಕಾಂ ಗುರುತುಗಳ ದುರುಪಯೋಗ ಹಾಗೂ IMEI ಸಂಖ್ಯೆಯಲ್ಲಿ ಅಕ್ರಮವಾಗಿ ಬದಲಾವಣೆ ಮಾಡುವುದು ಗಂಭೀರ ಅಪರಾಧ ಎಂದು ದೂರಸಂಪರ್ಕ ಇಲಾಖೆ (DoT) ತಿಳಿಸಿದೆ.
ಇಂತಹ ಕೃತ್ಯಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಪ್ರದೇಶಗಳಲ್ಲಿ ನಡೆದ ಸೈಬರ್ ಅಪರಾಧಗಳ ತನಿಖೆ ವೇಳೆ ಸಿಮ್ ಕಾರ್ಡ್ಗಳ ಅಕ್ರಮ ಬಳಕೆಯ ಪ್ರಕರಣಗಳು ಪತ್ತೆಯಾಗಿವೆ. ಛತ್ತೀಸ್ಗಢದಲ್ಲಿ ಓರ್ವ ಪಾಯಿಂಟ್ ಆಫ್ ಸೇಲ್ (PoS) ಏಜೆಂಟ್, ಸಂಬಂಧಪಟ್ಟ ನಾಗರಿಕರಿಗೆ ತಿಳಿಯದಂತೆ ಅವರ ಗುರುತಿನ ದಾಖಲೆಗಳನ್ನು ಬಳಸಿಕೊಂಡು 25 ಮೊಬೈಲ್ ಸಂಪರ್ಕಗಳನ್ನು ಸಕ್ರಿಯಗೊಳಿಸಿದ್ದಾನೆ ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ದೂರಸಂಪರ್ಕ ಇಲಾಖೆ ಸಂಬಂಧಿತ ಏಜೆಂಟ್ ವಿರುದ್ಧ ಕ್ರಮ ಕೈಗೊಂಡಿದ್ದು, ಆತನನ್ನು ಬ್ಲ್ಯಾಕ್ಲಿಸ್ಟ್ಗೆ ಸೇರಿಸಿ ಟೆಲಿಕಾಂ ಸೇವೆಗಳನ್ನು ಸ್ಥಗಿತಗೊಳಿಸಿದೆ. ಅಕ್ರಮವಾಗಿ ಸಕ್ರಿಯಗೊಳಿಸಲಾಗಿದ್ದ 25 ಮೊಬೈಲ್ ಸಂಖ್ಯೆಗಳನ್ನೂ ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್ ಮೂಲಕ ಪರಿಶೀಲನೆಗೆ ಒಳಪಡಿಸಲಾಗಿದೆ. ಪರಿಶೀಲನೆಯಲ್ಲಿ ವಿಫಲವಾದ ಸಂಖ್ಯೆಗಳ ಸೇವೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ಗಳಿವೆ? ಹೀಗೆ ಪರಿಶೀಲಿಸಿ
ನಿಮ್ಮ ಗುರುತಿನ ದಾಖಲೆ ಬಳಸಿ ಎಷ್ಟು ಮೊಬೈಲ್ ಸಂಖ್ಯೆಗಳು ಸಕ್ರಿಯವಾಗಿವೆ ಎಂಬುದನ್ನು ತಿಳಿದುಕೊಳ್ಳಲು ಕೇಂದ್ರ ಸರ್ಕಾರದ ‘ಸಂಚಾರ್ ಸಾಥಿ’ (Sanchar Saathi) ಪೋರ್ಟಲ್ ಅಥವಾ ಆ್ಯಪ್ ಬಳಸಬಹುದು.ನಿಮಗೆ ತಿಳಿಯದ ಅಥವಾ ನೀವು ಬಳಸದೇ ಇರುವ ಮೊಬೈಲ್ ಸಂಖ್ಯೆ ನಿಮ್ಮ ಹೆಸರಿನಲ್ಲಿ ಸಕ್ರಿಯವಾಗಿರುವುದು ಕಂಡುಬಂದರೆ, ಅದನ್ನು ಪೋರ್ಟಲ್ ಮೂಲಕ ವರದಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಬಹುದು.
ಸೈಬರ್ ವಂಚನೆ ಹಾಗೂ ಇತರ ಅಕ್ರಮ ಚಟುವಟಿಕೆಗಳಲ್ಲಿ ಸಿಮ್ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಸಕ್ರಿಯವಾಗಿರುವ ಮೊಬೈಲ್ ಸಂಪರ್ಕಗಳನ್ನು ನಿಯಮಿತವಾಗಿ ಪರಿಶೀಲಿಸುವಂತೆ DoT ಸೂಚಿಸಿದೆ.ಅದೇ ರೀತಿ, ಆಧಾರ್ ಸೇರಿದಂತೆ ವೈಯಕ್ತಿಕ ಗುರುತಿನ ದಾಖಲೆಗಳನ್ನು ಅನಗತ್ಯವಾಗಿ ಇತರರೊಂದಿಗೆ ಹಂಚಿಕೊಳ್ಳದಂತೆ ಹಾಗೂ ಸಿಮ್ ಪಡೆಯುವಾಗ ದಾಖಲೆಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಲಾಖೆ ಸಲಹೆ ನೀಡಿದೆ.










