Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ಕಾರದ ವಿವಿಧ ಸೌಲಭ್ಯಗಳನ್ನು  ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಿಸಿ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

---Advertisement---

ದಾವಣಗೆರೆ, ಸೆಪ್ಟೆಂಬರ್.18 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನಾ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಿಸುವ  ಉದ್ದೇಶದಿಂದ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ತಿಳಿಸಿದರು.

ಅವರು ಗುರುವಾರ ಮಾಯಾಕೊಂಡ ಕ್ಷೇತ್ರದ ಹುಲಿಕಟ್ಟೆ ಮತ್ತು ಹೆಮ್ಮನಬೇತೂರು ಗ್ರಾಮಗಳಲ್ಲಿ  ಹಮ್ಮಿಕೊಳ್ಳಲಾಗಿದ್ದ ‘ಪ್ರಜಾ ಸ್ಪಂದನ’ ಕಾರ್ಯಕ್ರಮ  ಉದ್ಪಾಟಿಸಿ ಮಾತನಾಡಿದರು.

 ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ ವ್ಯವಸ್ಥೆ ಮತ್ತು ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ  ವಿದ್ಯುತ್ ಅಭಾವ, ಪಿಂಚಣಿ ವಿಳಂಬ, ಆಶ್ರಯ ಮನೆಗಳು, ಖಾತೆ ಬದಲಾವಣೆ ಹಾಗೂ ಇ-ಸ್ವತ್ತು ಸಮಸ್ಯೆಯ ಕುರಿತು ಅಧಿಕಾರಿಗಳು ಕ್ರಮವಹಿಸುವರು ಎಂದರು.

ಅಲಿಂಕೋ ಸಂಸ್ಥೆಯ ಸಹಯೋಗದೊಂದಿಗೆ ತ್ರಿಚಕ್ರ ವಾಹನ, ವ್ಹೀಲ್‌ಚೇರ್ ಸೇರಿದಂತೆ ಅಗತ್ಯ ಉಪಕರಣಗಳ ವಿತರಣೆ ಮತ್ತು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತೀವ್ರ ಅನಾರೋಗ್ಯ ಪೀಡಿತರಿಗೆ ಧನಸಹಾಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಸಣ್ಣ ಮಕ್ಕಳ ಆಧಾರ್ ವಿವರ ತಿದ್ದುಪಡಿಗೆ ಕೇಂದ್ರ ಮಟ್ಟದ ಪ್ರಕ್ರಿಯೆಗಳ ಅಗತ್ಯವಿದ್ದು, ಇಂತಹ ತೊಡಕುಗಳನ್ನು ರಾಜ್ಯ ಮಟ್ಟದಲ್ಲೇ ವಿಕೇಂದ್ರೀಕರಣಗೊಳಿಸಿ ಪರಿಹರಿಸುವ ಬಗ್ಗೆ ಚರ್ಚಿಸಲಾಗುವುದು , ಅಧಿಕಾರಿಗಳು ಸರ್ಕಾರದ ಯೋಜನೆಗಳ ಲೋಪದೋಷಗಳನ್ನು ಸರಿಪಡಿಸಿ, ನಿಗದಿಪಡಿಸಿದ ಕಾಲಮಿತಿಯೊಳಗೆ ಸಾರ್ವಜನಿಕರ ಅಹವಾಲುಗಳನ್ನು ಇತ್ಯರ್ಥಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಹುಲಿಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಅಂಗನವಾಡಿ ಕಟ್ಟಡ ದುರಸ್ತಿ ಹಾಗೂ ಪಶು ಆಸ್ಪತ್ರೆ ಸ್ಥಾಪನೆಯ ಅಗತ್ಯವಿದೆ ಈ ಕುರಿತು ನಾನು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯಕ್ರಮವಹಿಸಲಾಗುವುದು ಎಂದರು.

ಕಾರ್ಯನಿರ್ವಾಹಕ ಅಧಿಕಾರಿ ರಾಮಬೋವಿ, ಕಾರ್ಯನಿರ್ವಾಹಕ ಇಂಜಿನಿಯರ್ ಶಿವಮೂರ್ತಿ, ಶ್ರೀ ಕೃಷಿ ಇಲಾಖೆ ಸಹಾಯಕ ನಿರ್ದೇಶಕ  ಶ್ರೀಧರಮೂರ್ತಿ, ಎಡಿಎಲ್‌ಆರ್‌ ಕಸ್ತೂರಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ ಮತ್ತು ಗ್ರಾಮದ ಜನಪ್ರತಿನಿದಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ಯುವ ಸಂಸತ್ ಕಾರ್ಯಕ್ರಮ: ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಅಗತ್ಯ ಕ್ರಮವಹಿಸಿ : ನ್ಯಾ. ರಂಗೇಗೌಡ

