ದಾವಣಗೆರೆ.ಸೆಪ್ಟೆಂಬರ್. 20: ಸಾರ್ವಜನಿಕರ ದೂರು ಹಾಗೂ ಮನವಿಗಳನ್ನು ಕೇವಲ ಕಾಗದಪತ್ರಗಳಿಗೆ ಸೀಮಿತಗೊಳಿಸದೆ, ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ ಪರಿಹಾರ ಕಂಡುಕೊಳ್ಳುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ದಾವಣಗೆರೆ ತಾಲೂಕಿನ ಜರಿಕಟ್ಟೆ ಗ್ರಾಮದಲ್ಲಿ ‘ಪ್ರಜಾ ಸೇವೆ’ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಜಾ ಸೇವೆಯ ಪ್ರಮುಖ ಉದ್ದೇಶವೇ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವುದು. ‘ಪ್ರಜಾ ಸ್ಪಂದನ’ ಕಾರ್ಯಕ್ರಮದ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಕಾಗದದಲ್ಲಿ ನೀಡುವ ಮನವಿಗಳು ಕಳೆದುಹೋಗುವ ಸಾಧ್ಯತೆ ಇರುವುದರಿಂದ, ಪ್ರತಿಯೊಂದು ಅರ್ಜಿಯನ್ನು ತಕ್ಷಣವೇ ಆನ್ಲೈನ್ನಲ್ಲಿ ದಾಖಲಿಸಿ ಅರ್ಜಿದಾರರಿಗೆ ರಸೀದಿ ನೀಡಬೇಕು. ಇದರಿಂದ ಪ್ರತಿಯೊಂದು ದೂರಿನ ಪ್ರಗತಿಯನ್ನು ಲ್ಯಾಪ್ಟಾಪ್ ಮೂಲಕ ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಸ್ತೆ ಗುಂಡಿ ಮುಚ್ಚುವುದು, ಜಂಗಲ್ ಕ್ಲೀನಿಂಗ್ ಮುಂತಾದ ಸಣ್ಣಪುಟ್ಟ ಮೂಲಸೌಕರ್ಯ ಕಾಮಗಾರಿಗಳಿಗೆ ಅನುದಾನ ಇಲ್ಲ’ ಎಂಬ ನೆಪ ಹೇಳದೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಜೆಸಿಬಿ ಮತ್ತು ಅಗತ್ಯ ಕೆಲಸಗಾರರನ್ನು ಬಳಸಿಕೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸ್ಥಳೀಯ ಮಹಿಳೆಯರು ಹಾಗೂ ಉದ್ಯಮಿಗಳು ತಯಾರಿಸಿದ ಉಪ್ಪಿನಕಾಯಿ, ರೊಟ್ಟಿ, ಬಟ್ಟೆ ಹಾಗೂ ಗಾಣದ ಎಣ್ಣೆಯಂತಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸಿದರು.
ಪ್ರಜಾ ಸೇವೆ ಕಾರ್ಯಕ್ರಮವು ದಾವಣಗೆರೆ ದಕ್ಷಿಣ ವ್ಯಾಪ್ತಿಯ ಎಂಟು ಗ್ರಾಮ ಪಂಚಾಯಿತಿಗಳಲ್ಲಿ ಹಂತ-ಹಂತವಾಗಿ ಪ್ರತಿ ಶನಿವಾರ ಮುಂದುವರಿಯಲಿದ್ದು, ಸಾರ್ವಜನಿಕರು ತಮ್ಮ ಮನೆ ಬಾಗಿಲಿಗೆ ಬಂದಿರುವ ಈ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.











