ದೆಹಲಿ.ಸೆಪ್ಟೆಂಬರ್.20: ಯುಪಿಐ (UPI) ಬಳಕೆದಾರರಿಗೆ ಪ್ರಮುಖ ಬದಲಾವಣೆಯೊಂದು ಎದುರಾಗುತ್ತಿದೆ. ಪೇಮೆಂಟ್ ಆ್ಯಂಡ್ ಸೆಟಲ್‌ಮೆಂಟ್ ಸಿಸ್ಟಮ್ಸ್ ಆಕ್ಟ್, 2007ರ ಸೆಕ್ಷನ್ 10A ತಿದ್ದುಪಡಿಯ ನಂತರ UPI ಮತ್ತು RuPay ಮೇಲಿದ್ದ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ನಿಷೇಧವನ್ನು ಹಿಂಪಡೆಯಲಾಗಿದೆ. ಪರಿಣಾಮವಾಗಿ, ಅಕ್ಟೋಬರ್ 15, 2026 ರಿಂದ ಆಯ್ದ ವ್ಯಾಪಾರ ವಹಿವಾಟುಗಳಿಗೆ ಹೊಸ MDR ಶುಲ್ಕ ಜಾರಿಗೆ ಬರಲಿದೆ.
ಯಾವ ವಹಿವಾಟಿಗೆ ಎಷ್ಟು ಶುಲ್ಕ?
ವ್ಯಕ್ತಿಯಿಂದ ವ್ಯಕ್ತಿಗೆ (P2P): ಕುಟುಂಬ ಅಥವಾ ಸ್ನೇಹಿತರಿಗೆ ಹಣ ಕಳುಹಿಸಿದರೆ (2,000 ರೂ. ದಾಟಿದರೂ) ಯಾವುದೇ ಶುಲ್ಕವಿಲ್ಲ.

ವ್ಯಾಪಾರಿಗಳಿಗೆ ಪಾವತಿ (P2M): 2,000 ರೂ.ವರೆಗಿನ ವಹಿವಾಟು ಸಂಪೂರ್ಣ ಉಚಿತ. ಆದರೆ, 2,000 ರೂ. ದಾಟಿದರೆ ಶೇ. 0.4 ರಷ್ಟು ಶುಲ್ಕ ಅನ್ವಯವಾಗಲಿದೆ. ಉದಾಹರಣೆಗೆ, 3,000 ರೂ. ವಹಿವಾಟಿಗೆ 12 ರೂ. ಕಟ್ ಆಗಲಿದೆ. ಈ ಶುಲ್ಕದ ಗರಿಷ್ಠ ಮಿತಿ 300 ರೂ. (ಅಂದರೆ 75,000 ರೂ.ಗಿಂತ ಹೆಚ್ಚಿನ ಪಾವತಿಗೂ 300 ರೂ. ಮಾತ್ರ).
ಸಣ್ಣ ವ್ಯಾಪಾರಿಗಳು (P2PM): ಬೀದಿಬದಿ ವ್ಯಾಪಾರಿಗಳು, ಚಹಾ ಅಂಗಡಿ, ದಿನಸಿ ಅಂಗಡಿಗಳಿಗೆ ಮಾಡುವ ಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ.
ಯುಟಿಲಿಟಿ ಬಿಲ್, ಮನೆ ಬಾಡಿಗೆ ಹಾಗೂ ಆಟೋ-ಪೇ ನಿಯಮಗಳು
ಫ್ಲ್ಯಾಟ್ 5 ರೂ. ಶುಲ್ಕ: ರೈಲ್ವೆ ಟಿಕೆಟ್, ಇಂಧನ (ಪೆಟ್ರೋಲ್-ಡೀಸೆಲ್), ಶಾಲಾ-ಕಾಲೇಜು ಶುಲ್ಕ, ವಿದ್ಯುತ್ ಬಿಲ್ ಅಥವಾ ಮನೆ ಬಾಡಿಗೆಯನ್ನು UPI ಮೂಲಕ ಪಾವತಿಸುವಾಗ ಮೊತ್ತ 2,000 ರೂ. ದಾಟಿದರೆ ಕೇವಲ 5 ರೂ. ಫ್ಲ್ಯಾಟ್ MDR ಶುಲ್ಕ ಕಡಿತವಾಗಲಿದೆ.