ದಾವಣಗೆರೆ, ಸೆಪ್ಟೆಂಬರ್‌ 17 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ನ್ಯಾ. ರಂಗೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ “ಯುವ ಸಂಸತ್ತು” ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸುವ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮಗಳನ್ನು ಅಕ್ಟೋಬರ್ 5 ರಿಂದ 9 ರ ನಡುವೆ ಆಯೋಜಿಸಲು ತಹಶೀಲ್ದಾರುಗಳು ಕ್ರಮವಹಿಸಬೇಕು ಅಗತ್ಯವಿದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಗತ್ಯ ನೇರವು ನೀಡಲಿದೆ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಿಷಯ ಜ್ಞಾನ, ಸಂಸದೀಯ ನಡಾವಳಿಗಳು ಹಾಗೂ ಚರ್ಚಾ ವಿಧಾನಗಳ ಕುರಿತು ‘ಡಯಟ್’ ಮತ್ತು ಕಾನೂನು ಕಾಲೇಜುಗಳ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಿ ಸಿದ್ಧಗೊಳಿಸಲು ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌ ಅವರು ಮಾತನಾಡಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಸಂಸದೀಯ ವ್ಯವಸ್ಥೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಯುವ ಸಂಸತ್‌ಗೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

224 ಸಂಸದೀಯ ಸದಸ್ಯರ ಮಾದರಿಯಲ್ಲಿ ಅಥವಾ ಅಗತ್ಯಕ್ಕೆ ತಕ್ಕಂತೆ 112 ಸದಸ್ಯರ ಮಟ್ಟದಲ್ಲಿ ಯುವ ಸಂಸತ್ ನಡೆಸುವುದು ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಸೂಕ್ತ ಸಮುದಾಯ ಭವನ ಅಥವಾ ಸಭಾಂಗಣಗಳನ್ನು ಗುರುತಿಸಲು ತಹಸೀಲ್ದಾರರುಗಳು ಕ್ರಮವಹಿಸುವಂತೆ ಸೂಚಿಸಿದರು.

ಕರ್ನಾಟಕ ಸಂಸದೀಯ ವ್ಯವಹಾರಗಳ ಮತ್ತು ಸುಧಾರಣೆಗಳ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವ ‘ಮಾಕ್ ಪಾರ್ಲಿಮೆಂಟ್’ ಸ್ಪರ್ಧೆಯ ಪ್ರಕ್ರಿಯೆ ಹಾಗೂ ವಿದ್ಯಾರ್ಥಿಗಳ ಆಯ್ಕೆ ಕುರಿತು ಸಮಿತಿ ರಚಿಸಿ ಕ್ರಮವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಸಂಸದೀಯ ವ್ಯವಸ್ಥೆಯ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೈಸ್ಕೂಲ್, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೀಗೆ ನಾಲ್ಕು ಹಂತಗಳಲ್ಲಿ ಈ ಸ್ಪರ್ಧೆಯನ್ನು ಸಂಘಟಿಸಲಾಗುತ್ತಿದೆ ಎಂದರು.

ಬರಗಾಲ, ಪ್ರಜಾಪ್ರಭುತ್ವ , ಪರಿಸರ ಸಂರಕ್ಷಣೆ, ಶಿಕ್ಷಣ ಹಕ್ಕು, ಮಕ್ಕಳ ಹಕ್ಕುಗಳು, ಕುಡಿಯುವ ನೀರು, ಆಹಾರ  ಹಾಗೂ ವಿವಿಧ ತಿದ್ದುಪಡಿ ವಿಧೇಯಕಗಳ ಕುರಿತು ವಿದ್ಯಾರ್ಥಿಗಳು ಸಂಸದೀಯ ಶೈಲಿಯಲ್ಲಿ (ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ) ಚರ್ಚೆ ನಡೆಸಲು ಅಗತ್ಯ ತರಬೇತಿ ನೀಡಿ ಸಿದ್ಧಗೊಳಿಸಲು ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಹೆಣ್ಣು ಮಕ್ಕಳು  ಶೇ. 33 ರಷ್ಟು ಯುವ ಸಂಸತ್ತಿನಲ್ಲಿ ಭಾಗವಹಿಸುವಂತೆ ಕ್ರಮವಹಿಸಬೇಕು,  ದಾವಣಗೆರೆ ತಾಲೂಕಿನ ಮಟ್ಟದ ಸ್ಪರ್ಧೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಹಾಗೂ ಕಾನೂನು ಪದವಿ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಬೇಕು ಎಂದರು.

ಆಯ್ಕೆ ಪ್ರಕ್ರಿಯೆ ಹಾಗೂ ಜ್ಯೂರಿ ಸಮಿತಿ: ತಾಲೂಕು ಮಟ್ಟದಿಂದ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜ್ಯೂರಿ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ನ್ಯಾಯಾಧೀಶರು, ವಕೀಲರ ಸಂಘದ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಪ್ರಮುಖ ಅಧಿಕಾರಿಗಳು ಇರುತ್ತಾರೆ.

ಯುವಜನರಲ್ಲಿ ಸಂಸದೀಯ ಮೌಲ್ಯ ಹಾಗೂ ಪ್ರಜಾಸತ್ತಾತ್ಮಕ ಚಿಂತನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಯುವ ಸಂಸತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ರಮವಹಿಸುವಂತೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್‌, ಪದವಿಪೂರ್ವ ಉಪನಿರ್ದೇಶಕ ಪಳನಿಸ್ವಾಮಿ, ಡಯಟ್‌ ಪ್ರಾಂಶುಪಾಲರಾದ ಗೀತಾ ಹಾಗೂ ಇತರರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now