ದೆಹಲಿ: ವೈದ್ಯರ ಪ್ರಿಸ್ಕ್ರಿಪ್ಷನ್ (ಚೀಟಿ) ಇಲ್ಲದೆ ಅಪಾಯಕಾರಿ ಹಾಗೂ ನಿರ್ಬಂಧಿತ ಔಷಧಗಳನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಹೆಜ್ಜೆಯಿಟ್ಟಿದೆ. ಇಂತಹ ಔಷಧಗಳನ್ನು ಮಾರಾಟ ಮಾಡುವ ಎಲ್ಲಾ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬ ಕರಡು ನಿಯಮವನ್ನು ಸಚಿವಾಲಯ ಪ್ರಸ್ತಾಪಿಸಿದೆ.
ಔಷಧ ನಿಯಮಗಳು 1945ಕ್ಕೆ ತಿದ್ದುಪಡಿ ತರುವ ಮೂಲಕ ಈ ನಿಯಮ ಜಾರಿಗೆ ತರಲು ಸಚಿವಾಲಯ ಮುಂದಾಗಿದೆ. ಮುಖ್ಯವಾಗಿ ಶೆಡ್ಯೂಲ್ ಎಚ್ (Schedule H), ಎಚ್1 (H1) ಮತ್ತು ಎಕ್ಸ್ (X) ವರ್ಗದ ಅಡಿಯಲ್ಲಿ ಬರುವ ಪ್ರಬಲ ಆಂಟಿಬಯೋಟಿಕ್ಸ್, ನಿದ್ರೆ ಮಾತ್ರೆಗಳು ಹಾಗೂ ಅರಿವಳಿಕೆ ಸಂಬಂಧಿತ ಔಷಧಿಗಳು ವೈದ್ಯರ ಅಧಿಕೃತ ಚೀಟಿ ಇಲ್ಲದೆ ಅನಧಿಕೃತವಾಗಿ ಗ್ರಾಹಕರ ಕೈಸೇರುವುದನ್ನು ತಡೆಯುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ.
ಈ ಪ್ರಸ್ತಾವನೆಯನ್ನು ಮೊದಲಿಗೆ ಔಷಧ ಸಮಾಲೋಚನಾ ಸಮಿತಿ (DCC) ಚರ್ಚಿಸಿದ್ದು, ನಂತರ ಔಷಧ ತಾಂತ್ರಿಕ ಸಲಹಾ ಮಂಡಳಿಯು (DTAB) ಪರಿಶೀಲಿಸಿ ಅನುಮೋದನೆಗೆ ಶಿಫಾರಸು ಮಾಡಿದೆ. ಔಷಧ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರಲು ಈ ಸಿಸಿಟಿವಿ ಕಣ್ಗಾವಲು ಹೆಚ್ಚುವರಿ ಸುರಕ್ಷತಾ ಕ್ರಮವಾಗಿ ನೆರವಾಗಲಿದೆ ಎಂದು ಸಚಿವಾಲಯ ವಿವರಿಸಿದೆ.
ಸೆಪ್ಟೆಂಬರ್ 8 ರಂದು ಈ ಸಂಬಂಧ ಕರಡು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಹೊಸ ನಿಯಮದ ಕುರಿತು ಸಾರ್ವಜನಿಕರು ಹಾಗೂ ಔಷಧ ಕ್ಷೇತ್ರದ ಪಾಲುದಾರರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕರು ತಮ್ಮ ಸಲಹೆ-ಅಭಿಪ್ರಾಯಗಳನ್ನು ಆರೋಗ್ಯ ಸಚಿವಾಲಯದ ಔಷಧ ವಿಭಾಗದ ಅಂಡರ್ ಸೆಕ್ರೆಟರಿಯವರಿಗೆ ಅಂಚೆ ಮೂಲಕ ಅಥವಾ drugsdiv-mohfw@gov.in ವಿಳಾಸಕ್ಕೆ ಇಮೇಲ್ ಮೂಲಕ ಕಳುಹಿಸಬಹುದಾಗಿದೆ.











