ದೆಹಲಿ: ‘ಜಮಾಬಂದಿ’ (ಹಕ್ಕುಗಳ ದಾಖಲೆ)ಯಂತಹ ಕಂದಾಯ ದಾಖಲೆಗಳು ಸ್ಥಿರಾಸ್ತಿಯೊಂದರ ಸ್ವಾಧೀನ ಮತ್ತು ಅದರ ನಿರಂತರತೆಯನ್ನು ಸೂಚಿಸಬಹುದೇ ವಿನಾ, ಅವು ಮಾಲೀಕತ್ವದ ಹಕ್ಕನ್ನು ಸೃಷ್ಟಿಸುವುದೂ ಇಲ್ಲ ಅಥವಾ ರದ್ದುಪಡಿಸುವುದೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪಂಜಾಬ್‌ನ ಮುಕ್ತಸರ್‌ನಲ್ಲಿರುವ ಕೃಷಿ ಭೂಮಿಗೆ ಸಂಬಂಧಿಸಿದಂತೆ ದಶಕಗಳಿಂದ ನಡೆಯುತ್ತಿದ್ದ ವಿವಾದದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಅವರಿದ್ದ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ. ಈ ಮೂಲಕ 2011ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಪ್ರಕರಣದಲ್ಲಿ ದಿವಂಗತ ಭಾಗ್ ಸಿಂಗ್ ಪರವಾಗಿ ಮಹಂತ್ ಕಾಶ್ಮೀರ್ ಸಿಂಗ್ ಎಂಬುವವರು, ವಿವಾದಿತ ಜಮೀನನ್ನು ಧರ್ಮಾರ್ಥ ಉದ್ದೇಶಕ್ಕಾಗಿ ದೇರಾ ಭಾಯಿ ಮಸ್ತಾನ್ ಸಿಂಗ್ ಸಂಸ್ಥೆಗೆ ಸಮರ್ಪಿಸಲಾಗಿದೆ ಎಂದು ವಾದಿಸಿದ್ದರು. ಜೊತೆಗೆ, ಧರ್ಮಾರ್ಥ ಕೃಷಿಯ ಕುರಿತಾದ ಕಂದಾಯ ನಮೂದುಗಳನ್ನು ಆಧರಿಸಿ ‘ಪ್ರತಿಕೂಲ ಸ್ವಾಧೀನ’ದ (ಅಡ್ವರ್ಸ್ ಪೊಸೆಷನ್) ಅಡಿಯಲ್ಲಿ ತಮಗೆ ಮಾಲೀಕತ್ವದ ಹಕ್ಕಿದೆ ಎಂದು ಪ್ರತಿಪಾದಿಸಿದ್ದರು.
ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಪೀಠವು, ಕಂದಾಯ ದಾಖಲೆಗಳು ಸ್ವಾಧೀನವನ್ನು ದೃಢಪಡಿಸಬಹುದೇ ಹೊರತು ಮಾಲೀಕತ್ವಕ್ಕೆ ಅಂತಿಮ ಪುರಾವೆಯಾಗಲಾರವು ಎಂದು ಹೇಳಿದೆ. ಯಾವುದೇ ಧಾರ್ಮಿಕ ಅಥವಾ ಚಾರಿಟೇಬಲ್ ಸಂಸ್ಥೆಗೆ ಆಸ್ತಿ ಸಮರ್ಪಣೆಯಾಗಿದೆ ಎಂದು ಸಾಬೀತುಪಡಿಸಲು, ಮಾಲೀಕರು ಆಸ್ತಿಯ ಹಕ್ಕನ್ನು ಶಾಶ್ವತವಾಗಿ ಸಂಸ್ಥೆಗೆ ವಹಿಸಿಕೊಡುವ ಸ್ಪಷ್ಟ ಉದ್ದೇಶವನ್ನು ಹೊಂದಿದ್ದರು ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಕೇವಲ ಸುದೀರ್ಘ ಕಾಲ ಸ್ವಾಧೀನದಲ್ಲಿದ್ದ ಕಾರಣಕ್ಕಾಗಲಿ ಅಥವಾ ಕಂದಾಯ ದಾಖಲೆಗಳಲ್ಲಿ ಧರ್ಮಾರ್ಥವೆಂದು ನಮೂದಾಗಿರುವ ಮಾತ್ರಕ್ಕಾಗಲಿ ಅದು ಮಾಲೀಕತ್ವವಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಪ್ರತಿಕೂಲ ಸ್ವಾಧೀನದ ಹಕ್ಕನ್ನು ಸಾಧಿಸಲು ಕೇವಲ ಸುದೀರ್ಘ ಸ್ವಾಧೀನ ಸಾಕಾಗುವುದಿಲ್ಲ, ಬದಲಿಗೆ ನಿಜವಾದ ಮಾಲೀಕರ ಹಕ್ಕನ್ನು ಸಾರ್ವಜನಿಕವಾಗಿ ನಿರಾಕರಿಸಿ, ಹಗೆತನದ ಸ್ವಾಧೀನ ಆರಂಭವಾದ ನಿಖರ ಸಮಯವನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಪೀಠ ವಿವರಿಸಿದೆ. ಪ್ರತಿಯೊಬ್ಬರೂ ತಮ್ಮ ಸ್ವಂತ ಹಕ್ಕಿನ ಬಲದ ಮೇಲೆ ನ್ಯಾಯ ಪಡೆಯಬೇಕೇ ಹೊರತು ಎದುರಾಳಿಯ ದೌರ್ಬಲ್ಯದ ಆಧಾರದ ಮೇಲಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಕೆಳ ಹಂತದ ನ್ಯಾಯಾಲಯಗಳು ಕಂದಾಯ ದಾಖಲೆಗಳನ್ನೇ ಮಾಲೀಕತ್ವವೆಂದು ಪರಿಗಣಿಸಿ ಕಾನೂನು ದೋಷ ಎಸಗಿದ್ದರಿಂದ ಹೈಕೋರ್ಟ್ ಮಧ್ಯಪ್ರವೇಶಿಸಿದ್ದು ಸರಿ ಎಂದು ತೀರ್ಮಾನಿಸಿ ಮೇಲ್ಮನವಿಯನ್ನು ವಜಾಗೊಳಿಸಿತು.











