ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ವದ ಯಶಸ್ಸು ದಾಖಲಿಸಿದೆ. ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾದ GSLV-F17 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದ್ದು, 2,367 ಕೆ.ಜಿ. ತೂಕದ ಅತ್ಯಾಧುನಿಕ EOS-05 ಭೂ ವೀಕ್ಷಣಾ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಲಾಗಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಮುಂಜಾನೆ GSLV-F17 ರಾಕೆಟ್ ಉಡಾವಣೆ ನಡೆಯಿತು. ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.

ನಿರೀಕ್ಷೆಗೂ ಮೀರಿದ ಕಾರ್ಯಕ್ಷಮತೆ

EOS-05 ಉಪಗ್ರಹವನ್ನು 170 ಕಿ.ಮೀ. x 29,000 ಕಿ.ಮೀ. ಕಕ್ಷೆಗೆ ಸೇರಿಸುವ ಗುರಿಯನ್ನು ಇಸ್ರೋ ಹೊಂದಿತ್ತು. ಆದರೆ ರಾಕೆಟ್ ನಿರೀಕ್ಷೆಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಉಪಗ್ರಹವನ್ನು 171 ಕಿ.ಮೀ. x 31,026 ಕಿ.ಮೀ. ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ ಎಂದು ನಾರಾಯಣನ್ ಹೇಳಿದ್ದಾರೆ.
ದೇಶದ ಅಗತ್ಯಗಳಿಗಾಗಿ ಭೂಮಿಯನ್ನು ನಿರಂತರವಾಗಿ ಮತ್ತು ಸೂಕ್ಷ್ಮವಾಗಿ ವೀಕ್ಷಿಸುವ ಉದ್ದೇಶದಿಂದ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ. ಸುಮಾರು 36,000 ಕಿ.ಮೀ. ಎತ್ತರದ ಜಿಯೋಸಿಂಕ್ರೋನಸ್ ವೇದಿಕೆಯಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ಭೂ ವೀಕ್ಷಣಾ ಉಪಗ್ರಹ ಎಂಬ ವಿಶೇಷತೆಯೂ EOS-05 ಹೊಂದಿದೆ.
ಈ ವರ್ಷದ ಇಸ್ರೋದ ಮೊದಲ ಉಡಾವಣೆ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶ್ರೀಹರಿಕೋಟಾದಿಂದ ನಡೆದಿರುವ ಇದು ಎರಡನೇ ಯಶಸ್ವಿ ಉಡಾವಣೆಯಾಗಿದೆ. ಇದಕ್ಕೂ ಮೊದಲು ಸ್ಕೈರೂಟ್ ಸ್ಟಾರ್ಟಪ್ನ ಉಡಾವಣೆ ನಡೆದಿತ್ತು. ಆದರೆ ಇಸ್ರೋ ಸಂಸ್ಥೆಯ ಮಟ್ಟಿಗೆ ಈ ವರ್ಷದ ಮೊದಲ ಉಡಾವಣೆ ಇದಾಗಿದೆ.
ಈ ವರ್ಷ ಸಂವಹನ ಉಪಗ್ರಹಗಳ ಉಡಾವಣೆ ಸೇರಿದಂತೆ ಗಗನಯಾನ್ ಯೋಜನೆಯ ಎರಡು ಮಾನವರಹಿತ ಪರೀಕ್ಷಾ ಉಡಾವಣೆಗಳನ್ನು ಒಳಗೊಂಡಂತೆ ಒಟ್ಟು ಆರು ಮಿಷನ್ಗಳನ್ನು ಕೈಗೊಳ್ಳುವ ಗುರಿಯನ್ನು ಇಸ್ರೋ ಹೊಂದಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.
ಪ್ರತಿ 30 ನಿಮಿಷಕ್ಕೊಮ್ಮೆ ಹೊಸ ಚಿತ್ರ
EOS-05 ಉಪಗ್ರಹವು ಭಾರತೀಯ ಉಪಖಂಡದ ಮೇಲೆ ನಿರಂತರ ನಿಗಾ ಇಡಲು ಪ್ರಮುಖ ಪಾತ್ರ ವಹಿಸಲಿದೆ. ಸಾಮಾನ್ಯ ಸಂದರ್ಭಗಳಲ್ಲಿ ಪ್ರತಿ 30 ನಿಮಿಷಕ್ಕೊಮ್ಮೆ, ವಿಶೇಷ ಪರಿಸ್ಥಿತಿಗಳಲ್ಲಿ ಕೇವಲ 5 ನಿಮಿಷಗಳ ಅಂತರದಲ್ಲೇ ಹೊಸ ಚಿತ್ರಗಳನ್ನು ಒದಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ತುರ್ತು ಸಂದರ್ಭಗಳಲ್ಲಿ ಈ ಉಪಗ್ರಹದ ಮಾಹಿತಿ ಬಹಳಷ್ಟು ಉಪಯೋಗವಾಗಲಿದೆ. ತೀವ್ರ ಚಂಡಮಾರುತ, ಪ್ರವಾಹ, ಕಾಡ್ಗಿಚ್ಚು ಸೇರಿದಂತೆ ನೈಸರ್ಗಿಕ ವಿಕೋಪಗಳನ್ನು ಮುಂಚಿತವಾಗಿ ಗುರುತಿಸುವುದು, ಹವಾಮಾನ ಬದಲಾವಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಪರಿಸರದ ಸ್ಥಿತಿಗತಿಗಳನ್ನು ನಿಖರವಾಗಿ ಅಧ್ಯಯನ ಮಾಡುವುದು ಇದರ ಪ್ರಮುಖ ಉದ್ದೇಶಗಳಾಗಿವೆ.
ಇದರ ಜೊತೆಗೆ ದೇಶದ ಗಡಿಗಳ ಮೇಲೆ ರಿಯಲ್ಟೈಮ್ ಕಾರ್ಯತಂತ್ರದ ನಿಗಾ ಇಡಲು ಹಾಗೂ ಭೂಮಿಯಲ್ಲಿನ ಬದಲಾವಣೆಗಳನ್ನು ತ್ವರಿತವಾಗಿ ಪತ್ತೆಹಚ್ಚಲು EOS-05 ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.
Mission Success!
GSLV-F17 has successfully accomplished its mission, placing EOS-05 into the intended orbit.
Sharing a few memorable moments from the lift-off.
For more information:https://t.co/VneB2jgZoY#GSLVF17 #EOS05 #ISRO pic.twitter.com/kv0zB6V5Vi
— ISRO (@isro) September 3, 2026














