Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ದೊಡ್ಡಸಿದ್ದವ್ವನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಭೋವಿ ಮಠದ ವತಿಯಿಂದ ಸಿಹಿ ಹಂಚಿಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆ.18: ಭದ್ರಾ ನೀರು ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಜಿಲ್ಲೆಯ ಜನರಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂತಸ ಶಾಶ್ವತವಾಗಿ ಉಳಿಸಲು ಸರ್ಕಾರ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಒತ್ತಾಯಿಸಿದರು.

ಭೋವಿ ಗುರುಪೀಠದ ವತಿಯಿಂದ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ, ಮದಕರಿಪುರ ಗ್ರಾಮದ
ಸರ್ಕಾರಿ ಶಾಲೆಗಳಲ್ಲಿ ಗುರುವಾರ ಸಿಹಿ ವಿತರಿಸಿ ಮಾತನಾಡಿದರು.

ಹರಿಯುವ ನೀರು ಕಾಣುತ್ತಿದ್ದಂತೆ ನಾವೆಲ್ಲರೂ ಮೈಮರೆಯುವಂತಿಲ್ಲ. ಸಂಭ್ರಮದ ಜೊತೆಗೆ
ಮತ್ತೊಂದು ಹೋರಾಟಕ್ಕೆ ಸಿದ್ಧಗೊಳ್ಳಬೇಕಿದೆ. ಪಕ್ಕದೂರು, ತಾಲ್ಲೂಕುಗಳ ಕೆರೆಗಳು ಮೈದುಂಬುವವರೆಗೂ ಚಳವಳಿಯಿಂದ ವಿರಮಿಸುವಂತಿಲ್ಲ. ಇಡೀ ಜಿಲ್ಲೆ ಹಸಿರುಗೊಳ್ಳಬೇಕು. ಎಲ್ಲ ರೈತರ ಬದುಕು ಹಸನುಗೊಳ್ಳಬೇಕು. ಈ ನಿಟ್ಟಿನಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ಎರಡನೇ ಹಂತದ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಬಂಜಗೆರೆ ಜಯಪ್ರಕಾಶ್ ಹಾಗೂ ಪತ್ರಕರ್ತರು ನಿರಂತರ ನಡೆಸಿದ ಹೋರಾಟದ ಫಲ ಭದ್ರೆ ನೀರು ಜಿಲ್ಲೆಗೆ ಪ್ರವೇಶಿಸಿದೆ ಎಂದರು.

ಚಳವಳಿ ಆರಂಭಗೊಂಡ ದಿನದಲ್ಲಿ ಅಷ್ಟಾಗಿ ಜನಬೆಂಬಲ ದೊರೆಯದಿದ್ದರೂ ನಿರಂತರ ಹೋರಾಟದ ಹಾದಿಯಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಹೆಜ್ಜೆ ಹಾಕಿದ ಪರಿಣಾಮ ಅರ್ಧ ಯಶಸ್ಸು ಲಭಿಸಿದ್ದು, ಇನ್ನರ್ಧ ಗೆಲುವಿಗೆ ಬೃಹತ್ ಜನಾಂದೋಲನ ಅಗತ್ಯವೆಂದು ತಿಳಿಸಿದರು.

ಮುಖ್ಯವಾಗಿ ಭದ್ರೆಗೆ ರಾಷ್ಟ್ರೀಯ ಯೋಜನೆ ಮನ್ನಣೆ ದೊರಕಿಸಲು, ಕೇಂದ್ರ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆಗೆ ಹಾಗೂ ಕಾಲಕಾಲಕ್ಕೆ ರಾಜ್ಯ ಸರ್ಕಾರ ಅನುದಾನ ನೀಡುವಂತೆ ಒತ್ತಡ ತರಬೇಕಿದೆ ಎಂದರು.

ಗ್ರಾಮದ ಮುಖಂಡ ಯಶವಂತ್ ಕುಮಾರ್ ಮಾತನಾಡಿ, ಭದ್ರೆ ನೀರು ಜಿಲ್ಲೆಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಭೋವಿ ಮಠದ ಜಿಲ್ಲಾದ್ಯಂತ ಒಂದು ಲಕ್ಷ ಸಿಹಿ ವಿತರಣೆ ಕಾರ್ಯಕ್ರಮ
ಹಮ್ಮಿಕೊಂಡಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸುವಂತ ಕಾರ್ಯವಾಗಿದೆ ಎಂದು ಮೆಚ್ಚುಗೆ
ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಚಳವಳಿ ನಡೆಸುತ್ತಿದ್ದ ಸಂದರ್ಭ ಅಷ್ಟಾಗಿ ಪಾಲ್ಗೊಳ್ಳದ ನಾವುಗಳು, ಈಗ ಭದ್ರಾ ನೀರು ಹರಿಯುತ್ತಿದ್ದಂತೆ ಸಂಭ್ರಮಿಸುವ
ಜೊತೆಗೆ ಹೋರಾಟಗಾರರನ್ನು ಸ್ಮರಿಸುವ ಕೆಲಸವನ್ನಾದರೂ ಮಾಡಬೇಕಿದೆ ಎಂದರು.

ಭೋವಿ ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಮಾತನಾಡಿ, ಭದ್ರಾ ಹೋರಾಟ ಮುನ್ನಡೆಸಿದ ಪತ್ರಕರ್ತರಾದ ಚಳ್ಳಕೆರೆ ಬಸವರಾಜ್, ಜೋಗಿಮಟ್ಟಿ ಈ.ಮಹೇಶಬಾಬು, ನರೇನಹಳ್ಳಿ
ಅರುಣ್‌ಕುಮಾರ್, ದಗ್ಗೆ ಶಿವಪ್ರಕಾಶ್, ಚಿಕ್ಕಪ್ಪನಹಳ್ಳಿ ಷಣ್ಮುಖ, ಆರ್.ಶೇಷಣ್ಣಕುಮಾರ್, ದಿವಂಗತ ಜಿ.ಎಸ್.ಉಜ್ಜನಪ್ಪ, ಟಿ.ಶಿವಪ್ರಕಾಶ್, ಬಂಜಗೆರೆ
ವಿಶ್ವನಾಥ್ ಹಾಗೂ ಮಠಾಧೀಶರು, ರೈತರು, ಕಾರ್ಮಿಕರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಮಹಾಂತೇಶ್, ಶಿಕ್ಷಕರಾದ ಚಂದ್ರಪ್ಪ, ಚಿದಾನಂದ್, ಗಾಯತ್ರಿ, ಮೀನಾಕ್ಷಿ, ರಜೀಯಾ ಬೇಗಂ, ಕಲ್ಪನಾ, ಕೆ.ಪಿ.ಓಂಕಾರಮೂರ್ತಿ ಇತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now