ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ನಗರದಲ್ಲಿ ಸಾರ್ವಜನಿಕರ, ವಿಶೇಷವಾಗಿ ಮಹಿಳೆಯರ ಚಿನ್ನದ ಸರ ಕಳವು (ಚೈನ್ ಸ್ನ್ಯಾಚಿಂಗ್) ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರದುರ್ಗ ನಗರ ಪೊಲೀಸ್ ಠಾಣೆ ವತಿಯಿಂದ ವ್ಯಾಪಕ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಪ್ರಕಟಣೆ ಹೊರಡಿಸಲಾಗಿದೆ.
ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಅಪರಾಧ ನಿಯಂತ್ರಣಕ್ಕೆ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಪ್ರಮುಖ ಮುನ್ನೆಚ್ಚರಿಕೆಗಳು :

* ನಿರ್ಜನ ಪ್ರದೇಶಗಳಲ್ಲಿ ಅಥವಾ ರಾತ್ರಿ ವೇಳೆ ಓಡಾಡುವಾಗ ಹೆಚ್ಚು ಎಚ್ಚರದಿಂದಿರಿ.
* ದೇವಸ್ಥಾನ, ಮಾರುಕಟ್ಟೆ ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಹೋಗುವಾಗ ಅತಿಯಾದ ಚಿನ್ನದ ಆಭರಣಗಳನ್ನು ಧರಿಸುವುದನ್ನು ಕಡಿಮೆ ಮಾಡಿ ಅಥವಾ ಬಟ್ಟೆಯಿಂದ ಮುಚ್ಚಿಕೊಳ್ಳಿ.
* ಅನುಮಾನಾಸ್ಪದವಾಗಿ ಬೈಕ್ನಲ್ಲಿ ಓಡಾಡುವ ಅಥವಾ ಹೆಲ್ಮೆಟ್ ಧರಿಸಿ ನಿರಂತರವಾಗಿ ಹಿಂಬಾಲಿಸುವ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ.
* ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಮಹಿಳೆಯರು ಆಭರಣಗಳು ಸ್ಪಷ್ಟವಾಗಿ ಕಾಣದಂತೆ ಮುನ್ನೆಚ್ಚರಿಕೆ ವಹಿಸಿ.
ಅಪರಾಧ ನಡೆದರೆ ತಕ್ಷಣ ಏನು ಮಾಡಬೇಕು?
ಗಾಬರಿಗೊಳ್ಳದೆ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಅಥವಾ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ಕೂಡಲೇ ಮಾಹಿತಿ ನೀಡಿ. ಕಳುವಾದ ಸರದ ತೂಕ, ವಾಹನದ ನಂಬರ್, ಬಣ್ಣ ಹಾಗೂ ಮುಖಚಹರೆಯ ಬಗ್ಗೆ ನಿಖರವಾದ ಮಾಹಿತಿ ನೀಡಿ.
ತುರ್ತು ಸಂದರ್ಭದಲ್ಲಿ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ. ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಅಪರಿಚಿತರ ಬಗ್ಗೆ ಎಚ್ಚರವಿರಲಿ, ಪೊಲೀಸರೊಂದಿಗೆ ಸಹಕರಿಸಿ ಸುರಕ್ಷಿತವಾಗಿರಿ ಎಂದು ನಗರ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












