ಬೆಂಗಳೂರು.ಸೆಪ್ಟೆಂಬರ್.15: ಮಕ್ಕಳ ಕೈಯಲ್ಲಿ ದುಡಿಮೆಯ ಭಾರವಲ್ಲ, ಪುಸ್ತಕ ಮತ್ತು ಪೆನ್ನು ಇರಬೇಕು ಎಂಬ ಧ್ಯೇಯದೊಂದಿಗೆ ರಾಜ್ಯ ಸರ್ಕಾರ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ಈವರೆಗೆ ಒಟ್ಟು 800 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.
ಬಾಲ್ಯವು ಕೆಲಸದ ಸ್ಥಳಗಳಲ್ಲಿ ಕಳೆಯದೆ ಶಾಲೆಯ ಅಂಗಳದಲ್ಲಿ ಕಳೆಯಬೇಕು ಎಂಬ ಉದ್ದೇಶದಿಂದ ಸರ್ಕಾರದ ಸೂಚನೆಯ ಮೇರೆಗೆ ರಾಜ್ಯಾದ್ಯಂತ ವ್ಯಾಪಕ ತಪಾಸಣೆ ನಡೆಸಲಾಗಿದೆ. ಸೆಪ್ಟೆಂಬರ್ 12ರವರೆಗೆ ಒಟ್ಟು 16,951 ವಿವಿಧ ಸ್ಥಳಗಳು, ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ದುಡಿಮೆಗೆ ನೂಕಲ್ಪಟ್ಟಿದ್ದ ನೂರಾರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಮಕ್ಕಳ ಕೈಯಲ್ಲಿ ದುಡಿಮೆಯ ಭಾರವಲ್ಲ, ಪುಸ್ತಕ-ಪೆನ್ನು ಇರಬೇಕು. ಅವರ ಬಾಲ್ಯವು ಕೆಲಸದ ಸ್ಥಳಗಳಲ್ಲಿ ಕಳೆಯದೆ, ಶಾಲೆಯಲ್ಲಿ ಕಳೆಯಬೇಕು. ಈ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ಅವರ ಸೂಚನೆಯಂತೆ ರಾಜ್ಯಾದ್ಯಂತ ಬಾಲಕಾರ್ಮಿಕ ಪದ್ಧತಿ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸೆಪ್ಟೆಂಬರ್ 12ರವರೆಗೆ 16,951… pic.twitter.com/a8ZAUtmW6I
— DIPR Karnataka (@KarnatakaVarthe) September 14, 2026

ಜಿಲ್ಲಾವಾರು ರಕ್ಷಣಾ ಕಾರ್ಯಾಚರಣೆಯ ವಿವರ
ಬೆಂಗಳೂರು: 5,897 ಸ್ಥಳಗಳಲ್ಲಿ ಪರಿಶೀಲನೆ ನಡೆಸಿ, ಅತಿ ಹೆಚ್ಚು ಅಂದರೆ 503 ಮಕ್ಕಳನ್ನು ರಕ್ಷಿಸಲಾಗಿದೆ.
ವಿಜಯಪುರ: 1,156 ಕಡೆ ತಪಾಸಣೆ ನಡೆಸಿ 72 ಮಕ್ಕಳನ್ನು ರಕ್ಷಿಸಲಾಗಿದೆ.
ತುಮಕೂರು: 660 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ 33 ಮಕ್ಕಳನ್ನು ರಕ್ಷಿಸಲಾಗಿದೆ.
ಬೆಳಗಾವಿ: 592 ಸ್ಥಳಗಳಲ್ಲಿ ಪರಿಶೀಲನೆ ನಡೆಸಿ 12 ಮಕ್ಕಳನ್ನು ರಕ್ಷಿಸಲಾಗಿದೆ.
ನಾಡಿನ ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಗೌರವಯುತ ಭವಿಷ್ಯವನ್ನು ಖಚಿತಪಡಿಸುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದ್ದು, ಬಾಲಕಾರ್ಮಿಕ ಪದ್ಧತಿಗೆ ಸಂಪೂರ್ಣ ಕಡಿವಾಣ ಹಾಕಲು ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ತಿಳಿಸಲಾಗಿದೆ.













