ಮಹಾನ್ ವಿದ್ವಾಂಸ ಹಾಗೂ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯರು ತಮ್ಮ ‘ಚಾಣಕ್ಯ ನೀತಿ’ಯಲ್ಲಿ ಮಾನವ ಜೀವನ, ಸಂಬಂಧಗಳು ಹಾಗೂ ಸಮಾಜದ ಕುರಿತು ಆಳವಾದ ಒಳನೋಟಗಳನ್ನು ನೀಡಿದ್ದಾರೆ. ಅವರು ತಿಳಿಸಿರುವ ಸಲಹೆಗಳು ಇಂದಿನ ಆಧುನಿಕ ಕಾಲಕ್ಕೂ ಅತ್ಯಂತ ಪ್ರಸ್ತುತ.
ಚಾಣಕ್ಯರ ಪ್ರಕಾರ, ಸಮಾಜದಲ್ಲಿ ಕೆಲವೊಂದು ವ್ಯಕ್ತಿತ್ವದ ಜನರಿದ್ದು, ಅವರು ವಿಷಕಾರಿ ಹಾವಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದಾರೆ. ಅಂತಹವರಿಂದ ಸದಾ ಅಂತರ ಕಾಯ್ದುಕೊಳ್ಳುವುದು ಒಳಿತು ಎಂದು ಚಾಣಕ್ಯರು ಎಚ್ಚರಿಸಿದ್ದಾರೆ.
ಚಾಣಕ್ಯರ ಪ್ರಕಾರ ಯಾರೆಲ್ಲ ಅಪಾಯಕಾರಿ?

ಮುಖಸ್ತುತಿ ಮಾಡುವ ಕಪಟಿಗಳು: ಕೆಲವರು ಮುಖದ ಮೇಲೆ ನಗು ಚೆಲ್ಲುತ್ತಾ ಸಿಹಿಯಾಗಿ ಮಾತನಾಡುತ್ತಾರೆ, ಆದರೆ ಬೆನ್ನ ಹಿಂದೆ ಕುತಂತ್ರ ನಡೆಸಿ ಹಳ್ಳ ತೋಡುತ್ತಾರೆ. ಇಂಥವರನ್ನು ಎಂದಿಗೂ ನಂಬಬಾರದು.
ಅಸೂಯೆ–ದ್ವೇಷ ಹೊಂದಿರುವವರು: ನಿಮ್ಮ ಏಳಿಗೆಯನ್ನು ಕಂಡು ಒಳಗೊಳಗೆ ಅಸೂಯೆ ಪಡುವವರ ಬಗ್ಗೆ ಸದಾ ಜಾಗರೂಕರಾಗಿರಬೇಕು. ಇಂಥವರು ಅವಕಾಶ ಸಿಕ್ಕಾಗ ನಿಮಗೆ ಹಾನಿ ಮಾಡಲು ಹಿಂಜರಿಯುವುದಿಲ್ಲ.
ಸ್ವಾರ್ಥಿಗಳು: ಕೇವಲ ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ಸಂಬಂಧಗಳನ್ನು ಬೆಳೆಸುವವರಿಂದ ದೂರವಿರಿ. ತಮ್ಮ ಸ್ವಾರ್ಥ ಈಡೇರಿದ ತಕ್ಷಣ ಇವರು ಕೈಕೊಡುತ್ತಾರೆ ಹಾಗೂ ತಮ್ಮ ಕೆಲಸ ಸಾಧನೆಗಾಗಿ ಯಾವುದೇ ಮಟ್ಟಕ್ಕೂ ಇಳಿಯಬಲ್ಲರು.
ಹಣ ಮತ್ತು ಅಂತಸ್ತನ್ನು ನೋಡಿ ಬರುವವರು: ನಿಮ್ಮ ಬಳಿ ಇರುವ ಹಣ, ಅಧಿಕಾರ ಅಥವಾ ಪ್ರತಿಷ್ಠೆಯನ್ನು ನೋಡಿ ಮಾತ್ರ ಸ್ನೇಹ ಬೆಳೆಸುವವರು ನಿಮ್ಮ ಕಷ್ಟದ ಸಮಯದಲ್ಲಿ ಜೊತೆಗಿರುವುದಿಲ್ಲ. ಪರಿಸ್ಥಿತಿ ಬದಲಾದಾಗ ಇವರು ಮೊದಲಿಗೆ ಬೆನ್ನು ತಿರುಗಿಸುತ್ತಾರೆ.











