ಬೇಸಿಗೆ ಮತ್ತು ಮಳೆಗಾಲ ಬಂತೆಂದರೆ ಸಾಕು, ಮನೆಯ ಗೋಡೆಗಳು, ಅಡುಗೆ ಕೋಣೆ ಹಾಗೂ ಬಾತ್‌ರೂಮ್‌ಗಳಲ್ಲಿ ಹಲ್ಲಿಗಳ ಉಪಟಳ ಹೆಚ್ಚಾಗುತ್ತದೆ. ಕೆಲವರಿಗಂತೂ ಹಲ್ಲಿ ಕಂಡರೆ ಸಾಕು, ಭಯದಿಂದ ಬೆಚ್ಚಿಬೀಳುತ್ತಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯ ರಾಸಾಯನಿಕಗಳ ಬದಲು, ಅಡುಗೆ ಮನೆಯಲ್ಲೇ ಇರುವ ಕೆಲ ಸರಳ ಪದಾರ್ಥಗಳನ್ನು ಬಳಸಿ ಹಲ್ಲಿಗಳನ್ನು ಸುಲಭವಾಗಿ ಓಡಿಸಬಹುದು.
ಮೊಟ್ಟೆಯ ಸಿಪ್ಪೆಯ ಮ್ಯಾಜಿಕ್
ಹಲ್ಲಿಗಳನ್ನು ಓಡಿಸಲು ಮೊಟ್ಟೆಯ ಸಿಪ್ಪೆ ಅತ್ಯಂತ ಪರಿಣಾಮಕಾರಿ. ಮೊಟ್ಟೆಯ ವಾಸನೆ ಮತ್ತು ಅದರ ನೋಟ ಹಲ್ಲಿಗಳಿಗೆ ಬೇರೆ ಯಾವುದೋ ದೊಡ್ಡ ಜೀವಿ ಇದೆ ಎಂಬ ಭ್ರಮೆ ಹುಟ್ಟಿಸಿ ಭಯಪಡಿಸುತ್ತದೆ. ಇದಕ್ಕಾಗಿ ಮೊಟ್ಟೆಯ ಸಿಪ್ಪೆಯನ್ನು ತೊಳೆದು ಒಣಗಿಸಿ, ಸಣ್ಣ ತುಂಡುಗಳನ್ನಾಗಿ ಮಾಡಿ ಕಿಟಕಿ, ಬಾಗಿಲು, ಅಲ್ಮೇರಾ ಹಿಂಭಾಗ ಹಾಗೂ ಅಡುಗೆ ಕೋಣೆಯ ಮೂಲೆಗಳಲ್ಲಿ ಇಡಿ. ಪ್ರತಿ 3-4 ದಿನಗಳಿಗೊಮ್ಮೆ ಇವುಗಳನ್ನು ಬದಲಾಯಿಸುತ್ತಿರಿ.

ಈರುಳ್ಳಿ ಮತ್ತು ಬೆಳ್ಳುಳ್ಳಿಯ ತೀಕ್ಷ್ಣ ವಾಸನೆ
ಹಲ್ಲಿಗಳಿಗೆ ಘಾಟು ವಾಸನೆ ಕಿಂಚಿತ್ತೂ ಇಷ್ಟವಾಗುವುದಿಲ್ಲ. ಈರುಳ್ಳಿ ತುಂಡುಗಳು ಅಥವಾ ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಹಲ್ಲಿಗಳು ಓಡಾಡುವ ಜಾಗಗಳಾದ ಕಿಟಕಿ ಬಳಿ, ಗ್ಯಾಸ್ ಸ್ಟವ್ ಹಿಂಭಾಗ ಅಥವಾ ಸಿಂಕ್ ಕೆಳಗೆ ಇರಿಸಿ. ಪರ್ಯಾಯವಾಗಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯ ರಸವನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಗೆ ತುಂಬಿಸಿ, ಮೂಲೆ ಮೂಲೆಗಳಿಗೆ ಸಿಂಪಡಿಸಿದರೆ ತೀಕ್ಷ್ಣ ವಾಸನೆಗೆ ಹಲ್ಲಿಗಳು ಜಾಗ ಖಾಲಿ ಮಾಡುತ್ತವೆ.
ಕಾಳುಮೆಣಸಿನ ಸ್ಪ್ರೇ
ಕಾಳುಮೆಣಸಿನ ಪುಡಿ ಹಲ್ಲಿಗಳನ್ನು ಕ್ಷಣಾರ್ಧದಲ್ಲಿ ಓಡಿಸಲು ನೆರವಾಗುತ್ತದೆ. ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ತೆಗೆದುಕೊಂಡು, ಅದಕ್ಕೆ 1-2 ಚಮಚ ಕಾಳುಮೆಣಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಕುಲುಕಿ. ಹಲ್ಲಿಗಳು ಅಡಗಿರುವ ಜಾಗಗಳಿಗೆ ಈ ಮಿಶ್ರಣವನ್ನು ಸಿಂಪಡಿಸಿ. ಇದರ ಖಾರಕ್ಕೆ ಹಲ್ಲಿಗಳು ತಡೆಯಲಾರದೆ ಮನೆಯಿಂದ ಹೊರಗೋಡುತ್ತವೆ.
ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆ
ಕೀಟಗಳು, ಸೊಳ್ಳೆಗಳು ಹೆಚ್ಚಿದ್ದರೆ ಅವುಗಳನ್ನು ತಿನ್ನಲು ಹಲ್ಲಿಗಳು ಮನೆಗೆ ಬರುತ್ತವೆ. ಹೀಗಾಗಿ ಮನೆಯಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ:
ಅಡುಗೆ ಕೋಣೆಯಲ್ಲಿ ಆಹಾರ ಪದಾರ್ಥಗಳನ್ನು ಸದಾ ಮುಚ್ಚಿಡಿ ಮತ್ತು ರಾತ್ರಿ ವೇಳೆ ಎಂಜಲು ಪಾತ್ರೆಗಳನ್ನು ಹಾಗೆಯೇ ಬಿಡಬೇಡಿ.
ಗೋಡೆಗಳ ಬಿರುಕುಗಳು, ಪೈಪ್‌ಗಳ ಸಂದಿಗಳನ್ನು ಮುಚ್ಚಿ.
ಕಿಟಕಿಗಳಿಗೆ ಸೊಳ್ಳೆ ಪರದೆ (ನೆಟ್) ಅಳವಡಿಸಿ.

ಮನೆಯ ಮೂಲೆಗಳಲ್ಲಿ ಕರ್ಪೂರದ ಬಿಲ್ಲೆಗಳನ್ನು ಇಡುವುದರಿಂದಲೂ ಹಲ್ಲಿಗಳ ಉಪಟಳ ತಪ್ಪಿಸಬಹುದು.












