ಚಿತ್ರದುರ್ಗ : ನಗರದಲ್ಲಿರುವ ಡಾ. ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ₹6 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಲ್ಲಿಸಿದ್ದ ಮನವಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇತ್ತೀಚೆಗೆ ಭವನಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಶೀಘ್ರವೇ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕರಿಗೆ ಭರವಸೆ ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ 2016-17ನೇ ಸಾಲಿನಲ್ಲಿ ₹9.50 ಕೋಟಿ ವೆಚ್ಚದಲ್ಲಿ ಡಾ. ಬಾಬು ಜಗಜೀವನ್ ರಾಮ್ ಭವನದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಅನುದಾನದ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು, ಕಳೆದ 7-8 ವರ್ಷಗಳಿಂದ ಕಟ್ಟಡ ಉದ್ಘಾಟನೆಯಾಗದೆ ಉಳಿದುಕೊಂಡಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರೆ, ಚಿತ್ರದುರ್ಗ ನಗರದ ಜನತೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಸಭೆ-ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗಲಿದೆ ಎಂದು ವಿವರಿಸಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.
ಈ ಮನವಿ ಪತ್ರಕ್ಕೆ ಸ್ಪಂದಿಸಿದ ಸಚಿವ ಕೆ.ಎಚ್. ಮುನಿಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಸಮುದಾಯ ಭವನದ ಪ್ರಸ್ತುತ ಸ್ಥಿತಿಗತಿಗಳನ್ನು ಕೂಲಂಕಷವಾಗಿ ವೀಕ್ಷಿಸಿದರು. ಬಳಿಕ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್. ಆಂಜನೇಯ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಸೂಪರಿಂಟೆಂಡೆಂಟ್ ಎಂಜಿನಿಯರ್ ವಿನಯ್ ಕುಮಾರ್, ಎಕ್ಸಿಕ್ಯೂಟಿವ್ ಎಂಜಿನಿಯರ್ ಸದಾಶಿವಮೂರ್ತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ಮುಖಂಡರಾದ ಮೈಲಾರಪ್ಪ, ನರಸಿಂಹ, ವಕೀಲರಾದ ರವಿಕುಮಾರ್, ಚೇತನ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.