ಆಟೋ-ಪೇ ಮತ್ತು ಆನ್‌ಲೈನ್ ಶಾಪಿಂಗ್: ಆಟೋ-ಪೇ (Auto-pay mandate) ಸಕ್ರಿಯವಾಗಿದ್ದರೆ ಹಾಗೂ ಅಮೆಜಾನ್, ಫ್ಲಿಪ್‌ಕಾರ್ಟ್ ಡೆಲಿವರಿ ವೇಳೆ ಹಣ ಪಾವತಿಸಿದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ.
ಕ್ಯಾಪಿಟಲ್ ಮಾರ್ಕೆಟ್: ಮ್ಯೂಚುಯಲ್ ಫಂಡ್, ಸ್ಟಾಕ್ ಬ್ರೋಕರ್ ಅಥವಾ ಷೇರು ಮಾರುಕಟ್ಟೆ ವಹಿವಾಟುಗಳಿಗೆ ಶೇ. 0.02 ರಷ್ಟು ಶುಲ್ಕವಿರಲಿದ್ದು, ಗರಿಷ್ಠ ಮಿತಿ 300 ರೂ. ಇರಲಿದೆ.
MDR ಆದಾಯದ ಲೆಕ್ಕಾಚಾರ ಮತ್ತು ಹಂಚಿಕೆ
ಕೇರ್‌ಎಡ್ಜ್ ರೇಟಿಂಗ್ಸ್ (CareEdge Ratings) ವರದಿ ಪ್ರಕಾರ, ಒಟ್ಟು UPI ವಹಿವಾಟುಗಳಲ್ಲಿ ಶೇ. 29 ರಷ್ಟು P2M ವಹಿವಾಟುಗಳಾಗಿವೆ. 2025-26ರ ಅವಧಿಯಲ್ಲಿ MDR ವ್ಯಾಪ್ತಿಗೆ ಬರುವ ವಹಿವಾಟುಗಳ ಮೌಲ್ಯ ಸುಮಾರು 61.13 ಲಕ್ಷ ಕೋಟಿ ರೂ.ಗಳಾಗಿದ್ದು, ಶೇ. 0.4 ರ ದರದಲ್ಲಿ ಸುಮಾರು 24,452 ಕೋಟಿ ರೂ. ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ.
UPI ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಬ್ಯಾಂಕ್‌ಗಳು, ಥರ್ಡ್ ಪಾರ್ಟಿ ಸಂಸ್ಥೆಗಳು ಹಾಗೂ UPI ಆ್ಯಪ್‌ಗಳಿಗೆ ವಾರ್ಷಿಕ ಸುಮಾರು 20,000 ಕೋಟಿ ರೂ. ವೆಚ್ಚವಾಗುತ್ತಿದ್ದು, ವಾರ್ಷಿಕ 5,000 ದಿಂದ 6,000 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿದ್ದವು. ಸಂಗ್ರಹವಾಗುವ MDR ಆದಾಯದಲ್ಲಿ ಶೇ. 40 ರಷ್ಟು ಮೊತ್ತ ಹಣ ಕಳುಹಿಸಿದ ಬ್ಯಾಂಕ್‌ಗೆ (Issuing Bank) ಹಾಗೂ ಶೇ. 30 ರಷ್ಟು ಹಣ ಸ್ವೀಕರಿಸಿದ ಬ್ಯಾಂಕ್‌ಗೆ (Acquiring Bank) ಹಂಚಿಕೆಯಾಗುವ ಸಾಧ್ಯತೆಯಿದೆ.
ಮಾರುಕಟ್ಟೆಯ ಪಾಲಿನ ಆಧಾರದ ಮೇಲೆ, ಈ ಹೊಸ ಶುಲ್ಕ ವ್ಯವಸ್ಥೆಯಿಂದ ಫೋನ್‌ಪೇ (PhonePe) ಸಂಸ್ಥೆಗೆ ವಾರ್ಷಿಕ ಸುಮಾರು 700 ಕೋಟಿ ರೂ. ಹಾಗೂ ಗೂಗಲ್ ಪೇಗೆ (Google Pay) ಸುಮಾರು 500 ಕೋಟಿ ರೂ. ಆದಾಯ ಹರಿದುಬರುವ ಅಂದಾಜಿದೆ.













